Kolar: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತ ಶ್ರೀನಿವಾಸ್ ಹತ್ಯೆಗೆ ಕಾರಣ ಬಹಿರಂಗ
ಕೋಲಾರ ಅಕ್ಟೋಬರ್ 24: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತ ಎಂ ಶ್ರೀನಿವಾಸ್ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು ಇದಕ್ಕೆ ಕಾರಣ ಸದ್ಯ ಬಹಿರಂಗಗೊಂಡಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ಹೊರವಲಯದ ಹೊಗಳಗೆರೆ ರಸ್ತೆಯಲ್ಲಿ ಶ್ರೀನಿವಾಸ ಮೇಲೆ ಅಕ್ಟೋಬರ್ 23ರಂದು ಬೆಳಿಗ್ಗೆ ಹಲ್ಲೆ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ವೇಣುಗೋಪಾಲ್ ಎಂಬುವವರನ್ನು ಬಂಧಿಸಲಾಗಿದೆ. ಆಶ್ಚರ್ಯ ಅಂದರೆ ವೇಣುಗೋಪಾಲ್ ಕೂಡ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಅಭಿಮಾನಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ದಸರಾ ಆಯುಧ ಪೂಜೆಯ ದಿನ ಶ್ರೀನಿವಾಸ್ ಅವರ ಎದೆ, ತಲೆಯ ಮೇಲೆ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಶ್ರೀನಿವಾಸ್ ಗೃಹ ಸಚಿವ ಜಿ. ಪರಮೇಶ್ವರ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು. ಮಾತ್ರವಲ್ಲದೆ ಅವರು ಕೋಲಾರ ಜಿಲ್ಲಾ ಶ್ರೀನಿವಾಸಪುರ ತಾಲೂಕಿನ ಕಾಂಗ್ರೆಸ್ ಮುಖಂಡರಾಗಿದ್ದು, ಜಿಲ್ಲಾಪಂಚಾಯ್ತಿ ಮಾಜಿ ಅಧ್ಯಕ್ಷರೂ ಆಗಿದ್ದರು. ಕೋಲಾರ ಜಿಲ್ಲೆ ಶ್ರೀನಿವಾಸಪುರ ಹೊರವಲಯದ ಹೊಗಳಗೆರೆ ರಸ್ತೆಯಲ್ಲಿ ಶ್ರೀನಿವಾಸ್ ಮೇಲೆ ವೇಣುಗೋಪಾಲ್ ಹಲ್ಲೆ ಮಾಡಿದ್ದರು.
ಕೋಲಾರ ಹೊಗಳಗೆರೆಯ ತೋಟದ ಮನೆಯಲ್ಲಿ ಬೆಳಿಗ್ಗೆ 11.30ರ ಸುಮಾರಿಗೆ ಕಾಮಗಾರಿ ವೀಕ್ಷಿಸುತ್ತಿದ್ದಾಗ ಬಂದ ಆರು ದುಷ್ಕರ್ಮಿಗಳು ಏಕಾಏಕಿ ಶ್ರೀನಿವಾಸ್ ಮೇಲೆ ದಾಳಿ ಮಾಡಿದ್ದರು. ದಾಳಿ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶ್ರೀನಿವಾಸ್ ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆಂದು ಘೋಷಣೆ ಮಾಡಿದರು.
ಈ ಬಗ್ಗೆ ಪ್ರತ್ಯಕ್ಷದರ್ಶಿ ಅಮರ್ ಸುದ್ದಿಗಾರರಿಗೆ ಮಾತನಾಡಿ, 'ಎರಡು ಬೈಕ್‌ನಲ್ಲಿ ಆರು ಜನ ನಾವಿರುವ ಸ್ಥಳಕ್ಕೆ ಬಂದರು. ಅಂಕಲ್ ಚೆನ್ನಾಗಿದ್ದೀರಾ ಎಂದು ಶ್ರೀನಿವಾಸ್ ಅವರಿಗೆ ಶೇಕ್ ಹ್ಯಾಂಡ್ ಕೊಡುವ ನೆಪದಲ್ಲಿ ಏಕಾಏಕಿ ದಾಳಿ ಮಾಡಿದರು. ಮನಬಂದಂತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾದರು. ನಮ್ಮ ಮೇಲೂ ಅವರು ದಾಳಿಗೆ ಮುಂದಾದರು. ಆದರೆ ನಾವು ಅವರಿಂದ ತಪ್ಪಿಸಿಕೊಂಡೆವು. ಹಲವಾರು ಬಾರಿ ಈ ದುಷ್ಕರ್ಮಿಗಳನ್ನು ನಮ್ಮ ಊರಲ್ಲಿ ಓಡಾಡುವುದನ್ನು ನಾನು ನೋಡಿದ್ದೇನೆ' ಎಂದು ಅಮರ್ ಹೇಳಿದರು. ಇವರಿಂದ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸಿದ್ದಾಗ ವೇಣುಗೋಪಾಲ್ ಅವರನ್ನು ಬಂಧಿಸಿದರು.
ಆರೋಪಿ ವೇಣುಗೋಪಾಲ್ ಅವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಕಟ್ಟಾ ಅಭಿಮಾನಿ. ರಮೇಶ್ ಕುಮಾರ್ ಅವರ ಚಿತ್ರವನ್ನು ಇವರು ಎದೆ ಮೇಲೆ ಅಚ್ಚೆ ಹಾಕಿಸಿಕೊಂಡಿದ್ದಾರೆ. ಈತನೇ ಶ್ರೀನಿವಾಸ್ ಅವರನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿ.
ಕೆಲ ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದ ವೇಣುಗೋಪಾಲ್ ಹಾಗೂ ಶ್ರೀನಿವಾಸ್ ನಡುವೆ ಏಳು ವರ್ಷಗಳಿಂದ ವೈಷಮ್ಯ ಇತ್ತು. ಜಮೀನು ವಿವಾದ ಹಾಗೂ ಹಳೆ ದ್ವೇಷದಿಂದಾಗಿ ಆರೋಪಿ ವೇಣು ಶ್ರೀನಿವಾಸ್ ಅವರನ್ನು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.
ಶ್ರೀನಿವಾಸ್ ಅಂತಿಮ ದರ್ಶನ ಪಡೆದ ಕೆಹೆಚ್ ಮುನಿಯಪ್ಪ
ಶ್ರೀನಿವಾಸ್ ಅವರ ಅಂತಿಮ ದರ್ಶನ ಪಡೆದು ಬಳಿಕ ಮಾತನಾಡಿದ ಕೆಹೆಚ್ ಮುನಿಯಪ್ಪ ಅವರು, ಎಷ್ಟೇ ದ್ವೇಷವಿದ್ದರೂ ಇಂತಹ ದಾರುಣ ಕೃತ್ಯಕ್ಕೆ ಯಾರೂ ಕೂಡ ಕೈ ಹಾಕಬಾರದು. ಕಳೆದ ನಾಲ್ಕು ಲೋಕಸಭೆ ಚುನಾವಣೆಯಲ್ಲಿ ನನ್ನ ಬೆಂಬಲಿಸಿದ್ದರು. ಇವರನ್ನು ಹತ್ಯೆ ಮಾಡಿದರ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.












Click it and Unblock the Notifications