ಕಿಡ್ನಾಪ್ ಆದ ಮಗು ರಕ್ಷಣೆ; ಕೋಲಾರ ಪೊಲೀಸ್ ಶ್ಲಾಘಿಸಿದ ಸಿಎಂ
ಕೋಲಾರ, ಅಕ್ಟೋಬರ್ 27; ಕೋಲಾರ ಜಿಲ್ಲಾಸ್ಪತ್ರೆಯಿಂದ ಕಳುವಾಗಿದ್ದ ನವಜಾತ ಶಿಶುವನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ತಾಯಿ ಮಡಿಲು ಸೇರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೋಲಾರ ಪೊಲೀಸರ ಮಿಂಚಿನ ಕಾರ್ಯಾಚರಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.
ಶುಕ್ರವಾರ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಕೋಲಾರ ಜಿಲ್ಲಾಸ್ಪತ್ರೆಯಿಂದ ಕಳುವಾಗಿದ್ದ ನವಜಾತ ಶಿಶುವನ್ನು 24 ಗಂಟೆಗಳ ಒಳಗೆ ಮರಳಿ ತಾಯಿ ಮಡಿಲಿಗೆ ಸೇರಿಸಿರುವ ಕೋಲಾರ ಜಿಲ್ಲಾ ಪೊಲೀಸರ ಕಾರ್ಯಕ್ಷಮತೆ ಶ್ಲಾಘನೀಯ. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಪ್ರಕರಣ ಬೇಧಿಸಿದ ಪೊಲೀಸ್ ಸಿಬ್ಬಂದಿಗಳಿಗೆ ನನ್ನ ಅಭಿನಂದನೆಗಳು' ಎಂದು ಹೇಳಿದ್ದಾರೆ.

ಕೋಲಾರದ ಜಿಲ್ಲಾಸ್ಪತ್ರೆಯಿಂದ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಮಹಿಳೆಯರ ತಂಡ ಗಂಡು ಮಗುವನ್ನು ಅಪಹರಣ ಮಾಡಿತ್ತು. ಸಂಜೆ 7 ಗಂಟೆಯ ವೇಳೆಗೆ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೋಲಾರ ಜಿಲ್ಲಾ ಪೊಲೀಸರು ಮಗು ಪತ್ತೆಗೆ ವಿಶೇಷ ತಂಡವನ್ನು ರಚನೆ ಮಾಡಿದ್ದರು.
ಸಿಸಿಟಿವಿ ಪರಿಶೀಲನೆ; ಮಾಲೂರು ಪಟ್ಟಣದ ಪಟೇಲರ ಬೀದಿ ನಿವಾಸಿ ನಂದಿನಿ, ಪೂವರಸನ್ ದಂಪತಿಯ ಗಂಡು ಮಗುವನ್ನು ಕೋಲಾರ ನಗರದ ಎಸ್‌ಎನ್ಆರ್ ಜಿಲ್ಲಾಸ್ಪತ್ರೆಯಿಂದ ಅಪಹರಣ ಮಾಡಲಾಗಿತ್ತು. ಮಹಿಳೆಯರು ಬ್ಯಾಗ್‌ನಲ್ಲಿ ಮಗುವನ್ನು ಕದ್ದು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಕೋಲಾರ ಜಿಲ್ಲಾಸ್ಪತ್ರೆಯಿಂದ ಕಳುವಾಗಿದ್ದ ನವಜಾತ ಶಿಶುವನ್ನು 24 ಗಂಟೆಗಳ ಒಳಗೆ ಮರಳಿ ತಾಯಿ ಮಡಿಲಿಗೆ ಸೇರಿಸಿರುವ ಕೋಲಾರ ಜಿಲ್ಲಾ ಪೊಲೀಸರ ಕಾರ್ಯಕ್ಷಮತೆ ಶ್ಲಾಘನೀಯ. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಪ್ರಕರಣ ಬೇಧಿಸಿದ ಪೊಲೀಸ್ ಸಿಬ್ಬಂದಿಗಳಿಗೆ ನನ್ನ ಅಭಿನಂದನೆಗಳು.
— CM of Karnataka (@CMofKarnataka) October 27, 2023
- ಮುಖ್ಯಮಂತ್ರಿ @siddaramaiah #ChildTrafficking pic.twitter.com/wcePE4y9sX
ಮಗುವಿನ ಹೆರಿಗೆ ಬಳಿಕ ತಾಯಿ ನಂದಿನಿ ಬಾಣಂತಿ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 7 ತಿಂಗಳಿಗೆ ಮಗುವಿಗೆ ಜನ್ಮ ನೀಡಿದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ನಂದಿನಿ ಮತ್ತು ಅವರ ತಾಯಿ ಚಲನವಲನ ಗಮನಿಸಿದ್ದ ಮೂವರು ಮಹಿಳೆಯರು ನಂದಿನಿ ಅವರ ತಾಯಿ ವಾರ್ಡ್‌ನಿಂದ ಹೊರ ಹೋದಾಗ ಮಗುವನ್ನು ಅಪಹರಿಸಿದ್ದರು.
ರಾಧಮ್ಮ ವಾರ್ಡ್‌ಗೆ ಬಂದು ನೋಡಿದಾಗ ಮಗು ಕಾಣೆಯಾಗಿತ್ತು. ಕೂಡಲೇ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಯಿತು. ಆಗ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಮಗುವನ್ನು ಮಹಿಳೆಯರು ಎತ್ತಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆಗ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಮಗು ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೋಲಾರ ನಗರ ಠಾಣೆ ಪೊಲೀಸರು ಮಗು ಪತ್ತೆಗಾಗಿ ಕಾರ್ಯಾಚರಣೆಯನ್ನು ಕೈಗೊಂಡರು. ತನಿಖೆಗಾಗಿ ವಿಶೇಷ ತಂಡವನ್ನು ರಚನೆ ಮಾಡಿದರು. ತಂಡ ಸಿಸಿಟಿವಿ ದೃಶ್ಯಾವಳಿ ಆಧರಿಸಿ, ಮಗುವನ್ನು ಅಪಹರಣ ಮಾಡಿರುವ ಮಾರ್ಗವನ್ನು ವಿಶ್ಲೇಷಿಸಿ ತನಿಖೆ ಆರಂಭಿಸಿತು.
ಮೆಡಿಕಲ್ ಶಾಪ್ ಒಂದರಲ್ಲಿ ಮಾಡಲಾದ ಫೋನ್ ಪೇ ಪೇಮೆಂಟ್ ಮತ್ತು ಮಾಲೂರು ಇನ್ಸ್‌ಪೆಕ್ಟರ್ ವಸಂತ್‌ಗೆ ಆಟೋ ಚಾಲಕರೊಬ್ಬರು ನೀಡಿದ ಮಾಹಿತಿ ಮೇರೆಗೆ ವಿಶೇಷ ತಂಡ ಅಪಹರಣಕಾರರನ್ನು ಹುಡುಕಿದ್ದಾರೆ. ಗುರುವಾರ ಮಧ್ಯರಾತ್ರಿ ಅಪಹರಣಕಾರರನ್ನು ಪತ್ತೆಹಚ್ಚಿ ಮತ್ತು ಮಗುವನ್ನು ರಕ್ಷಣೆ ಮಾಡಿದ್ದಾರೆ. ತಮಿಳುನಾಡಿನ ಹೊಸೂರಿನಲ್ಲಿ ಅಪಹರಣ ಮಾಡಿದ್ದ ಮಹಿಳೆಯನ್ನು ಬಂಧಿಸಿ ಮಗುವನ್ನು ತಾಯಿ ನಂದಿನಿ ಮಡಿಲಿಗೆ ಸೇರಿಸಲಾಗಿದೆ.
ಶುಕ್ರವಾರ ನಂದಿನಿ, ಪೂವರಸನ್ ದಂಪತಿಗಳು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವ ತಯಾರಿಯಲ್ಲಿದ್ದರು. ಆದರೆ ಗುರುವಾರ ಸಂಜೆ ಮಗು ಅಪಹರಣವಾಗಿತ್ತು. ಜಿಲ್ಲಾಸ್ಪತ್ರೆಯ ಭದ್ರತಾ ಲೋಪದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಪೊಲೀಸರ ಕಾರ್ಯಾಚರಣೆಯನ್ನು ಜನರು ಶ್ಲಾಘಿಸಿದ್ದು, ದಂಪತಿಗಳು ಸಹ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಆಸ್ಪತ್ರೆಯಿಂದ ಮಗುವನ್ನು ಕಳ್ಳತನ ಮಾಡಿದ್ದ ಮಹಿಳೆಯರು ಕಾಲೇಜು ಬ್ಯಾಗ್‌ನಲ್ಲಿ ಮಗುವನ್ನು ಇಟ್ಟುಕೊಂಡು ಆಟೋ ಹತ್ತುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆರೋಪಿಗಳ ಪತ್ತೆಗೆ ಆಸ್ಪತ್ರೆ ಸಿಬ್ಬಂದಿ ಅಗತ್ಯ ಸಹಕಾರ ನೀಡಿದ್ದೇವೆ. ನಮ್ಮಿಂದ ಲೋಪವಾಗಿಲ್ಲ ಎಂದು ಸಿಬ್ಬಂದಿಗಳು ಹೇಳಿದ್ದಾರೆ.












Click it and Unblock the Notifications