Karnataka Budget: ರಾಜ್ಯ ಬಜೆಟ್‌ನಲ್ಲಿ ಕೋಲಾರ ಜಿಲ್ಲೆ ಇಟ್ಟಿರುವ ಬೇಡಿಕೆಗಳೇನು?
ರಾಜ್ಯ ಸರ್ಕಾರವು ಬಜೆಟ್ ಮಂಡನೆಗೆ ಸಜ್ಜಾಗಿದೆ. ಚಿನ್ನದ ನಾಡು ಕೋಲಾರದ ಜನರು ಈ ಬಜೆಟ್ ಪ್ರಮುಖವಾಗಿ ತಮ್ಮ ಜಿಲ್ಲೆಗೆ ಏನೆಲ್ಲ ಬೇಕು ಎಂದು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಈ ಬಗ್ಗೆ ಜಿಲ್ಲೆಯ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದೆ.
ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಹಾಗೂ ತರಕಾರಿ ಮಾರುಕಟ್ಟೆಯ ಸಮಸ್ಯೆಗಳ ಆಗರವಾಗಿದೆ. ಪಕ್ಕದ ರಾಜ್ಯದಲ್ಲಿರುವ ವಿ.ಕೋಟಾದಲ್ಲಿ ಸುಮಾರು 100 ಎಕರೆಯಲ್ಲಿ ಮಾರುಕಟ್ಟೆ ನಿರ್ಮಿಸುತ್ತಿದ್ದು, ಅದು ಸಿದ್ಧವಾದರೆ 50 ಕಿಲೋಮೀಟರ್ ದೂರವಿರುವ ಅಲ್ಲಿಗೆ ಮಾರಾಟಗಾರರು, ವರ್ತಕರು ಹೋಗುತ್ತಾರೆ. ಇದರಿಂದ ಇಲ್ಲಿನ ಎಪಿಎಂಸಿಗೆ ನಷ್ಟವಾಗಲಿದೆ. ಸರ್ಕಾರವು ಕೈಗಾರಿಕೆಗಳಿಗೆ ಜಾಗ ಕೊಡುತ್ತದೆ. ಆದರೆ, ರೈತರಿಗಾಗಿ ಇರುವ ಎಪಿಎಂಸಿಗೆ ಜಾಗ ಕೊಡುತ್ತಿಲ್ಲ. ಹಾಗಾಗಿ ಕೂಡಲೇ ಈ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದೆ.

ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಜಿಲ್ಲಾ ಕೇಂದ್ರದಲ್ಲಿ ಎಪಿಎಂಸಿ ಮಾರುಕಟ್ಟೆಗೆ ಜಾಗ ಮಂಜೂರು ಮಾಡಬೇಕು. ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಒತ್ತಾಯಿಸಿದ್ದಾರೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಕೆ.ಸಿ.ವ್ಯಾಲಿ ಮತ್ತು ಎಚ್.ಎನ್ ವ್ಯಾಲಿಯ ನೀರನ್ನು ಹರಿಸಲಾಗುತ್ತಿದೆ. ಮೂರನೇ ಹಂತದ ಶುದ್ಧೀಕರಣಕ್ಕೆ ಅನುದಾನ ಮೀಸಲಿಟ್ಟು ಸುಮಾರು ವರ್ಷಗಳಿಂದ ಎತ್ತಿನಹೊಳೆ ಯೋಜನೆಯ ಮೂಲಕವೇ ನೀರು ಕೊಡುತ್ತೇವೆ ಎಂದು ಸರ್ಕಾರಗಳು ಮೂರ್ಖರನ್ನಾಗಿಸಿವೆ. ಈ ವರ್ಷದಲ್ಲಿ ಆ ಹಣ ಬಿಡುಗಡೆ ಮಾಡಿ, ಯೋಜನೆ ಪೂರ್ಣಗೊಳಿಸಬೇಕು. ಕೃಷ್ಣಾ ನದಿಯ ಬಿ ಸ್ಕೀಮ್‌ನಲ್ಲಿ ನಮ್ಮ ಪಾಲಿನ ನೀರು ತರಲು ಅನುದಾನ ಕೊಡಬೇಕು. ಒಂದು ವೇಳೆ ಬಜೆಟ್‌ನಲ್ಲಿ ಕೋಲಾರವನ್ನು ಕಡೆಗಣಿಸಿದರೆ ಮುಂದೆ ಉಗ್ರವಾದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಸ್ಕರಣಾ ಘಟಕ ಬೇಕು: ಜಿಲ್ಲೆಯ ರೈತರು ಸ್ವಾಭಿಮಾನಿಗಳು, ಕಷ್ಟಕರ ಪಟ್ಟು ಟೊಮೆಟೊ, ಆಲೂಗಡ್ಡೆ ಸೇರಿದಂತೆ ತರಕಾರಿಗಳನ್ನು ಬೆಳೆಯುತ್ತಾರೆ. ಆದರೆ ಅವುಗಳಿಗೆ ಸಂಸ್ಕರಣಾ ಘಟಕವಿಲ್ಲದೇ ಸಮಸ್ಯೆಯಾಗುತ್ತಿದೆ. ಹಾಗಾಗಿ ಕೂಡಲೇ ಜಿಲ್ಲಾ ಕೇಂದ್ರದಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಬೇಕು. ವೈದ್ಯಕೀಯ ಹಾಗೂ ಇಂಜಿನಿಯರ್ ಕಾಲೇಜಿಗೆ ಅನುದಾನ ಕೊಡಬೇಕು. ಬಂಗಾರಪೇಟೆ ತಾಲ್ಲೂಕಿನ ಗಡಿ ಭಾಗದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು ಶಾಶ್ವತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕೋಲಾರ ಜಿಲ್ಲೆಯಾದ್ಯಂತ ರಸ್ತೆಗಳು ಹಾಳಾಗಿದ್ದು, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ಹಣ ಬಿಡುಗಡೆ ಮಾಡಿ ರಸ್ತೆಗಳ ದುರಸ್ತಿ ಮಾಡಬೇಕು. ವಿಶ್ವದಲ್ಲೇ ಹೆಚ್ಚು ಮಾವು ಬೆಳೆಯುವ ಶ್ರೀನಿವಾಸಪುರ ತಾಲೂಕಿನಲ್ಲಿ ಮಾವಿನ ಸಂಸ್ಕರಣಾ ಘಟಕವನ್ನು ಮಂಜೂರು ಮಾಡಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಿಸನಹಳ್ಳಿ ಬೈಚೇಗೌಡ, ಹಸಿರು ಸೇನೆ ರಾಜ್ಯ ಸಂಚಾಲಕ ಕೆ.ಆನಂದ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನ್ನೆಹೊಸಹಳ್ಳಿ ರಮೇಶ್, ಮುಖಂಡರಾದ ತಿಮ್ಮಾರೆಡ್ಡಿ, ಚಿನ್ನಾಪುರ ಮಂಜುನಾಥ್, ಗುರುಪ್ಪ, ತಿಪ್ಪಸಂದ್ರ ಹರೀಶ್, ಶ್ರೀನಿವಾಸ್, ಸತೀಶ್, ಶ್ಯಾಮಸುಂದರ್, ಶಿವಕುಮಾರ್, ಚೌಡಪ್ಪ, ಸೀನಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.












Click it and Unblock the Notifications