Kolar Congress Ticket: 'ಕೋಲಾರಕ್ಕೆ ಸಿದ್ದರಾಮಯ್ಯ ಅಭ್ಯರ್ಥಿ ಆಗಲೇಬೇಕು' ಕೊತ್ತೂರು ಮಂಜುನಾಥ್
ಕಾಂಗ್ರೆಸ್ ಇಂದು ತನ್ನ 43 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ರಿಲೀಸ್ ಮಾಡಿದ್ದು, ಸಿದ್ದರಾಮಯ್ಯ ಅವರಿಗೆ ಕೋಲಾರ ಟಿಕೆಟ್ ಮಿಸ್ ಆಗಿದೆ. ಕೋಲಾರದ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಶಾಕ್ ಕೊಟ್ಟಿದೆ. ಇದರಿಂದ ಸಿದ್ದರಾಮಯ್ಯ ಅವರ ಎರಡು ಕನಸು ಹುಸಿಯಾಗಿದೆ.
ಕೋಲಾರದಿಂದ ಸಿದ್ದರಾಮಯ್ಯ ಅವರೇ ಸ್ಪರ್ಧೆ ಮಾಡಬೇಕು ಎನ್ನುವ ಅಭಿಮಾನಿಗಳ ಒತ್ತಾಯ ಕೂಡ ಹೈಕಮಾಂಡ್ ಕಣ್ಣಿಗೆ ಬಿದ್ದಂತೆ ಕಾಣಿಸುತ್ತಿಲ್ಲ. ಹೀಗಾಗಿ ಕೋಲಾರದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್‌ನ ಕೋಲಾರ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ಅವರೂ ಕೋಲಾರಕ್ಕೆ ಸಿದ್ದರಾಮಯ್ಯ ಅಭ್ಯರ್ಥಿ ಆಗಲೇಬೇಕು ಎಂದಿದ್ದಾರೆ.

ಸಿದ್ದರಾಮಯ್ಯನವರ ಎರಡು ಕ್ಷೇತ್ರ ಸ್ಪರ್ಧೆಗೆ ಸೊಪ್ಪುಹಾಕದ ಕಾಂಗ್ರೆಸ್ ಹೈಕಮಾಂಡ್ ಕೋಲಾರ ಕ್ಷೇತ್ರಕ್ಕೆ ಕೊತ್ತೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಿದೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೊತ್ತೂರು ಮಂಜುನಾಥ್, 'ನನಗೆ ಕೋಲಾರದಿಂದ ಟಿಕೆಟ್ ಘೋಷಣೆ ಮಾಡಿರುವುದು ಗೊತ್ತೇ ಇಲ್ಲ. ಪಕ್ಷದಲ್ಲಿ ಹಿರಿಯ ನಾಯಕರು ಕುಳಿತು ಮಾತನಾಡಿ ಬಳಿಕ ನಿರ್ಧಾರ ಮಾಡಬೇಕಿತ್ತು. ಕೋಲಾರದಿಂದ ಸಿದ್ದರಾಮಯ್ಯ ಅವರೇ ಸ್ಪರ್ಧೆ ಮಾಡಬೇಕು. ಇದು ನನ್ನ ಆಸೆಯೂ ಕೂಡ ಹೌದು' ಎಂದಿದ್ದಾರೆ.
ಈ ಹಿಂದೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, 'ನಾನು ಕೋಲಾರ ಹಾಗೂ ವರುಣಾ ಎರಡೂ ಕ್ಷೇತ್ರದಿಂದ ಟಿಕೆಟ್ ಕೇಳಿದ್ದೇನೆ. ಹೈಕಮಾಂಡ್ ಹೇಳಿದ್ರೆ ಎರಡೂ ಕಡೆ ಕಣಕ್ಕಿಳಿಯುತ್ತೇನೆ' ಎಂದಿದ್ದರು. ಆದರೆ ವರುಣಾದಿಂದ ಮಾತ್ರ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡಿದೆ.

ಇನ್ನೂ ಬಿಜೆಪಿ ಕೋಲಾರದಲ್ಲಿ ವರ್ತೂರು ಪ್ರಕಾಶ್ ಅವರನ್ನು ಚುನಾವಣಾ ಕಣಕ್ಕಿಳಿಸಿದೆ. ಕೊತ್ತೂರು ಮಂಜುನಾಥ್ ಹಾಗೂ ವರ್ತೂರು ಪ್ರಕಾಶ್ ನಡುವೆ ಈ ಬಾರಿ ಭಾರೀ ಪೈಪೋಟಿ ನಡೆಯುವ ಸಾಧ್ಯತೆ ಇದೆ.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಅಹಿಂದ ಮತಗಳೇ ಬಹುಸಂಖ್ಯೆಯಲ್ಲಿವೆ. ಅಹಿಂದ ನಾಯಕ ಸಿದ್ದರಾಮಯ್ಯಗೆ ಈ ಮತಗಳು ತಮ್ಮ ಕೈ ಹಿಡಿಯುವ ಭರವಸೆ ಇದೆ. ಶೇ. 76 ರಷ್ಟು ಅಹಿಂದ ಮತಗಳು ಕ್ಷೇತ್ರದಲ್ಲಿವೆ. ಎಸ್ ಸಿ ಎಸ್ ಟಿ ಮತಗಳು 60 ರಿಂದ 70 ಸಾವಿರವಿದೆ. ಇನ್ನು ಮುಸ್ಲಿಮರ ಮತಗಳು 50 ಸಾವಿರದಷ್ಟಿದೆ. ಇನ್ನುಳಿದಂತೆ ಕುರುಬರ ಮತಗಳು 34 ಸಾವಿರ ಇದೆ ಹಾಗೂ ಒಕ್ಕಲಿಗರ ಮತಗಳು ಸುಮಾರು 30 ಸಾವಿರ ಇವೆ ಎಂದು ಅಂದಾಜಿಸಲಾಗಿದೆ. ಹೀಗಿರುವಾಗ ಅಹಿಂದ ಮತಗಳು ಸಿದ್ದರಾಮಯ್ಯ ಪರವಾಗಿ ಚಲಾವಣೆ ಆಗಬಹುದು ಎಂಬ ವಿಶ್ವಾಸದಲ್ಲಿ ಸಿದ್ದರಾಮಯ್ಯ ಅವರಿಗೇ ಟಿಕೆಟ್ ಕೊಡಬೇಕು ಎಂಬ ಮಾತುಗಳು ಕೇಳಿಬಂದಿದ್ದವು.
ಕೋಲಾರ ಕ್ಷೇತ್ರದಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶ್ರೀನಿವಾಸ್ ಗೌಡ ಅವರು ಸ್ಪರ್ಧಿಸಿ 82,788 ಮತಗಳನ್ನು ಪಡೆದುಕೊಂಡು ಗೆಲವು ಸಾಧಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ನಡೆಸಿದ್ದ ವರ್ತೂರು ಪ್ರಕಾಶ್ 35,544 ಮತಗಳನ್ನು ಪಡೆದುಕೊಂಡಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ವೆಂಕಟ ಚಲಪತಿ 12, 458 ಮತಗಳನ್ನಷ್ಟೇ ಪಡೆದುಕೊಂಡಿದ್ದರು. ಇದನ್ನು ಗಮನಿಸಿದರೆ ಸಾಂಪ್ರದಾಯಿಕವಾಗಿ ಬಿಜೆಪಿ ಈ ಕ್ಷೇತ್ರದಲ್ಲಿ ಬಲ ಇಲ್ಲ. ಆದರೆ ಇದೀಗ ವರ್ತೂರ್ ಪ್ರಕಾಶ್ ಬಿಜೆಪಿ ಟಿಕೆಟ್ ನೀಡಿದೆ.
ಆದರೀಗ ಸಿದ್ದರಾಮಯ್ಯ ಲೆಕ್ಕಚಾರಗಳು ಬಡಮೇಲಾಗಿವೆ. ಹೀಗಾಗಿ ಮುಂದಿನ ಚುನಾವಣೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.











Click it and Unblock the Notifications