ಕೋಲಾರದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಪ್ರೇಮಿಗಳ ಆತ್ಮಹತ್ಯೆ
ಕೋಲಾರ, ನವೆಂಬರ್ 20: ಇಷ್ಟವಿಲ್ಲದ ಮದುವೆ ಮಾಡಿದ್ದಕ್ಕೆ ನೊಂದು ಕೃಷಿ ಹೊಂಡಕ್ಕೆ ಬಿದ್ದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮುಗಿಲಬೆಲೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮಾದ ಮಂಗಲ ಗ್ರಾಮದ ಸುರೇಶ್ (28) ಹಾಗೂ ಕಾರಹಳ್ಳಿಯ ರೂಪಾ (26) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇಷ್ಟವಿಲ್ಲದಿದ್ದರೂ ಮನೆಯವರು ರೂಪಾಗೆ ಒತ್ತಾಯ ಮಾಡಿ ಮದುವೆ ಮಾಡಿದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ರೂಪಾ ಅವರನ್ನು ಎರಡು ತಿಂಗಳ ಹಿಂದೆಯಷ್ಟೆ ಮತ್ತೊಬ್ಬರೊಂದಿಗೆ ವಿವಾಹ ಮಾಡಲಾಗಿತ್ತು. ಆದರೆ ಈ ಮದುವೆಗೆ ರೂಪಾ ನಿರಾಕರಿಸಿದ್ದರು. ಪೋಷಕರ ಒತ್ತಾಯದ ಮೇರೆಗೆ ಬೇರೊಬ್ಬನ ಜೊತೆ ವಿವಾಹ ಮಾಡಿಕೊಂಡಿದ್ದರು. ಈ ಸಂಗತಿಯಿಂದ ನೊಂದಿದ್ದ ರೂಪಾ ಹಾಗೂ ಆಕೆಯ ಪ್ರಿಯಕರ ಶುಕ್ರವಾರ ವೇಲ್ ನಲ್ಲಿ ಸುತ್ತಿಕೊಂಡು ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಂಗಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯನ್ನು ಮುಂದುವರೆಸಿದ್ದಾರೆ.












Click it and Unblock the Notifications