ರಿಪಬ್ಲಿಕ್ ಆಫ್ ಶ್ರೀನಿವಾಸಪುರದಲ್ಲಿ ರಮೇಶ್ ಕುಮಾರ್ ಬೆಂಬಲಿಗರ ಗೂಂಡಾಗಿರಿ: ಜೆಡಿಎಸ್
ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಮೇಲೆ ರಾಜ್ಯ ಜೆಡಿಎಸ್ ಗಂಭೀರ ಆರೋಪ ಮಾಡಿದೆ. ರೈತರ ಮೇಲೆ ರಮೇಶ್ ಕುಮಾರ್ ಬೆಂಬಲಿಗರ ಗೂಂಡಾಗಿರಿ ನಡೆದಿದೆ ಎಂದು ಆರೋಪಿಸಿದೆ. ಅಲ್ಲದೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಶ್ರೀನಿವಾಸಪುರವನ್ನು "ರಿಪಬ್ಲಿಕ್ ಆಫ್ ಶ್ರೀನಿವಾಸಪುರ" ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯ ಮಾಡಿದೆ.
ಪೊಲೀಸರು ಮತ್ತು ಅಧಿಕಾರಿಗಳ ಸಮ್ಮುಖದಲ್ಲೇ ರಮೇಶ್ ಕುಮಾರ್ ಬೆಂಬಲಿಗರು ಬೀದಿ ರೌಡಿಗಳಂತೆ ಅನ್ನದಾತರ ಮೇಲೆ ಹಲ್ಲೆ ನಡೆಸಿರುವ ಘಟನೆಯೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದು ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಜಿಂಗಲಕುಂಟೆ ಗ್ರಾಮದಲ್ಲಿ ರಮೇಶ್ ಕುಮಾರ್ 61 ಎಕರೆ 39 ಗುಂಟೆ ಅರಣ್ಯ ಒತ್ತವರಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಜಂಟಿ ಸರ್ವೆಗೆ ಕೋರ್ಟ್ ಸೂಚಿಸಿದ್ದು, ಕೇಂದ್ರ ಅರಣ್ಯ ಸಚಿವಾಲಯದ ಆದೇಶವೂ ಇದೆ ಎಂದು ಜೆಡಿಎಸ್ ಹೇಳಿದೆ.

ಈ ಸಂಬಂಧ ಅರಣ್ಯ ಭೂಮಿಯ ಜಂಟಿ ಸರ್ವೆ ಹಾಗೂ ಒತ್ತುವರಿ ತೆರವಿಗೆ ಆಗ್ರಹಿಸಿ ಇಂದು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಭೂಗಳ್ಳ ರಮೇಶ್ ಕುಮಾರ್ ಆಪ್ತರು ಹಲ್ಲೆ ನಡೆಸಿರುವುದು ಖಂಡನೀಯ. ಕರ್ನಾಟಕ ಸರ್ಕಾರ ತಮ್ಮ ನಾಯಕನ ಬೆನ್ನಿಗೆ ನಿಂತಿದ್ದು, ಸರ್ವೇ ಕಾರ್ಯವನ್ನು ನಿಲ್ಲಿಸಿದೆ ಎಂದು ಆರೋಪಿಸಿದೆ.
ಶ್ರೀನಿವಾಸಪುರದಲ್ಲಿ ರೈತರನ್ನು ಒಕ್ಕಲೆಬ್ಬಿಸಿ ಜಾಗ ಖಾಲಿ ಮಾಡಿಸುತ್ತಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಮ್ಮ ಪಕ್ಷದ ಹಿರಿಯ ನಾಯಕನ ಅರಣ್ಯ ಒತ್ತುವರಿ ತೆರವು ವಿಚಾರದಲ್ಲಿ ಕಣ್ಣಿದ್ದು ಕುರುಡರಾಗಿ ಕೈಕಟ್ಟಿ ಕೂತಿದ್ದಾರೆ. ಲೂಟಿಕೋರ ಕಾಂಗ್ರೆಸ್ ಸರ್ಕಾರದಲ್ಲಿ ಕಾಂಗ್ರೆಸ್ಸಿಗರಿಗೆ ಒಂದು ನ್ಯಾಯ? ಬಡವರಿಗೆ ಮತ್ತೊಂದು ನ್ಯಾಯವೇ? ಎಂದು ಪ್ರಶ್ನೆ ಮಾಡಿದೆ.
ಏನಿದು ಪ್ರಕರಣ?: ಬರೋಬ್ಬರಿ 64 ಎಕರೆ ಅರಣ್ಯ ಭೂಮಿ ಒತ್ತುವರಿ ಪ್ರಕರಣದಲ್ಲಿ ರಮೇಶ್ ಕುಮಾರ್ ಅವರ ಹೆಸರು ಮುನ್ನೆಲೆಗೆ ಬಂದಿತ್ತು. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಬಳಿಯಿರುವ ಅರಣ್ಯ ಭೂಮಿ ಒತ್ತುವರಿ ಆರೋಪ ರಮೇಶ್ ಕುಮಾರ್ ಅವರನ್ನು ಸುತ್ತಿಕೊಂಡಿತ್ತು. ಈ ಭಾಗದಲ್ಲಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ಸರ್ವೇ ಮಾಡಲು ಮುಂದಾಗಿದ್ದು, ಇದಕ್ಕೆ ದಿನಾಂಕವೂ ನಿಗದಿಯಾಗಿತ್ತು. ಅದರಂತೆ ಹೊಸಹುಡ್ಯ ಗ್ರಾಮದ 122 ಎಕರೆ ಭೂಮಿಯನ್ನು ಏಳು ಜನ ಒತ್ತುವರಿ ಮಾಡಿದ್ದಾರೆ ಎನ್ನಲಾಗಿದೆ. ಇದರಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೂಡ ಶಾಮೀಲಾಗಿದ್ದಾರೆ ಎನ್ನುವ ಆರೋಪವಿತ್ತು.

ಇದನ್ನು ವಿರೋಧಿಸಿ ಅರಣ್ಯ ಭೂಮಿಯ ಜಂಟಿ ಸರ್ವೆ ಹಾಗೂ ಒತ್ತುವರಿ ತೆರವಿಗೆ ಆಗ್ರಹಿಸಿ ರೈತರು ಇಲ್ಲಿನ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ರಮೇಶ್ ಕುಮಾರ್ ಬೆಂಬಲಿಗರು ರೈತರ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಕೂಡ ವೈರಲ್ ಆಗಿವೆ.












Click it and Unblock the Notifications