ನಾಮಪತ್ರ ಸಲ್ಲಿಸದಿರಲು ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಪಟ್ಟು; ಮುಳಬಾಗಿಲು ಅಭ್ಯರ್ಥಿ ದಿಢೀರ್ ಬದಲಾವಣೆ!
ಕೋಲಾರ, ಏಪ್ರಿಲ್ 20: 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಕಾವು ರಾಜ್ಯದಲ್ಲಿ ಜೋರಾಗುತ್ತಿದ್ದು, ಬಿರು ಬೇಸಿಗೆಯಲ್ಲಿಯೂ ಎಲ್ಲ ರಾಜಕೀಯ ಪಕ್ಷಗಳಲ್ಲಿ ರಣೋತ್ಸಾಹ ಎದ್ದು ಕಾಣುತ್ತಿದೆ. ಗುರುವಾರ, ಏಪ್ರಿಲ್ 20ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಗೆಲ್ಲುವ ಕುದುರೆಗಳಿಗಾಗಿ ಕಡೆ ಕ್ಷಣದವರೆಗೂ ಹುಡುಕಾಟ ನಡೆಸಲಾಗುತ್ತಿದೆ.
ಅದೇ ರೀತಿ ನಾಮಪತ್ರ ಸಲ್ಲಿಕೆಯ ಕೊನೆಯ ದಿನದ ಹಿಂದಿನ ರಾತ್ರಿ ಕಾಂಗ್ರೆಸ್ ತನ್ನ ಐದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಭಾರೀ ಕಗ್ಗಂಟಾಗಿದ್ದ ಕೋಲಾರ ಜಿಲ್ಲೆ ಮುಳಬಾಗಿಲು ಕ್ಷೇತ್ರಕ್ಕೆ ಬಿ.ಸಿ. ಮುದ್ದು ಗಂಗಾಧರ್ ಎಂಬುವವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿತ್ತು.

ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಕೆಲವೇ ಗಂಟೆಗಳಲ್ಲಿ ಅಭ್ಯರ್ಥಿ ಬದಲಾವಣೆಯಾಗಿದ್ದು, ಮುದ್ದು ಗಂಗಾಧರ್ ಬದಲಿಸಿ ಆದಿನಾರಾಯಣ ಎಂಬುವವರಿಗೆ ಟಿಕೆಟ್ ನೀಡಿದೆ.
ಕೊತ್ತೂರು ಮಂಜುನಾಥ್ ಪಟ್ಟು; ಅಭ್ಯರ್ಥಿ ಬದಲಾವಣೆ
ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಹಿಂದೆ ಸರಿದ ಕಾರಣ, ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಕೋಲಾರ ಕಾಂಗ್ರೆಸ್ ಟಿಕೆಟ್ ಘೋಷಿಸಲಾಗಿತ್ತು. ಕಾಂಗ್ರೆಸ್ ಟಿಕೆಟ್ ಸಿಕ್ಕರೂ ನಾಮಪತ್ರ ಸಲ್ಲಿಸದಿರಲು ಕೊತ್ತೂರು ಮಂಜುನಾಥ್ ಹಿಂದೇಟು ಹಾಕಿದ ಘಟನೆ ನಡೆಯಿತು.
ಕೊತ್ತೂರು ಮಂಜುನಾಥ್ ತಮ್ಮ ತವರು ಮುಳಬಾಗಿಲು ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಅನ್ನು ಆಪ್ತರಾದ ಆದಿನಾರಾಯಣ, ಮಂಜುಶ್ರೀ ನಡುವೆ ಯಾರಿಗಾದರೂ ನೀಡಲು ಶಿಫಾರಸ್ಸು ಮಾಡಿದ್ದರು.

ಆದರೆ, ಬುಧವಾರ ರಾತ್ರಿ ನಿನ್ನೆ ಬಿಡುಗಡೆಯಾದ ಪಟ್ಟಿಯಲ್ಲಿ ಡಾ. ಬಿ.ಸಿ. ಮುದ್ದು ಗಂಗಾಧರ್ ಎಂಬವರಿಗೆ ಟಿಕೆಟ್ ನೀಡಲಾಗಿತ್ತು. ಹೀಗಾಗಿ ಅಸಮಧಾನಗೊಂಡ ಕೊತ್ತೂರು ಮಂಜುನಾಥ್ ಅವರು, ತಾವು ಕೋಲಾರ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಲ್ಲ ಎಂದು ಪಟ್ಟು ಹಿಡಿದಿದ್ದರು.
ಕಳೆದ 20 ವರ್ಷಗಳಿಂದ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು, ಜನಪ್ರಿಯನಾಗಿರುವ ಕೊತ್ತೂರು ಮಂಜುನಾಥ್ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೊತ್ತೂರು ಮಂಜುನಾಥ್ ಅವರ ಪಟ್ಟಿಗೆ ಮಣಿದ ಕಾಂಗ್ರೆಸ್ ಹೈಕಮಾಂಡ್ ನಾಮಪತ್ರ ಸಲ್ಲಿಕೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಅಭ್ಯರ್ಥಿ ಬದಲಾಯಿಸಿದೆ.
ಕೊನೆಗೂ ಕೊತ್ತೂರು ಮಂಜುನಾಥ್ ಅವರು ಶಿಫಾರಸ್ಸು ಮಾಡಿದ್ದ ಆದಿನಾರಾಯಣ ಅವರಿಗೆ ಮುಳಬಾಗಿಲು ಕಾಂಗ್ರೆಸ್ ಟಿಕೆಟ್ ದೊರೆತಿದ್ದು, ಕೊನೆಯ ಕ್ಷಣದಲ್ಲಿ ಕೋಲಾರ ಕಾಂಗ್ರೆಸ್‌ನ ಬಂಡಾಯ ಶಮನ ಮಾಡಲು ಯಶಸ್ವಿಯಾಗಿದೆ.
ಕೋಲಾರದಿಂದ ಕೊತ್ತೂರು ಮಂಜುನಾಥ್ ಸ್ಪರ್ಧೆ ಏಕೆ?
ಕೊತ್ತೂರು ಮಂಜುನಾಥ್ ಅವರು ಮುಳಬಾಗಿಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, 2013ರಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ಆರೋಪದ ಮೇಲೆ ಅವರ ಸ್ಪರ್ಧೆಯನ್ನು ನಿಷೇಧಿಸಲಾಗಿತ್ತು. ಹೀಗಾಗಿ 2018ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಎಚ್. ನಾಗೇಶ್‌ಗೆ ಬೆಂಬಲ ನೀಡಿದ್ದರು.
ಈ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಮುಳಬಾಗಿಲು ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ನೀಡಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಮುಂಚೂಣಿ ಹಾಗೂ ಜನ ಬೆಂಬಲ ಹೊಂದಿರುವ ಕಾರಣದಿಂದ ಕೋಲಾರ ಕ್ಷೇತ್ರದಲ್ಲಿ ಕೊತ್ತೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದೆ.
ಕೋಲಾರದಲ್ಲಿ ವರ್ತೂರು ಪ್ರಕಾಶ್ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಸಮೃದ್ಧಿ ಶ್ರೀನಾಥ್ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಇದೀಗ ಕೊತ್ತೂರು ಮಂಜುನಾಥ್ ಎಂಟ್ರಿಯಿಂದ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕೊನೆಯ ದಿನವಾಗಿದ್ದರೆ, ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಅಂತಿಮ ದಿನವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications