Kempegowda Jayanti: ಕೋಲಾರದಲ್ಲಿ ಕೋಲಾಹಲ: ಮಸೀದಿ ಎದುರು ಗಲಾಟೆ!
ಕೋಲಾರ ಜೂನ್ 27: ಕೋಲಾರದಲ್ಲಿಂದು ನಾಡಪ್ರಭು ಕೆಂಪೇಗೌಡರ 515ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ವೇಳೆ ಮಸೀದಿ ಎದುರು ಗಲಾಟೆ ನಡೆದಿದೆ.
ವಿವಿಧ ವಾದ್ಯಗಳೊಂದಿಗೆ ಕೇಂಪೇಗೌಡರ ಪಲ್ಲಕ್ಕಿಯನ್ನು ಕೋಲಾರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುತ್ತಿತ್ತು. ಮೆರವಣಿಗೆ ಮಸೀದಿ ಬಳಿ ಬರುತ್ತಿದ್ದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ.

ಹೌದು... ಕೋಲಾರದ ಅರಹಳ್ಳಿ ಗೇಟಿ ಬಳಿ ಈ ಘಟನೆ ನಡೆದಿದೆ. ಮಸೀದಿ ಬಳಿ ಡಿಜೆ ಸೌಂಡ್ ಹಾಕಿದ್ದಕ್ಕೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಜೋರಾಗಿ ಗಲಾಟೆ ನಡೆದಿದೆ. ಕೂಡಲೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.
ಇನ್ನೂ ನಾಡಪ್ರಭು ಕೆಂಪೇಗೌಡ ಜಯಂತಿ ಮೆರವಣಿಗೆ ವೇಳೆ ಮಂಗಳಮುಖಿಯರು ಅಸಭ್ಯವಾಗಿ ನೃತ್ಯ ಮಾಡಿದ್ದಾರೆ. ತುಂಡು ಬಟ್ಟೆ ತೊಟ್ಟು ಅಶ್ಲೀಲ ನೃತ್ಯ ಮಾಡಿದ್ದಾರೆ. ಇದರಿಂದ ಮಹಿಳೆಯರು, ಮಕ್ಕಳು, ಹಿರಿಯರಿಗೆ ಮುಜುಗರವಾಗಿದೆ ಎಂಬ ಆಕ್ರೋಶ ಕೇಳಿ ಬಂದಿದೆ. ಇದಲ್ಲದೆ ಮತ್ತೊಂದೆಡೆ ಕೆಂಪೇಗೌಡ ಜಯಂತಿ ಆಚರಣೆಗೆ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಹ್ವಾನಿಸಿಲ್ಲ ಎಂದು ಕಾರ್ಯಕರ್ತರು ಆಕ್ರೋಶಗೊಂಡ ಘಟನೆ ನಡೆದಿದೆ.
ಎಚ್‌ಡಿ ದೇವೇಗೌಡ, ಎಚ್‌ಡಿಕೆಗೆ ಆಹ್ವಾನ ನೀಡದಿದ್ದಕ್ಕೆ ಆಕ್ರೋಶ!
ಕೆಂಪೇಗೌಡರ ಜಯಂತಿಗೆ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಆಹ್ವಾನಿಸಿಲ್ಲ ಎಂಬ ವಿಚಾರಕ್ಕೆ ಜೆಡಿಎಸ್ ಕಾರ್ಯಕರ್ತರು ಇಂದು ಕೆಂಪೇಗೌಡ ಸ್ಥಬ್ಧಚಿತ್ರ ಮೆರವಣಿಗೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧಿಕ್ಕಾರ ಕೂಗಿದ್ದಾರೆ.

ಇದರಿಂದಾಗಿ ಶಾಸಕ ಕೆತ್ತೂರು ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಮುಂದೆಯೇ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಗಳ ನಡೆಯಿತು. ಪರಸ್ಪರ ಹೊಡೆದಾಟಕ್ಕೂ ಮುಂದಾದರು. ಪೊಲೀಸರು ಮಧ್ಯ ಪ್ರವೇಶಿಸಿ ಜಗಳ ತಡೆದರು.
ಕಾರ್ಯಕ್ರಮದ ವೇದಿಕೆ ಬಳಿ ಸೇರಿದ ಜೆಡಿಎಸ್‌ನ ಕೆಲ ಕಾರ್ಯಕರ್ತರು ಕುಮಾರಸ್ವಾಮಿ ಹಾಗೂ ದೇವೇಗೌಡರ ಹೆಸರು ಹೇಳುವಂತೆ ಸಂಘಟಕರ ಬಳಿ ಒತ್ತಾಯಿಸಿದರು. ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಧಿಕ್ಕಾರ ಕೂಗಿದರು. ಆಗ ವೇದಿಕೆಯಿಂದ ಮೇಲೆದ್ದು ಬಂದ ಕಾಂಗ್ರೆಸ್‌ನ ಎಂಎಲ್‌ಸಿ ಅನಿಲ್ ಕುಮಾರ್, 'ನೀವಿಲ್ಲಿ ರಾಜಕೀಯ ಮಾಡಲು ಬಂದಿದ್ದರೆ ನನಗೂ ರಾಜಕೀಯ ಮಾಡಲು ಬರುತ್ತದೆ. ನೋಡ್ತೀರಾ'? ಎಂದು ಜೆಡಿಎಸ್ ಮುಖಂಡರಿಗೆ ಅವಾಜ್ ಹಾಕಿದರು.
ಆಗ ಅನಿಲ್ ಕುಮಾರ್ ಅವರತ್ತ ಕೈತೋರಿಸಿ ಜೆಡಿಎಸ್ ಮುಖಂಡರು ಜೋರಾಗಿ ಕೂಗಿದರು. ಆಗ ಕಾಂಗ್ರೆಸ್ ಯುವ ಮುಖಂಡ ಜನಪನಹಳ್ಳಿಯಲ್ಲಿ ನವೀನ್ ಕುಮಾರ್ ಹೊಡೆದಾಟಕ್ಕೆ ಮುಂದಾದರು. ಈ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ನಡುವೆ ತಳ್ಳಾಟ, ನೂಕಾಟ ನಡೆದಿದೆ.
ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಶಾಖಾ ಮಠದ ಚಿಕ್ಕಬಳ್ಳಾಪುರದ ಮಂಗಳಾನಂದನಾಥ್ ಸ್ವಾಮೀಜಿ ಚಾಲನೆ ನೀಡಿದರು. 'ಜಯಂತಿಯಲ್ಲಿ ಗೊಂದಲ ಮಾಡಿಕೊಂಡರೆ ಕೆಂಪೇಗೌಡರಿಗೆ ಅಗೌರವ ತೋರಿದಂತೆ. ಸಣ್ಣಪುಟ್ಟ ಸಮಸ್ಯೆಯನ್ನು ಹಿರಿಯರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ದೇವೇಗೌಡ ಹಾಗೂ ಕುಮಾರಣ್ಣ ಕೊಡಗೆ ಅಪಾರ' ಎಂದರು.












Click it and Unblock the Notifications