Mulabagilu Dose: ಕೋಲಾರದಲ್ಲಿ ಮುಳಬಾಗಿಲು ದೋಸೆ ಬಗ್ಗೆ ಪ್ರಧಾನಿ ಮೋದಿ ಮಾತು : ಏನಿದರ ವಿಶೇಷ?
ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆ ಕೋಲಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. ಏಪ್ರಿಲ್ 30ರಂದು ಭಾನುವಾರ ಕೋಲಾರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಪ್ರಸಿದ್ಧ ಮುಳಬಾಗಿಲು ದೋಸೆಯನ್ನು ನೆನೆಯುವ ಮೂಲಕ ಗಮನ ಸೆಳೆದರು.
ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುವ ಸಂದರ್ಭದಲ್ಲಿ, ಕೋಲಾರದ ಅಭಿವೃದ್ಧಿಗೆ ಸಂಪರ್ಕ ಮುಖ್ಯವಾಗುತ್ತದೆ, ಎಕ್ಸ್‌ಪ್ರೆಸ್ ಹೈವೆ ನಿರ್ಮಾಣವಾಗುತ್ತಿದ್ದು, ಹಲವು ಕೈಗಾರಿಕೆಗಳು ಕೋಲಾರದತ್ತ ಬರುತ್ತಿದೆ. ಇದರಿಂದ ಮುಳಬಾಗಿಲು ದೋಸೆ ದೇಶದ ಎಲ್ಲೆಡೆ ಸಿಗುವಂತಾಗಿದೆ ಎಂದು ಹೇಳುವ ಮೂಲಕ ಗಮನ ಸೆಳೆದರು. ಹೆದ್ದಾರಿಗಳ ನಿರ್ಮಾಣದಿಂದ ಎಲ್ಲಾ ಕಡೆ ಸಂಪರ್ಕ ಸಾಧಿಸಲು ಸಾಧ್ಯವಾಗಿದ್ದು, ಮುಳಬಾಗಿಲು ದೋಸೆಯ ಪರಿಮಳ ದೂರ ದೂರದವರೆಗೆ ಹರಡುವಂತೆ ಮಾಡಿದೆ ಎಂದರು.

ಏನಿದು ಮುಳಬಾಗಿಲು ದೋಸೆ ವಿಶೇಷ?
ಸದ್ಯ ಮುಳಬಾಗಿಲು ದೋಸೆ ಎಲ್ಲಾ ಕಡೆ ಪ್ರಸಿದ್ಧವಾಗುತ್ತಿದೆ. ದಾವಣಗೆರೆ ಬೆಣ್ಣೆ ದೋಸೆ ಎಷ್ಟು ಖ್ಯಾತಿಯೋ ಅದೇ ರೀತಿ ತನ್ನದೇ ವಿಭಿನ್ನ ರುಚಿಯಿಂದ ಮುಳಬಾಗಿಲು ದೋಸೆ ಎಲ್ಲಾ ಕಡೆ ಆಹಾರ ಪ್ರಿಯರ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಇಂದು ನೀವು ಬೆಂಗಳೂರಿನಲ್ಲಿ ಕೂಡ ಹಲವು ಭಾಗಗಳಲ್ಲಿ ಮುಳಬಾಗಿಲು ದೋಸೆ ಹೋಟೆಲ್‌ಗಳನ್ನು ಕಾಣಬಹುದು.
ಕೋಲಾರ ಜಿಲ್ಲೆಯ ತಾಲೂಕು ಕೇಂದ್ರವಾದ ಮುಳಬಾಗಿಲು ಈ ರೀತಿಯ ವಿಶಿಷ್ಟ ದೋಸೆಗೆ ಹೆಸರುವಾಸಿಯಾಗಿದೆ. ಅನೇಕ ಫುಡ್ ವ್ಲಾಗರ್, ಪ್ರವಾಸಿಗರು ಇಲ್ಲಿನ ದೋಸೆ, ವಿಶಿಷ್ಟ ರುಚು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಪ್ರಚಾರ ಮಾಡಿದ ನಂತರ ಸದ್ಯ ಪ್ರಸಿದ್ಧವಾಗಿದೆ.
ಈಗ ಪ್ರಧಾನಿ ಮೋದಿ ಕೂಡ ತಮ್ಮ ಭಾಷಣದಲ್ಲಿ ಮುಳಬಾಗಿಲು ದೋಸೆಯ ಪರಿಮಳದ ಬಗ್ಗೆ ಪ್ರಸ್ತಾಪಿಸಿರುವುದು ತಾಲೂಕಿನ ಜನರ ಖುಷಿಗೆ ಕಾರಣವಾಗಿದೆ. ತುಪ್ಪದ ಪರಿಮಳದೊಂದಿದೆ ಆಲೂಗಡ್ಡೆ ಪಲ್ಯ, ರುಚಿಕರವಾದ ಚಟ್ನಿಯೊಂದಿಗೆ ಗರಿ ಗರಿಯಾದ ದೋಸೆಯನ್ನು ಸವಿಯಬೇಕೆಂದರೆ ನೀವು ಒಮ್ಮೆ ಮುಳಬಾಗಿಲುಗೆ ಭೇಟಿ ನೀಡಿ. ಬೆಂಗಳೂರಿನಲ್ಲಿ ಕೂಡ ಹಲವು ಭಾಗಗಳಲ್ಲಿ ಮುಳಬಾಗಿಲು ದೋಸೆ ಲಭ್ಯವಿದೆ, ಒಮ್ಮೆ ಟ್ರೈ ಮಾಡಿ.












Click it and Unblock the Notifications