ಉಪಚುನಾವಣೆ: ಅಚ್ಚರಿಯ ಘೋಷಣೆ ಮಾಡಿದ ಎಂಟಿಬಿ ನಾಗರಾಜು
Recommended Video
ಬೆಂಗಳೂರು, ಆಗಸ್ಟ್ 29: ಅನರ್ಹ ಶಾಸಕ ಎಂಟಿಬಿ ನಾಗರಾಜು ಅವರು ಬಿಜೆಪಿ ಸೇರುತ್ತಾರೆ ಎಂದೇ ಎಣಿಸಲಾಗಿತ್ತು. ಆದರೆ ಆ ಬಗ್ಗೆ ಅಚ್ಚರಿಯ ಘೊಷಣೆಯೊಂದನ್ನು ಅವರು ಮಾಡಿದ್ದಾರೆ.
ಉಪಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡುವುದಾಗಿ ಅವರು ಇಂದು ಹೇಳಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಘೊಷಣೆ ಹೊರಡಿಸಿದರು.
ಕಾಂಗ್ರೆಸ್ ಪಕ್ಷದಿಂದ ಹೊಸಕೋಟೆ ಕ್ಷೇತ್ರದಿಂದ ಆಯ್ಕೆಯಾಗಿ ಮೈತ್ರಿ ಸರ್ಕಾರದಲ್ಲಿ ಮಂತ್ರಿಯೂ ಆಗಿದ್ದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ಉರುಳುವುದರಲ್ಲಿ ಪಾತ್ರ ವಹಿಸಿದ್ದರು. ನಾಗರಾಜು ಅವರ ರಾಜೀನಾಮೆ ಹಿಂದೆ ಬಿಜೆಪಿ ಪಾತ್ರ ಇದೆ ಎನ್ನಲಾಗಿತ್ತು. ಹಾಗಾಗಿ ಅವರು ಬಿಜೆಪಿ ಸೇರುತ್ತಾರೆ ಎಂಬ ನಿರೀಕ್ಷೆಯೂ ಇತ್ತು ಆದರೆ ಅದು ಹುಸಿಯಾಗಿದೆ.

ಹೊಸಕೋಟೆಯಲ್ಲಿ ಬಿಜೆಪಿ-ಕಾಂಗ್ರೆಸ್ ಹಾವು-ಮುಂಗುಸಿ
ಎಂಟಿಬಿ ನಾಗರಾಜು ಅವರು ಬಿಜೆಪಿಯ ಪ್ರಬಲ ಎದುರಾಳಿಯ ವಿರುದ್ಧವೇ ಮೂರು ಬಾರಿ ಗೆದ್ದು ಶಾಸಕರಾದವರು, ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿಯ ಬಿ.ಎನ್.ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜು ನಡುವೆ ತೀರದ ದ್ವೇಷ ಪರಿಸ್ಥಿತಿ ಹೀಗಿರುವಾಗ ಎಂಟಿಬಿ ನಾಗರಾಜು ಬಿಜೆಪಿ ಸೇರಿದರೆ ಬಚ್ಚೇಗೌಡ ಒಪ್ಪಿದರೂ ಕಾರ್ಯಕರ್ತರು ಒಪ್ಪುವುದಿಲ್ಲ ಹಾಗಾಗಿ ಎಂಟಿಬಿ ಈ ನಿರ್ಧಾರ ಮಾಡಿರುವ ಸಾಧ್ಯತೆ ಇದೆ.

ಶರತ್ ಬಚ್ಚೇಗೌಡಗೆ ಟಿಕೆಟ್ ತಪ್ಪಿಸುವುದು ಸುಲಭವಿಲ್ಲ
ಹೊಸಕೋಟೆಯಲ್ಲಿ ಬಚ್ಚೇಗೌಡ ಬಿಜೆಪಿಯನ್ನು ಅರಳಿಸಿದ್ದಾರೆ. ಹಾಗಾಗಿ ಅವರ ಮಗ ಶರತ್ ಬಚ್ಚೇಗೌಡ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸುವುದು ಎಂಟಿಬಿಗೆ ಸುಲಭ ಸಾಧ್ಯವಿಲ್ಲ, ಹಾಗಾಗಿ ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧೆ ಮಾಡುವ ನಿರ್ಣಯಕ್ಕೆ ಬಂದಿರುವ ಸಾಧ್ಯತೆ ಇದೆ.

ಡಿ.ಕೆ.ಶಿವಕುಮಾರ್ ಸವಾಲುವ ಎದುರಿಸುವ ತಂತ್ರ?
'ನನ್ನ ನಿನ್ನ ಭೇಟಿ ಹೊಸಕೋಟೆ ರಣರಂಗದಲ್ಲಿ' ಎಂದು ಡಿ.ಕೆ.ಶಿವಕುಮಾರ್ ಈಗಾಗಲೇ ಎಂಟಿಬಿಗೆ ಸವಾಲು ಹಾಕಿದ್ದಾರೆ. ಹಾಗಾಗಿ ಕಾಂಗ್ರೆಸ್ ಅನ್ನು ಸೋಲಿಸುವ ಗುರಿಯಿಂದ ಎಂಟಿಬಿ ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದಾರೆ ಎನ್ನುವ ಲೆಕ್ಕಾಚಾರವೂ ಕ್ಷೇತ್ರದಲ್ಲಿ ನಡೆಯುತ್ತಿದೆ.

ಹೊಸಕೋಟೆ ಬಿಜೆಪಿಯಲ್ಲಿ ಅಸಮಾಧಾನ
ಹೊಸಕೋಟೆ ಬಿಜೆಪಿಯಲ್ಲಿ ಈಗಾಗಲೇ ಗದ್ದಲ ಪ್ರಾರಂಭವಾಗಿದ್ದು, ಎಂಟಿಬಿ ನಾಗರಾಜು ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಹಠ ಹಿಡಿದಿದ್ದಾರೆ. ಬಚ್ಚೇಗೌಡ ಅವರೂ ಸಹ ಯಡಿಯೂರಪ್ಪ ಬಳಿ ಈ ಬಗ್ಗೆ ಮಾತನಾಡಿದ್ದಾರೆ. ಎಂಟಿಬಿ ಬಿಜೆಪಿಗೆ ಬಂದರೆ ತಾವು ಪಕ್ಷ ತ್ಯಜಿಸುವುದಾಗಿಯೂ ಅವರು ಬೆದರಿಕೆ ಹಾಕಿದ್ದಾರೆ ಎಂಬ ಸುದ್ದಿಯೂ ಇದೆ.











Click it and Unblock the Notifications