ಕಮಿಷನ್ ದಂಧೆ: ಕೋಲಾರ ಎಪಿಎಂಸಿ ಮಾರುಕಟ್ಟೆ ಮೇಲೆ ಉಪಲೋಕಾಯುಕ್ತ ದಾಳಿ
ಕೋಲಾರ, ಮಾರ್ಚ್, 10: ಸಾಮಾನ್ಯವಾಗಿ ಆದಾಯಕ್ಕಿಂತ ಹೆಚ್ಚು ಹಣ ಆಸ್ತಿ ಹೊಂದಿರುವವ ಮೇಲೆ ಲೋಕಾಯುಕ್ತ ದಾಳಿ ಮಾಡಲಾಗುತ್ತದೆ. ಇನ್ನು ಇದೀಗ ಕೋಲಾರದಲ್ಲಿ ಉಪಲೋಕಾಯುಕ್ತ ಬಿ.ವೀರಪ್ಪ ಅವರು ಎಪಿಎಂಸಿ ಮಾರುಕಟ್ಟೆ ಹಾಗೂ ಜೈಲಿಗೆ ಇಂದು (ಮಾರ್ಚ್ 10) ಬೆಳ್ಳಂಬೆಳಗ್ಗೆ ದಿಢೀರ್ ಭೇಟಿ ನೀಡಿ ಅವ್ಯವಸ್ಥೆ ಕಂಡು ಆಕ್ರೋಶ ಹೊರಹಾಕಿದರು.
ಎಪಿಎಂಸಿಯಲ್ಲಿ ರೈತರಿಗೆ ನೀರಿನ ವ್ಯವಸ್ಥೆ ಇಲ್ಲ, ತ್ಯಾಜ್ಯ ತುಂಬಿ ತುಳುಕಾಡುತ್ತಿದೆ. ಇರಿಂದ ಕೆಟ್ಟ ವಾಸನೆ ಹರಡಿಬಿಟ್ಟಿದೆ. ಈ ನಡುವೆಯೂ ಕಮಿಷನ್ ಹೆಚ್ಚಿಗೆ ವಸೂಲಿ ಮಾಡುತ್ತಿದ್ದಾರೆ. ಒಳಗೆ ಏನು ನಡೆಯುತ್ತಿದೆ ಎಂಬುದು ಅಲ್ಲಿನ ಅಧಿಕಾರಿಗಳಿಗೇ ಗೊತ್ತಿಲ್ಲ. ಅವರು ಏನು ಕೆಲಸ ಮಾಡುತ್ತದ್ದರೆ ಪರಿಶೀಲಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುತ್ತೇನೆ ಎಂದರು.

ವಸತಿ ಪ್ರದೇಶದ ನಡುವೆ ಜೈಲು ಇದೆ. ಪಕ್ಕದ ಮನೆಯಿಂದ ಏನಾದರೂ ಎಸೆಯಬಹುದು. ಮೊದಲು ನಗರದ ಹೊರಕ್ಕೆ ಸ್ಥಳಾಂತರಿಸಿ ಎಂದು ಸೂಚನೆ ನೀಡಿದರು. ನಗರದ ಅನೈರ್ಮಲ್ಯ ಪ್ರಶ್ನಿಸಿದಾಗ ಸಿಬ್ಬಂದಿ ಇಲ್ಲ ಎಂಬ ಉತ್ತರ ಕೇಳಿಬಂದಿದೆ. ಆಗ ವೀರಪ್ಪ ಸಿಬ್ಬಂದಿ ಕೊರತೆ ಊಟ ಮಾಡದೇ ಇರುತ್ತೀರಾ? ಏಕೆ ಸ್ವಚ್ಛತೆ ಮಾಡುತ್ತಿಲ್ಲ? ಲೋಕಾಯುಕ್ತದಲ್ಲಿ ಸಿಬ್ಬಂದಿ ಇಲ್ಲ ಎಂದು ನಾವು ಕೆಲಸ ಮಾಡದೇ ಸುಮ್ಮನಿದ್ದೇವೆಯೇ ಎಂದು ಕೋಲಾರ ನಗರಸಭೆ ಪೌರಾಯುಕ್ತರಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಯಾವ ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ?: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಇತ್ತೀಚೆಗಷ್ಟೇ ಬೆಂಗಳೂರು, ಕೋಲಾರ, ತುಮಕೂರು, ಕಲಬುರಗಿ, ವಿಜಯಪುರ, ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿತ್ತು.
ಸಾಮಾನ್ಯವಾಗಿ ಆದಾಯಕ್ಕಿಂತ ಹೆಚ್ಚು ಹಾಗೂ ದಾಖಲೆ ರಹಿತ ಹಣ ಹೊಂದಿರುವ ಅಧಿಕಾರಿಗಳ ಕಚೇರಿ, ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸುತ್ತಾರೆ. ಹಾಗೆಯೇ ಮಾರ್ಚ್ 06ರಂದು ದಾವಣಗೆರೆ ಜಿಲ್ಲೆಯಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.
ಜಿಲ್ಲಾ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಘಟಕದ ಜಿಲ್ಲಾ ಸಾಂಖಿಕ ಅಧಿಕಾರಿ ಡಾ.ಜಿ.ಎಸ್.ನಾಗರಾಜು ಅವರಿಗೆ ಸೇರಿದ 5 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ನಾಗರಾಜು ಅವರ ಮನೆ, ತಂದೆ ಷಣ್ಮುಖಪ್ಪ ಅವರ ನಿವಾಸ, ಫಾರಂಹೌಸ್, ಕಚೇರಿ ಹಾಗೂ ಕುಟುಂಬದ ಕಿಡಿತದಲ್ಲಿರುವ ಸಹಕಾರ ಸಂಘದ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಚಿನ್ನಾಭರಣ, ಹಣ ಸೇರಿದಂತೆ ಅಪಾರ ಸಂಪತ್ತು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಆದಾಯಕ್ಕಿಂತ ಹೆಚ್ಚು ಸಂಪತ್ತು ಹೊಂದಿದ ಆರೋಪದ ಮೇಲೆ ನಾಗರಾಜು ಅವರಿಗೆ ಸೇರಿದ 5 ಸ್ಥಳಗಳ ಮೇಲೆ ದಾಳಿ ನಡೆದಿದೆ. ಡಿವೈಎಸ್‌ಪಿ, ಎನ್ಸ್‌ಪೆಕ್ಟರ್ ಸೇರಿ ಹಲವು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಇದೀಗ ದಾಳಿ ಸ್ಥಳಗಳಲ್ಲಿ ಪರಿಶೀಲನೆ ಕಾರ್ಯ ನಡೆಯುತ್ತಿದೆ ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಕೌಲಾಪುರ ಮಾಹಿತಿ ನೀಡಿದ್ದಾರೆ.
* ಬೆಂಗಳೂರಿನ ಡಿಪಿಎಆರ್ ಚೀಫ್ ಇಂಜಿನಿಯರ್ ಟಿ.ಡಿ.ನಂಜುಡಪ್ಪ, ಬಿಬಿಎಂಪಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೆಚ್.ಬಿ.ಕಲ್ಲೇಶಪ್ಪ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
* ತುಮಕೂರಿನ ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪ ಮುಖ್ಯ ವೈದ್ಯಾಧಿಕಾರಿ ಡಾ. ಪಿ. ಜಗದೀಶ್; ಬಾಗಲಕೋಟೆಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಮಾಳಪ್ಪ ಸಾಬಣ್ಣ ದುರ್ಗದ; ಮತ್ತು ವಿಜಯಪುರದ ವಸತಿ ಮಂಡಳಿಯ ಎಫ್‌ಡಿಎ ಶಿವಾನಂದ ಶಿವ ಶಂಕರ್ ಕೆಂಭಾವಿ ಅವರ ಮೇಲೆ ದಾಳಿ ಸಹ ದಾಳಿ ನಡೆಸಲಾಗಿದೆ.
* ಕೋಲಾರದಲ್ಲಿ ಬೆಸ್ಕಾಂ ಎಇಇ ಜಿ.ನಾಗರಾಜ್ ಮನೆ ಹಾಗೂ ಅವರಿಗೆ ಸೇರಿದ ಮೂರು ಕಡೆ ದಾಳಿ ನಡೆದಿದೆ. ನಾಗರಾಜ್ ಪ್ರಸ್ತುತ ಬೆಂಗಳೂರು ರಾಜಾಜಿನಗರ ಎಇಇ ಬೆಸ್ಕಾಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಗರಾಜ್ ಅವರ ನಿವಾಸ, ಕೆ.ಆರ್.ಪುರಂ ಬಳಿಯ ಪ್ರಿಯದರ್ಶಿನಿ ಬಡಾವಣೆಯಲ್ಲಿನ ಮನೆ, ರಾಜಾಜಿನಗರ ಬೆಸ್ಕಾಂ ಕಚೇರಿ, ಅವರ ಸಂಬಂಧಿಕರೊಬ್ಬರ ಮನೆ ಮೇಲೆ ದಾಳಿ ನಡೆದಿದೆ.
* ಬಾಗಲಕೋಟೆಯಲ್ಲಿ ಪಂಚಾಯತ್ ರಾಜ್ ಇಲಾಖೆ ಅಕೌಂಟೆಂಟ್ ಮಲ್ಲೇಶ್ ಅವರ ಬಾಗಲಕೋಟೆ ಕಚೇರಿ, ಬೀಳಗಿ ತಾಲೂಕಿನ ತಳ್ಳಿಕೇರಿ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ನಡೆಯುತ್ತಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಲೋಕಾಯುಕ್ತ ಡಿವೈಎಸ್ಪಿ ಸಿದ್ದೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
* ವಿಜಯಪುರದಲ್ಲಿ ಕರ್ನಾಟಕ ಗೃಹ ಮಂಡಳಿ ಎಫ್‌ಡಿಎ ಶಿವಾನಂದ ಕೆಂಬಾವಿ ಅವರ ಮನೆ ಮತ್ತು ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ವಿಜಯಪುರ ನಗರದ ಸುಕೂನ್ ಕಾಲೋನಿಯಲ್ಲಿರುವ ನಿವಾಸ ಮತ್ತು ವಿಜಯಪುರ ಜಿಲ್ಲೆ ತಿಡಗುಂದಿ ಗ್ರಾಮದ ಬಳಿಯಿರುವ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಲೋಕಾಯುಕ್ತ ಎಸ್ಪಿ ಡಿ. ಮಲ್ಲೇಶ್ ನೇತೃತ್ವದಲ್ಲಿ ಡಿವೈಎಸ್ಪಿ ಸುರೇಶ್ ರೆಡ್ಡಿ, ಸಿಪಿಐ ಆನಂದ ಟಕ್ಕಣ್ಣನವರ್ ಸೇರಿದಂತೆ ಅಧಿಕಾರಿಗಳ ತಂಡ ಈ ದಾಳಿಯನ್ನು ನಡೆಸಿದೆ.












Click it and Unblock the Notifications