ಮುಳಬಾಗಿಲು: ಕಾಂಗ್ರೆಸ್- ಜೆಡಿಎಸ್ ಪೈಪೋಟಿ, ಬಿಜೆಪಿಯದ್ದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಸ್ಥಿತಿ
ಕೋಲಾರ, ಮಾರ್ಚ್ 24: ಕೋಲಾರ ( Kolar ) ಜಿಲ್ಲೆಯ ಮುಳಬಾಗಿಲು ವಿಧಾನಸಭಾ ಕ್ಷೇತ್ರವು ಕರ್ನಾಟಕ ( Karnataka ) ವಿಧಾನಸಭೆಯ 224 ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಕೋಲಾರ ಲೋಕಸಭಾ ಕ್ಷೇತ್ರದ ಭಾಗವೂ ಆಗಿದೆ. ಈ ಕ್ಷೇತ್ರವು 1951ರಲ್ಲೇ ಅಸ್ತಿತ್ವಕ್ಕೆ ಬಂದಿದೆ. ಇದು ಆಗಿನಿಂದಲೇ ಕಾಂಗ್ರೆಸ್‌ನ ಭದ್ರಕೋಟೆ ಆಗಿದೆ. ಇದು ಪ್ರಸ್ತುತ ಮೀಸಲಾತಿಗೆ ಒಳಪಟ್ಟಿರುವ ಕ್ಷೇತ್ರವಾಗಿದೆ.
1951 ರಿಂದ ಹೆಚ್ಚು ಸಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಉಳಿದಂತೆ ಸ್ವತಂತ್ರ ಅಭ್ಯರ್ಥಿಗಳು, ಕಮ್ಯುನಿಸ್ಟ್ ಹಾಗೂ ಜನತಾದಳದ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. 1985 ರಲ್ಲಿ ಸಿಪಿಎಂನ ಆರ್ ವೆಂಕಟರಾಮಯ್ಯ ಆಯ್ಕೆಯಾದರು. 1994 ಮತ್ತ 2004 ವಿಧಾನಸಭೆ ಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿ ಆರ್ ಶ್ರೀನಿವಾಸ್ ಶಾಸಕರಾಗಿ ಆಯ್ಕೆಯಾದರು.

2008ರಲ್ಲಿ ಈ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ವಶಪಡಿಸಿಕೊಂಡಿತು. 2013 ಹಾಗೂ 2018ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದರು. 2008 ರಲ್ಲಿ ಕಾಂಗ್ರೆಸ್‌ನ ಅಮರೇಶ್ ಜಯಗಳಿಸಿದರು. 2013 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕೊತ್ತೂರು ಜಿ ಮಂಜುನಾಥ್ ಅವರು ಜಯಗಳಿಸಿದರು. ಕಳೆದ ಬಾರಿ ಅಂದರೆ 2018ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್ ನಾಗೇಶ್ ಅವರು ಶಾಸಕರಾಗಿ ಆಯ್ಕೆಯಾದರು.
ಮುಳುಬಾಗಿಲು ಕ್ಷೇತ್ರದಲ್ಲಿ ಸಾಮಾನ್ಯ ಮತದಾರರು, ಅನಿವಾಸಿ ಭಾರತೀಯರು ಮತ್ತು ಸೇವಾ ಮತದಾರರು ಸೇರಿ ಒಟ್ಟು 2, 01, 019 ಮತದಾರರಿದ್ದಾರೆ. ಸಾಮಾನ್ಯ ಮತದಾರರಲ್ಲಿ 1, 01, 215 ಪುರುಷರು, 99, 758 ಮಹಿಳೆಯರು ಮತ್ತು ನಾಲ್ವರು ಇತರಿದ್ದಾರೆ. ಕ್ಷೇತ್ರದಲ್ಲಿ ಮತದಾರರ ಲಿಂಗ ಅನುಪಾತ 98.52 ಮತ್ತು ಅಂದಾಜು ಸಾಕ್ಷರತೆಯ ಪ್ರಮಾಣ ಶೇ 71 ರಷ್ಟಿದೆ.
ಕಳೆದ ಬಾರಿ ಗೆದ್ದು ಶಾಸಕರಾಗಿರುವ ಎಚ್ ನಾಗೇಶ್ ಅವರು ಈಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅವರು ಬೆಂಗಳೂರಿನ ವೈಟ್‌ಫಿಲ್ಡ್ ನಿವಾಸಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹದೇವಪುರದಿಂದ ಕಣಕ್ಕಿಳಿಯಲು ಎಚ್ ನಾಗೇಶ್ ಮುಂದಾಗಿದ್ದಾರೆ. ಹೀಗಾಗಿ, ಇಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ. 2013ರಲ್ಲಿ ಶಾಸಕರಾಗಿದ್ದ ಕೊತ್ತೂರು ಮಂಜುನಾಥ್ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳಿವೆ. ಆದರೆ, ಅವರು ನಕಲಿ ಜಾತಿ ಪ್ರಮಾಣ ಪತ್ರ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅರ್ಜಿಯು ಅನುರ್ಜಿತವಾಗಬಹುದು.
ಏನೇ ಇದ್ದರೂ, ಈ ಕ್ಷೇತ್ರದಲ್ಲಿ ಕೊತ್ತೂರು ಮಂಜುನಾಥ್ ಅವರ ಪ್ರಭಾವವಿದೆ ಎಂದು ಹೇಳಲಾಗುತ್ತಿದೆ. ಕೊತ್ತೂರು ಮಂಜುನಾಥ್ ಅವರ ಆಪ್ತರಾಗಿರುವ ಆನೇಕಲ್ ಮೂಲದ ಮದ್ದೂರಪ್ಪ ಸೇರಿದಂತೆ ಹಲವರು ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.
ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ಸಮೃದ್ಧಿ ಮಂಜುನಾಥ್ ಈ ಬಾರಿ ಮತ್ತೆ ಕಣಕ್ಕಿಳಿಯಲಿದ್ದಾರೆ. ಅವರು ಕಾಂಗ್ರೆಸ್‌ಗೆ ಪೈಪೋಟಿ ನೀಡುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ಅಷ್ಟೇನೂ ಪ್ರಬಲವಲ್ಲದ ಬಿಜೆಪಿ ಜಯಗಳಿಸುವುದು ಕಷ್ಟಸಾಧ್ಯವೆಂದೇ ಹೇಳಲಾಗುತ್ತಿದೆ. ಸಂಸದ ಮುನಿಸ್ವಾಮಿ ಅವರ ಬೆಂಬಲಿಗರಾಗಿರುವ ಶೀಗೆಹಳ್ಳಿ ಸುಂದರ್ ಬಿಜೆಪಿಯಿಂದ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ.
ಆಮ್ ಆದ್ಮಿ ಪಕ್ಷದ ಟಿಕೆಟ್‌ಗಾಗಿ ದಲಿತ ಹೋರಾಟಗಾರರಾದ ಸಂಗಸಂದ್ರ ವಿಜಯ್ ಕುಮಾರ್ ಹಾಗೂ ಕೀಲು ಹೊಳಲಿ ಪ್ರಕಾಶ್ ಅವರು ಪೈಪೋಟಿ ನಡೆಸಿದ್ದಾರೆ. ದಲಿತರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಈ ಇಬ್ಬರು ಮುಖಂಡರು ದಲಿತರು, ಅಸಂಘಟಿತ ಕಾರ್ಮಿಕರ ಮತಗಳನ್ನು ಸೆಳೆಯಬಹುದು ಎಂಬ ಮಾತುಗಳು ಕೇಳಿಬಂದಿವೆ. ಏನೇ ಆದರೂ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವ ನೇರ ಪೈಪೋಟಿ ಏರ್ಪಡುವುದು ಪಕ್ಕಾ ಎಂದು ರಾಜಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications