ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯ; ಗರ್ಭಿಣಿ ಸಾವು, ವೈದ್ಯರ ವಿರುದ್ಧ ಪ್ರಕರಣ
ಕೋಲಾರ, ಏಪ್ರಿಲ್. 03: ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ವೈದ್ಯರ ವಿರುದ್ಧ ಸೋಮವಾರ ಪ್ರಕರಣ ದಾಖಲಾಗಿದೆ. ಘಟನೆ ಕುರಿತಂತೆ ಜಿಲ್ಲಾ ಆರೋಗ್ಯಾಧಿಕಾರಿ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಗರ್ಭಿಣಿ ಮಹಿಳೆಯ ಸಾವಿಗೆ ವೈದ್ಯರೇ ಕಾರಣ ಎಂದು ಕುಟುಂಬದವರು ಆರೋಪಿಸಿದ ಕಾರಣ ಪೊಲೀಸರು ಸೋಮವಾರ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಬಂಗಾರಪೇಟೆ ನಗರದ ವಿಜಯನಗರ ಲೇಔಟ್ ನಿವಾಸಿ ಭಾರತಿ (26) ಎಂದು ಗುರುತಿಸಲಾಗಿದ್ದು, ಮೃತ ಮಹಿಳೆ ಭಾನುವಾರ ಎರಡನೇ ಮಗುವಿಗೆ ಜನ್ಮ ನೀಡಿ, ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ್ದಾರೆ.

"ಇದು ನನ್ನ ಹೆಂಡತಿಗೆ ಎರಡನೇ ಹೆರಿಗೆಯಾಗಿದೆ. ಆಕೆ ಮೃತರಾಗುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಆಕೆ ಆರೋಗ್ಯವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಆದರೆ ವೈದ್ಯರ ನಿರ್ಲಕ್ಷ್ಯ ಆಕೆಯ ಜೀವವನ್ನೇ ಬಲಿತೆಗೆದುಕೊಂಡಿದೆ' ಎಂದು ಮೃತ ಭಾರತಿ ಅವರ ಪತಿ ಮಂಜುನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಮಂಜುನಾಥ್ ಹಾಗೂ ಸಂಬಂಧಿಕರು ಆಸ್ಪತ್ರೆ ಎದುರು ಭಾನುವಾರ ಪ್ರತಿಭಟನೆ ನಡೆಸಿದ್ದರು.
ವೈದ್ಯರು ಆಕೆಗೆ ಇಂಜೆಕ್ಷನ್ ನೀಡಿ ನಂತರ ಸಿಸೇರಿಯನ್ ಮಾಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಚುಚ್ಚುಮದ್ದಿನ ನಂತರ ಆಕೆಗೆ ಉಸಿರಾಟದ ತೊಂದರೆಗಳು ಕಾಣಿಸಿಕೊಂಡು, ಆಕೆಯ ಸ್ಥಿತಿ ಹದಗೆಟ್ಟಿತ್ತು. ಬಳಿಕ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಲಾಗಿತ್ತು ಎನ್ನಲಾಗಿದೆ. ಕುಟುಂಬಸ್ಥರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಗರ್ಭಿಣಿ ಭಾರತಿ ಅವರು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗ ಮಧ್ಯೆ ಮೃತಪಟ್ಟರೂ, ಹೊಟ್ಟೆಯಲ್ಲಿ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದ ಮಗುವನ್ನು ಬದುಕಿಸಿಕೊಳ್ಳುವಲ್ಲಿ ಖಾಸಗಿ ಆಸ್ಪತ್ರೆ ವೈದ್ಯರು ಯಶಸ್ವಿ ಆಗಿದ್ದಾರೆ. ಭಾರತಿ ತಾನು ಜೀವ ಬಿಟ್ಟರು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನು ಮಗು ಆರೋಗ್ಯವಾಗಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಗದೀಶ್ ಮಾತನಾಡಿ, ಮೃತ ರೋಗಿಯ ಕುಟುಂಬದವರಿಂದ ನನಗೆ ಯಾವುದೇ ದೂರು ಬಂದಿಲ್ಲ. ನನಗೆ ವಿಷಯ ಗಮನಕ್ಕೆ ಬಂದಿದ್ದು, ಈ ಬಗ್ಗೆ ವಿವರವಾದ ವಿಚಾರಣೆಗೆ ಆದೇಶಿಸಿದ್ದೇನೆ ಎಂದಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲು ಜಿಲ್ಲಾ ಸಂತಾನೋತ್ಪತ್ತಿ ಮಕ್ಕಳ ಆರೋಗ್ಯ ಅಧಿಕಾರಿ (ಆರ್‌ಸಿಒ) ಡಾ.ವಿಜಯ್‌ಕುಮಾರ್ ಮತ್ತು ಇತರ ಇಬ್ಬರು ವೈದ್ಯರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಘಟನೆ ಕುರಿತಂತೆ ಮುಂದಿನ ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ. ಈ ಹಂತದಲ್ಲಿ, ನಾವು ಸಾವಿನ ಕಾರಣವನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್ ಹೇಳಿದ್ದಾರೆ.
ಇನ್ನು, ಮೃತ ಮಹಿಳೆಯ ಪತಿ ಮಂಜುನಾಥ್ ನೀಡಿದ ದೂರಿನ ಮೇರೆಗೆ ನಾವು ಸಿಆರ್‌ಪಿಸಿ 174 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಕ್ರಮ ಕೈಗೊಳ್ಳಲು ವೈದ್ಯರ ಸಮಿತಿಯ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಬಂಗಾರಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಬಿ ಸಂಜೀವರಾಯಪ್ಪ ತಿಳಿಸಿದ್ದಾರೆ.












Click it and Unblock the Notifications