ಗ್ರಾ.ಪಂ ಚುನಾವಣೆ; ಕೋಲಾರದಲ್ಲಿ ವಿನೂತನ ಪ್ರತಿಭಟನೆ
ಕೋಲಾರ, ಡಿಸೆಂಬರ್ 15: ಬಂಗಾರಪೇಟೆ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ವ್ಯಕ್ತಿಯೊಬ್ಬರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಮಂಗಳವಾರ ತಾಲೂಕಿನ ಜೋಡೇನಹಳ್ಳಿ ಗ್ರಾಮದ ಲಕ್ಷ್ಮೀನಾರಾಯಣ ಪ್ರಸಾದ್ ಎಂಬುವವರು ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವರಲಕ್ಷ್ಮಿ ಎಂಬ ಮಹಿಳೆ ನಕಲಿ ಜಾತಿ ಪ್ರಮಾಣ ಸೃಷ್ಟಿ ಮಾಡಿ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು.
ಸರ್ಕಾರಿ ಸೌಲಭ್ಯಕ್ಕಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಸೃಷ್ಟಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 2018ರಲ್ಲಿಯೂ ಹೀಗೆ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಚುನಾವಣೆ ಎದುರಿಸಿದ್ದರು ಎಂದು ಆರೋಪ ಮಾಡಿದ್ದಾರೆ. ಈ ಕುರಿತು ತಹಶೀಲ್ದಾರ್ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.

ಕೋಲಾರ ಜಿಲ್ಲೆಯಲ್ಲಿ 156 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ ಡಿಸೆಂಬರ್ 22 ಮತ್ತು 27ರಂದು ಎರಡು ಹಂತಗಳಲ್ಲಿ ಮತದಾನ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯ ತನಕ ನಡೆಯಲಿದೆ. ಮತಗಳ ಎಣಿಕೆ ಡಿಸೆಂಬರ್ 30ರಂದು ಬೆಳಗ್ಗೆ 8 ಗಂಟೆಗೆ ನಡೆಯಲಿದೆ.
ಮೊದಲ ಹಂತದಲ್ಲಿ ಕೋಲಾರ, ಮಾಲೂರು, ಶ್ರೀನಿವಾಸಪುರ ತಾಲೂಕುಗಳಲ್ಲಿ ಡಿಸೆಂಬರ್ 22 ರಂದು, ಎರಡನೇ ಹಂತದಲ್ಲಿ ಮುಳಬಾಗಿಲು, ಬಂಗಾರಪೇಟೆ, ಕೆ.ಜಿ.ಎಫ್ ತಾಲೂಕುಗಳಲ್ಲಿ ಡಿಸೆಂಬರ್ 27ರಂದು ಚುನಾವಣೆ ನಡೆಯಲಿದೆ.
ಜಿಲ್ಲೆಯಲ್ಲಿ 4,41,885 ಪುರುಷ ಮತದಾರರು ಮತ್ತು 4,36,851 ಮಹಿಳಾ ಮತದಾರರು, 52 ಇತರೆ ಮತದಾರರು ಸೇರಿದಂತೆ ಒಟ್ಟು 8,78,788 ಮತದಾರರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಹೊಂದಿದ್ದಾರೆ.












Click it and Unblock the Notifications