ಮುನಿಯಪ್ಪನನ್ನು ಸೋಲಿಸಲು ನಾವೆಲ್ಲ ಒಂದಾಗಿದ್ದು: ಜೆಡಿಎಸ್ ಶಾಸಕ
ಕೋಲಾರ, ಮೇ 27: ಸತತ ಏಳು ಬಾರಿ ಸಂಸದರಾಗಿ, ಒಮ್ಮೆ ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಕೋಲಾರದ ಕಾಂಗ್ರೆಸ್ ಮುಖಂಡ ಕೆ.ಎಚ್. ಮುನಿಯಪ್ಪ ಅವರ ಆಘಾತಕಾರಿ ಸೋಲಿಗೆ ಮೈತ್ರಿ ಸರ್ಕಾರದ ಮಿತ್ರಪಕ್ಷಗಳ ಮುಖಂಡರೇ ಕಾರಣಕರ್ತರೇ?
ರಾಜಕೀಯ ವಲಯದಲ್ಲಿ ಈ ವಿಚಾರ ತೀವ್ರ ಚರ್ಚೆಯಲ್ಲಿ ಇರುವಾಗಲೇ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರು ಅದನ್ನು ಒಪ್ಪಿಕೊಂಡಿದ್ದಾರೆ.
ಕೆ.ಎಚ್. ಮುನಿಯಪ್ಪ ಅವರನ್ನು ಸೋಲಿಸುವ ಸಲುವಾಗಿಯೇ ನಾವೆಲ್ಲರೂ ಒಂದಾಗಿದ್ದೆವು ಎಂದು ಅವರು ಹೇಳಿಕೆ ನೀಡಿದ್ದಾರೆ.

ಮುನಿಯಪ್ಪ ಅವರನ್ನು ಸೋಲಿಸಲೆಂದೇ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದವರು ಒಂದಾಗಿದ್ದೆವು. ಈಗ ಯಾರೂ ಪಕ್ಷ ಬದಲಿಸುವ ನಿರ್ಧಾರ ಮಾಡಿಲ್ಲ. ಎರಡೂ ಪಕ್ಷದವರು ಆಯಾ ಪಕ್ಷಗಳಲ್ಲಿಯೇ ಮುಂದುವರಿಯಲಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸಲಿದ್ದಾರೆ ಎಂದು ಶ್ರೀನಿವಾಸಗೌಡ ಹೇಳಿದ್ದಾರೆ.
ಮುನಿಯಪ್ಪ ಅವರು ಕೋಲಾರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವುದರ ವಿರುದ್ಧ ಶ್ರೀನಿವಾಸಗೌಡ, ಕಾಂಗ್ರೆಸ್ ಮುಖಂಡರಾದ ಕೊತ್ತನೂರು ಮಂಜುನಾಥ್, ಎಚ್. ನಾಗೇಶ್ ಮುಂತಾದವರು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು.
ಮುನಿಯಪ್ಪ ಅವರ ಪರ ಪ್ರಚಾರ ಮಾಡುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸೂಚನೆ ನೀಡಿದ್ದರೂ ಅದಕ್ಕೆ ಕ್ಯಾರೇ ಎನ್ನದೆ ನಿರಾಕರಿಸಿದ್ದರು. ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಅವರ ಗೆಲುವಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಕೊಡುಗೆ ದೊಡ್ಡ ಮಟ್ಟದಲ್ಲಿದೆ ಎನ್ನಲಾಗಿದೆ.












Click it and Unblock the Notifications