ಮಾಲೂರಿನಲ್ಲಿ ಕಮಲ ಅರಳಿಸಲು ಬಂಡಾಯದ ಬಿಸಿ!
ಕೋಲಾರ, ಏಪ್ರಿಲ್ 30; ಕೋಲಾರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಚಿತ್ರಣ ಅಂತಿಮಗೊಂಡಿದೆ. ಅಭ್ಯರ್ಥಿಗಳು ಬಿರುಸಿನಿಂದ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಪೈಪೋಟಿಯ ನಡುವೆಯೇ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಕಮಲ ಅರಳಿಸಬೇಕು ಎಂದು ಪಕ್ಷ ತಂತ್ರ ರೂಪಿಸುತ್ತಿದೆ.
ಈ ಬಾರಿಯ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಬಿಜೆಪಿಯಿಂದ ಕೆ. ಎಸ್. ಮಂಜುನಾಥ ಗೌಡ, ಕಾಂಗ್ರೆಸ್‌ನಿಂದ ಕೆ. ವೈ. ನಂಜೇಗೌಡ, ಜೆಡಿಎಸ್‌ನಿಂದ ರಾಮೇಗೌಡ ಅಭ್ಯರ್ಥಿಗಳು. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹೂಡಿ ವಿಜಯ್ ಕುಮಾರ್ ಟಿಕೆಟ್ ಕೈತಪ್ಪಿದ ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕ್ಷೇತ್ರದಲ್ಲಿ ಕಮಲ ಅರಳಿಸಲು ಇದೇ ಅಡ್ಡಿ ಬರುವ ನಿರೀಕ್ಷೆ ಇದೆ.

ಮಾಲೂರು ಕ್ಷೇತ್ರ ಕಾಂಗ್ರೆಸ್ ಪಕ್ಷ್ದ ಭದ್ರಕೋಟೆ ಎಂದು ಹೇಳಬಹುದು. 14 ಚುನಾವಣೆಗಳಲ್ಲಿ 8 ಬಾರಿ ಪಕ್ಷ ಗೆದ್ದಿದೆ. ಜೆಡಿಎಸ್ ಒಂದು ಬಾರಿ, ಬಿಜೆಪಿ 2 ಬಾರಿ ಗೆಲುವು ಸಾಧಿಸಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಬಾರಿ ಕೋಲಾರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ ಪಕ್ಷದ ಸೂಚನೆಯಂತೆ ಅವರು ವರುಣದಲ್ಲಿ ಮಾತ್ರ ಕಣಕ್ಕಿಳಿದಿದ್ದಾರೆ.
2004ರಲ್ಲಿ ಗೆಲುವು; ಬಿಜೆಪಿ ಮಾಲೂರಿನಲ್ಲಿ 2004ರಲ್ಲಿ ಮೊದಲ ಬಾರಿಗೆ ಗೆದ್ದಿತು. ಎಸ್. ಎನ್. ಕೃಷ್ಣಯ್ಯ ಶೆಟ್ಟಿ ಕಾಂಗ್ರೆಸ್‌ನ ಎ. ನಾಗರಾಜುರನ್ನು 26,856 ಮತಗಳ ಅಂತರದಿಂದ ಸೋಲಿಸಿದರು. 2008ರಲ್ಲಿಯೂ ಅವರು ಗೆದ್ದರು. ಬಿಜೆಪಿ ಸರ್ಕಾರ ರಚನೆಗೊಂಡಾಗ ಅವರು ಸಚಿವರೂ ಆದರು. 2013 ಮತ್ತು 2018ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ. ವೈ. ನಂಜೇ ಗೌಡ ಗೆಲವು ಕಂಡಿದ್ದಾರೆ.

2018ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ 57,762 ಮತಗಳನ್ನು ಪಡೆದಿದ್ದ ಕೆ. ಎಸ್. ಮಂಜುನಾಥ ಗೌಡ ಈ ಬಾರಿಯ ಬಿಜೆಪಿ ಅಭ್ಯರ್ಥಿ. ಕಳೆದ ಚುನಾವಣೆಯಲ್ಲಿ 23,889 ಮತಗಳನ್ನು ಪಡೆದಿದ್ದ ಬಿಜೆಪಿಯ ಕೃಷ್ಣಯ್ಯ ಶೆಟ್ಟಿ ಬೆಂಗಳೂರಿನ ಗಾಂಧಿನಗರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಈ ಬಾರಿ ಸಪ್ತಗಿರಿ ಗೌಡಗೆ ಟಿಕೆಟ್ ನೀಡಿದೆ. ಅಂತಿಮವಾಗಿ ಕೃಷ್ಣಯ್ಯ ಶೆಟ್ಟಿ ಗಾಂಧಿ ನಗರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಮಾಲೂರು ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಹೂಡಿ ವಿಜಯ್ ಕುಮಾರ್ ಮತ್ತು ಕೆ. ಎಸ್. ಮಂಜುನಾಥ ಗೌಡ ನಡುವೆ ಭಾರೀ ಪೈಪೋಟಿ ಇತ್ತು. ಇಬ್ಬರ ಬೆಂಬಲಿಗರು ಸಹ ಕಿತ್ತಾಟ ಮಾಡಿಕೊಂಡು ಸುದ್ದಿಯಾಗಿದ್ದರು. ಅಂತಿಮವಾಗಿ ಪಕ್ಷ ಕೆ. ಎಸ್. ಮಂಜುನಾಥ ಗೌಡಗೆ ಟಿಕೆಟ್ ನೀಡಿದೆ. ಆದರೆ ಹೂಡಿ ವಿಜಯ್ ಕುಮಾರ್ ಸ್ವಾಭಿಮಾನಿ ಮಾಲೂರು ಎಂಬ ಘೋಷಣೆಯೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಆಟೋ ಚಿನ್ಹೆ ಪಡೆದು ಕಣದಲ್ಲಿ ಉಳಿದಿದ್ದಾರೆ. ಆದ್ದರಿಂದ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ.
ಬಂಡಾಯದ ಜೊತೆ ಮಾಲೂರು ಬಿಜೆಪಿ ಘಟಕದಲ್ಲಿನ ಅಸಮಾಧಾನವೂ ಚುನಾವಣೆಯಲ್ಲಿ ಹಿನ್ನಡೆ ಉಂಟು ಮಾಡುವ ನಿರೀಕ್ಷೆ ಇದೆ. ಜೆಡಿಎಸ್‌ನಲ್ಲಿದ್ದ ಕೆ. ಎಸ್. ಮಂಜುನಾಥ ಗೌಡ ಬಿಜೆಪಿ ಸೇರಲು ಪ್ರಭಾಕರ್, ವೆಂಕಟೇಶ್ ಸೇರಿದಂತೆ ಕೆಲವು ಮೂಲ ಬಿಜೆಪಿಗರು ವಿರೋಧ ಮಾಡಿದ್ದರು. ಆದರೆ ಅವರು ಪಕ್ಷ ಸೇರಿ ಈ ಬಾರಿಯ ಚುನಾವಣೆಯ ಟಿಕೆಟ್ ಸಹ ಪಡೆದಿದ್ದಾರೆ.
ಯವ ನಾಯಕರಾದ ಬಿಬಿಎಂಪಿಯ ಮಾಜಿ ಸದಸ್ಯ ಹೂಡಿ ವಿಜಯ ಕುಮಾರ್ ಬಿಜೆಪಿ ಟಿಕೆಟ್ ಮೇಲೆ ಮೊದಲಿನಿಂದಲೂ ಕಣ್ಣಿಟ್ಟಿದ್ದರು. ನಾಲ್ಕು ವರ್ಷಗಳಿಂದ ಬಿಜೆಪಿ ಕಟ್ಟುತ್ತಿದ್ದೇನೆ ಟಿಕೆಟ್ ಕೊಡಿ ಎಂಬ ಬೇಡಿಕೆಯನ್ನು ವರಿಷ್ಠರ ಮುಂದೆ ಇಟ್ಟಿದ್ದರು. ಆದರೆ ಟಿಕೆಟ್ ಕೈತಪ್ಪದ ಬಳಿಕ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ.
ಮಾಜಿ ಶಾಸಕ ಕೆ. ಎಸ್. ಮಂಜುನಾಥ ಗೌಡ ಪಕ್ಷ ಸೇರ್ಪಡೆ ಕಾರ್ಯಕ್ರಮ ಹೂಡಿ ವಿಜಯ್ ಕುಮಾರ್ ಗೈರಾಗಿದ್ದರು. ಮಾಲೂರು ಬಿಜೆಪಿಯಲ್ಲಿ ಅಸಮಾಧಾನವಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿತ್ತು. ಈಗ ಬಿಜೆಪಿ ಟಿಕೆಟ್ ಕೈತಪ್ಪಿದ ಬಳಿಕ ಬಂಡಾಯದ ಬಿಸಿ ಏರಿದೆ. ಮೇ 10ರಂದು ನಡೆಯುವ ಚುನಾವಣೆಯಲ್ಲಿ ಇದು ಹೇಗೆ ಪ್ರಭಾವ ಬೀರಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications