ಟಿಎಂಸಿ ಸಂಸದ ದಿನೇಶ್ ತ್ರಿವೇದಿ ರಾಜೀನಾಮೆ ಬೆನ್ನಲ್ಲೇ ಬಿಜೆಪಿ ಆಹ್ವಾನ
ಕೋಲ್ಕತ್ತಾ, ಫೆಬ್ರವರಿ.12: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ದಿನೇಶ್ ತ್ರಿವೇದಿಯವರನ್ನು ಭಾರತೀಯ ಜನತಾ ಪಕ್ಷ ಸ್ವಾಗತಿಸಿದೆ.
ಸಂಸದ ದಿನೇಶ್ ತ್ರಿವೇದಿಯಷ್ಟೇ ಅಲ್ಲ, ಪ್ರಾಮಾಣಿಕರಾಗಿ ಇರುವ ಯಾರೊಬ್ಬರೂ ಕೂಡಾ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಇರುವುದಕ್ಕೆ ಇಚ್ಛಿಸುವುದಿಲ್ಲ. ಒಂದು ವೇಳೆ ಅವರು ಬಿಜೆಪಿಗೆ ಸೇರುವುದಾದರೆ ಧಾರಾಳವಾಗಿ ಬರಬಹುದು ಎಂದು ಬಿಜೆಪಿ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಆಹ್ವಾನ ನೀಡಿದ್ದಾರೆ.
ರಾಜ್ಯಸಭಾ ಸ್ಥಾನಕ್ಕೆ ಟಿಎಂಸಿ ಸಂಸದ ದಿನೇಶ್ ತ್ರಿವೇದಿ ರಾಜೀನಾಮೆ
ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯುತ್ತಿದ್ದರೆ ಅದರ ಬಗ್ಗೆ ನಾವಿಲ್ಲಿ ಕುಣಿತು ಏನನ್ನೂ ಮಾತನಾಡದ ಸ್ಥಿತಿಯಲ್ಲಿದ್ದೇವೆ. ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ನಾವಿಲ್ಲಿ ಮಾತನಾಡವುದಕ್ಕೂ ಆಗುತ್ತಿಲ್ಲ. ಈ ಕಾರಣಕ್ಕಾಗಿಯೇ ನಾನು ನನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ರಾಜ್ಯಸಭೆಯಲ್ಲಿ ದಿನೇಶ್ ತ್ರಿವೇದಿ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ದಿನೇಶ್ ತ್ರಿವೇದಿ ಅಸಮಾಧಾನ:
"ರಾಜ್ಯಸಭೆಗೆ ನನ್ನನ್ನು ಕಳುಹಿಸಿ ಕೊಟ್ಟ ಟಿಎಂಸಿ ಪಕ್ಷಕ್ಕೆ ನಾವು ಆಭಾರಿಯಾಗಿದ್ದೇನೆ. ರಾಜ್ಯದಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ ನಾನೇನೂ ಮಾಡದ ಸ್ಥಿತಿಯಲ್ಲಿರುವುದು ಸಾಕಷ್ಟು ನೋವು ಉಂಟು ಮಾಡಿದೆ. ಈ ಸ್ಥಾನದಲ್ಲಿ ಇದ್ದರೂ ನಿನ್ನಿಂದ ಏನನ್ನೂ ಮಾಡಲಾಗದಿದ್ದರೆ, ನೀನೇಕೆ ರಾಜೀನಾಮೆ ಸಲ್ಲಿಸಬಾರದು ಎಂದು ನನ್ನ ಮನಸ್ಸು ಹೇಳುತ್ತಿದೆ. ಹಾಗಾಗಿ ನಾನು ಪಶ್ಚಿಮ ಬಂಗಾಳದ ಜನರೊಂದಿಗೆ ಸೇರಿ ಕೆಲಸ ಮಾಡುವುದಕ್ಕಾಗಿ ಈ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ" ಎಂದು ಸಂಸದ ದಿನೇಶ್ ತ್ರಿವೇದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಭಾಷಣಕ್ಕೆ ದಿನೇಶ್ ತ್ರಿವೇದಿ ಬೆಂಬಲ:
ರಾಜ್ಯಸಭೆಯಲ್ಲಿ ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಭಾಷಣದ ಒಂದು ತುಣುಕನ್ನು ಪೋಸ್ಟ್ ಮಾಡಿರುವ ದಿನೇಶ್ ತ್ರಿವೇದಿ ಅವರು ಬೆಂಬಲ ವ್ಯಕ್ತಪಡಿಸಿದ್ದರು. ವೈಯಕ್ತಿಕವಾಗಿ ನಾನು ಈ ಮಾತನ್ನು ಒಪ್ಪುತ್ತೇನೆ. ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ತೆರಿಗೆ ಪಾವತಿಸುವ ಮೂಲಕ ಹೊಸತನ ಸೃಷ್ಟಿಗೆ ಸಂಪತ್ತಿನ ವಿತರಣೆ ಆಗಬೇಕು. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿದೆ ಎಂದು ಟ್ವೀಟ್ ಮಾಡಿದ್ದರು.