ಡಿ.25 ರಂದು ಪ್ರಧಾನಿ ನರೇಂದ್ರ ಮೋದಿ ಜೊತೆ ಕೋಲಾರದ ರೈತ ವಿಡಿಯೋ ಸಂವಾದ
ಕೋಲಾರ, ಡಿಸೆಂಬರ್ 24: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ (ಡಿ.25) ರಂದು ಪಿಎಂ ಕಿಸಾನ್ ಯೋಜನೆ ಅನುಷ್ಠಾನ ಹಾಗೂ ಅನುಕೂಲಗಳ ಬಗ್ಗೆ ರೈತರೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ರೈತರೊಂದಿಗಿನ ವಿಡಿಯೋ ಸಂವಾದದಲ್ಲಿ ಕರ್ನಾಟಕ ರಾಜ್ಯದಿಂದ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಜುಂಜನಹಳ್ಳಿ ರೈತ ಚಂದ್ರಪ್ಪ ಅವರು ಭಾಗವಹಿಸಲಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆಯ 7ನೇ ಕಂತಿನ 18 ಸಾವಿರ ಕೋಟಿ ರೂ. ಸುಮಾರು 9 ಕೋಟಿ ರೈತರ ಖಾತೆಗೆ ನೇರವಾಗಿ ಜಮಾ ಆಗಲಿದೆ. ಹೀಗಾಗಿ ಯೋಜನೆಯ ಉಪಯೋಗಗಳು ಸ್ಥಳೀಯ ರೈತರ ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಧಾನಿ ಮೋದಿ ಅವರೊಂದಿಗೆ ರೈತ ಚಂದ್ರಪ್ಪ ಅವರು ಬೆಂಗಳೂರಿನ ನಬಾರ್ಡ್ ಬ್ಯಾಂಕಿನಲ್ಲಿ ಮಧ್ಯಾಹ್ನ 12 ಗಂಟೆಗೆ ವಿಡಿಯೋ ಸಂವಾದದಲ್ಲಿ ನಡೆಸಲಿದ್ದಾರೆ.

ಡಿ.25 ರಂದು ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದಂದು ಉತ್ತಮ ಆಡಳಿತ ದಿನವೆಂದು ಆಚರಿಸಲಾಗುತ್ತದೆ. ಹೀಗಾಗಿ ದೇಶದ 6 ರಾಜ್ಯದ ರೈತರೊಂದಿಗೆ ವಿಡಿಯೋ ಸಂವಾದವನ್ನು ಮಾಡಲಿದ್ದಾರೆ.

ಈ ಕುರಿತು ಮಾತನಾಡಿರುವ ರೈತ ಚಂದ್ರಪ್ಪ, ನಾನು ಮೂಲತಃ ರೈತಾಪಿ ವರ್ಗದವನಾಗಿದ್ದು, ಪ್ರಧಾನಿ ಜೊತೆಗೆ ಸಂವಾದ ಮಾಡುತ್ತಿರುವದು ನನ್ನ ಅದೃಷ್ಟ. ಜಿಲ್ಲೆಯ ಹಾಗೂ ರಾಜ್ಯದ ರೈತರ ಪ್ರತಿನಿಧಿಯಾಗಿ, ಅವರ ಸಮಸ್ಯೆಗಳನ್ನು ಮೋದಿ ಅವರೊಂದಿಗೆ ಹಂಚಿಕೊಳ್ಳಲಿದ್ದೇನೆ ಎಂದು ಚಂದ್ರಪ್ಪ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.












Click it and Unblock the Notifications