ಕೋಲಾರ: ಆಸ್ತಿ ವಿಚಾರಕ್ಕೆ ಸ್ವಾಮೀಜಿ ಹತ್ಯೆ, ಇಬ್ಬರು ಸ್ವಾಮೀಜಿ ಸೇರಿ ಮೂವರ ಬಂಧನ
ಕೋಲಾರ, ಜೂನ್ 23: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಸಂತಳ್ಳಿಯಲ್ಲಿರುವ ಆನಂದ ಮಾರ್ಗ ಆಶ್ರಮದಲ್ಲಿ ಆಸ್ತಿಗಾಗಿ ಸ್ವಾಮೀಜಿಯ ಹತ್ಯೆ ನಡೆದಿದೆ. ಆಚಾರ್ಯ ಚಿನ್ಮಯಾನಂದ ಅವದೂತ (70) ಕೊಲೆ ಮಾಡಿದ ಇಬ್ಬರು ಸ್ವಾಮೀಜಿಗಳು ಸೇರಿ ಮೂರು ಆರೋಪಿಗಳನ್ನು ಬಂಧಿಸಲಾಗಿದೆ.
ಆಚಾರ್ಯ ಚಿನ್ಮಯಾನಂದ ಕೊಲೆ ಪ್ರಕರಣದ ತನಿಖೆ ಕೈಗೊಂಡ ಮಾಲೂರು ಪೊಲೀಸರು ಆಚಾರ್ಯ ಧರ್ಮಪ್ರಾಣಾನಂದ (45), ಆಚಾರ್ಯ ಪ್ರಾಣೇಶ್ವರ್ (48) ಮತ್ತು ಅರುಣ್ ಕುಮಾರ್ (55) ಬಂಧಿಸಿದ್ದಾರೆ. ಇತರ ಆರೋಪಿಗಳ ಪತ್ತೆಗೆ ಹುಡುಕಾಟ ನಡೆದಿದೆ.

ಆಚಾರ್ಯ ಧರ್ಮಪ್ರಾಣಾನಂದ ಅವದೂತ ಕೊಲೆ ಪ್ರಕರಣದ ಮೊದಲ ಆರೋಪಿ. ಆಚಾರ್ಯ ಪ್ರಾಣೇಶ್ವರ್ 2ನೇ ಆರೋಪಿ ಮತ್ತು ಅರುಣ್ ಕುಮಾರ್ 3ನೇ ಆರೋಪಿ. ಆಚಾರ್ಯ ಚಿನ್ಮಯಾನಂದ ಶೌಚಾಲಯಕ್ಕೆ ಹೋಗಿದ್ದಾಗ ಮುಖಕ್ಕೆ ಸ್ಪ್ರೇಯನ್ನು ಸಿಂಪಡಿಸಿ, ದೊಣ್ಣೆಯಿಂದ ಹೊಡೆದು ಅವರನ್ನು ಹತ್ಯೆ ಮಾಡಲಾಗಿದೆ.
ಬೆಚ್ಚಿಬಿದ್ದ ಕೋಲಾರದ ಜನರು: ಆಚಾರ್ಯ ಚಿನ್ಮಯಾನಂದ ಅವದೂತರು ಜೂನ್ 22ರ ಬೆಳಗ್ಗೆ ಸುಮಾರು 6 ಗಂಟೆಯಲ್ಲಿ ಶೌಚಾಲಯಕ್ಕೆ ಹೋಗಿದ್ದರು. ಆಗ ಆನಂದ ಮಾರ್ಗ ಕಾಲೇಜಿನ ಆಚಾರ್ಯ ಧರ್ಮಪ್ರಾಣಾನಂದ ಅವದೂತ ಮತ್ತು ಆಚಾರ್ಯ ಪ್ರಾಣೇಶ್ವರ್ ಕೊಲೆ ಮಾಡುವ ಉದ್ದೇಶದಿಂದಲೇ ದೊಣ್ಣೆ ಮತ್ತು ಯಾವುದೋ ಸ್ಪ್ರೇಯನ್ನು ತೆಗೆದುಕೊಂಡು ಅವರನ್ನು ಹಿಂಬಾಲಿಸಿದ್ದರು.
ಶೌಚಾಲಯದ ಬಾಗಿಲು ಒಡೆದು ಒಳ ನುಗ್ಗಿ ಆಚಾರ್ಯ ಚಿನ್ಮಯಾನಂದ ಅವದೂತ ಅವರ ಮುಖಕ್ಕೆ ಸ್ಪ್ರೇಯನ್ನು ಸಿಂಪಡಿಸಿ ನಂತರ ಕೈಗಳಿಂದ ಹೊಡೆದು, ದೊಣ್ಣೆಗಳಿಂದ ತಲೆಗೆ ಮತ್ತು ಇತರೆ ಕಡೆ ಹೊಡೆದು ನಂತರ ಅವರನ್ನು ಅಲ್ಲಿಂದ ಎಳೆದುಕೊಂಡು ಕುಟೀರದ ಮನೆಗೆ ಬಂದಿದ್ದಾರೆ.
ಆಗ 3ನೇ ಆರೋಪಿ ಅರುಣ್ ಕುಮಾರ್ ಸಹ ಜೊತೆ ಸೇರಿದ್ದು, ಮೂರು ಜನರು ಪುನಃ ದೊಣ್ಣೆಯಿಂದ ಆಚಾರ್ಯ ಚಿನ್ಮಯಾನಂದ ಅವದೂತ ಅವರ ತಲೆ, ಮುಖ, ಎರಡು ಕೈ, ಕಾಲುಗಳಿಗೆ ಹೊಡೆದಿದ್ದಾರೆ. ಆಚಾರ್ಯ ಚಿನ್ಮಯಾನಂದ ಅವದೂತರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಆಗ ಅವರ ಬಳಿ ಇದ್ದ ಮೊಬೈಲ್ ಮತ್ತು ಕೀಗಳನ್ನು ಒತ್ತಾಯ ಪೂರ್ವಕವಾಗಿ ಕಿತ್ತುಕೊಂಡಿದ್ದಾರೆ. ಆಗ ಸ್ಥಳೀಯರು ಗಲಾಟೆಯನ್ನು ಬಿಡಿಸಿ ಗಾಯಗೊಂಡಿದ್ದ ಆಚಾರ್ಯ ಚಿನ್ಮಯಾನಂದ ಅವದೂತರನ್ನು ಉಪಚರಿಸಿ, ಆಂಬುಲೆನ್ಸ್ ಮೂಲಕ ಮಾಲೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ವೈದ್ಯರ ಸಲಹೆ ಮೇರೆಗೆ ಕೋಲಾರದ ಆರ್. ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಮಧ್ಯಾಹ್ನ 1.30ರ ವೇಳೆಗೆ ಆಚಾರ್ಯ ಚಿನ್ಮಯಾನಂದ ಅವದೂತ ಆರ್. ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆನಂದ ಮಾರ್ಗ ಕಾಲೇಜಿನ ಜಮೀನಿನ ಮತ್ತು ಆಡಳಿತ ನಡೆಸುವ ವೈಖರಿ ಬಗ್ಗೆ ಇದ್ದ ವೈಷಮ್ಯದಿಂದ ಮೂವರು ಆರೋಪಿಗಳು ಒಳಸಂಚು ರೂಪಿಸಿ ಅವರ ಬಳಿ ಇದ್ದ ಮೊಬೈಲ್ ಮತ್ತು ಕೀಗಳನ್ನು ದುರುದ್ದೇಶದಿಂದ ಕಸಿದುಕೊಂಡಿದ್ದು, ಉದ್ದೇಶ ಪೂರ್ವಕವಾಗಿ ಆಚಾರ್ಯ ಚಿನ್ಮಯಾನಂದ ಅವದೂತ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಎಸ್‌ಪಿ ನಾರಾಯಣ ಎಂ ಖುದ್ದಾಗಿ ಭೇಟಿ ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಮಾಲೂರು ಪೊಲೀಸರು ಆಚಾರ್ಯ ಧರ್ಮಪ್ರಾಣಾನಂದ, ಆಚಾರ್ಯ ಪ್ರಾಣೇಶ್ವರ್, ಅರುಣ್ ಕುಮಾರ್ ಬಂಧಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ.
ಆನಂದ ಮಾರ್ಗ ಆಶ್ರಮ ಪಶ್ಚಿಮ ಬಂಗಾಳದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. 80ರ ದಶಕದಲ್ಲಿ ಆಶ್ರಮದ ಸ್ವಾಮೀಜಿಯೊಬ್ಬರು ಮಾಲೂರಿಗೆ ಭೇಟಿ ನೀಡಿದ್ದರು. ಆಗ ಕುಟುಂಬವೊಂದು ಶಿಕ್ಷಣ ಸಂಸ್ಥೆ ಆರಂಭಿಸಲು 3 ಎಕರೆ ಜಮೀನು ದಾನವಾಗಿ ನೀಡಿತ್ತು. ಅದೇ ಜಮೀನಿನಲ್ಲಿ ಪಾಲಿಟೆಕ್ನಿಕ್ ಆರಂಭಿಸಲಾಗಿತ್ತು.
ಹಂತ ಹಂತವಾಗಿ ಜಿಲ್ಲೆಯಲ್ಲಿ ಆಶ್ರಮ 10 ಎಕರೆಗಿಂತಲೂ ಹೆಚ್ಚು ಜಮೀನು ಖರೀದಿ ಮಾಡಿತ್ತು. ಈ ವಿಚಾರವಾಗಿ ಸ್ವಾಮೀಜಿಗಳ ನಡುವೆ ವಿವಾದ ಉಂಟಾಗಿತ್ತು. ವಿವಾದ ಕೋರ್ಟ್‌ಗೆ ಹೋಗಿ ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು.












Click it and Unblock the Notifications