ಪೊಲೀಸ್ ಠಾಣೆಗೆ ಪ್ರಿಯತಮೆಯ ರುಂಡ ಹಿಡಿದು ತಂದ ಯುವಕ!
ಕೋಲಾರ, ಸೆಪ್ಟೆಂಬರ್ 28: ತನ್ನ ಪ್ರಿಯತಮೆಯನ್ನು ಕೊಂದು, ಆಕೆಯ ರುಂಡವನ್ನು ಪೊಲೀಸ್ ಠಾಣೆಗೆ ಯುವಕನೊಬ್ಬ ಹಿಡಿದುತಂದ ವಿಕೃತ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ.
ಪ್ರಕರಣವನ್ನು ಶ್ರೀನಿವಾಸಪುರ ಪೊಲೀಸರು ಚಿಕ್ಕಬಳ್ಳಾಪುರದ ಚಿಂತಾಮಣಿ ಠಾಣೆಗೆ ವರ್ಗಾಯಿಸಿದ್ದು, ತನಿಖೆ ನಡೆಸಲಾಗುತ್ತಿದೆ.
ಘಟನೆಯ ವಿವರ
ಅಜೀಜ್ ಖಾನ್ ಎಂಬ 27 ವರ್ಷ ವಯಸ್ಸಿನ ವ್ಯಕ್ತಿ ಬೆಂಗಳೂರಿನ ವಿವೇಕನಗರದ ರೋಶಿನಿ ಖಾನ್ ಎಂಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಅಜೀಜ್ ಗೆ ಬೇರೆ ಯುವತಿಯೊಂದಿಗೆ ಮತ್ತು ರೋಶಿನಿಗೆ ಬೇರೆ ಯುವಕನೊಂದಿಗೆ ಮದುವೆಯಾಗಿದ್ದರೂ, ಇಬ್ಬರ ನಡುವೆ ಅನೈತಿಕ ಸಂಬಂಧವಿತ್ತು.

ಆದರೆ ಕೆಲ ದಿನಗಳಿಂದ ರೋಶಿನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಸುತ್ತಾಡುವುದನ್ನು ಗಮನಿಸಿದ್ದ ಅಜೀಜ್, ಕೋಪಗೊಂಡು ಆಕೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಎಂಬಲ್ಲಿಗೆ ಬರುವುದಕ್ಕೆ ಹೇಳಿ, ಆಕೆಯನ್ನು ಅಲ್ಲಿಯೇ ಕೊಂದಿದ್ದಾನೆ.
ನಂತರ ಆಕೆಯ ರುಂಡವನ್ನು ಕೋಲಾರದ ಶ್ರೀನಿವಾಸಪುರ ಠಾಣೆಗೆ ಹಿಡಿದುತಂದು, ತನ್ನ ಕೃತ್ಯದ ಬಗ್ಗೆ ವಿವರಿಸಿ, ಪೊಲೀಸರಿಗೆ ಶರಣಾಗಿದ್ದಾನೆ.
ಇತ್ತೀಚೆಗಷ್ಟೇ ಚಿಕ್ಕಮಗಳೂರು ಜಿಲ್ಲೆಯಲ್ಲೂ ಇಂಥದೇ ಘಟನೆ ನಡೆದಿತ್ತು. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು, ರುಂಡವನ್ನು ಪೊಲೀಸ್ ಠಾಣೆಗೆ ಕೊಂಡೊಯ್ದು ಶರಣಾಗಿದ್ದ.












Click it and Unblock the Notifications