ಮದನಪಲ್ಲಿ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಆಂಧ್ರ ಮೂಲದ ದಂಪತಿ ಸಾವು
ಮಗಳನ್ನು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಿಟ್ಟು ವಾಪಸ್ ಬರುವ ವೇಳೆಯಲ್ಲಿ ಮದನಪಲ್ಲಿ-ಬೆಂಗಳೂರು ಹೆದ್ದಾರಿ ಕಾಮಗಾರಿ ಕಾರು ಅಪಘಾತ ಸಂಭವಿಸಿದ್ದು ಆಂಧ್ರ ಮೂಲದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೋಲಾರ, ಮಾರ್ಚ್ 18: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಕ್ರಾಸ್ ಬಳಿ ಟೊಯೊಟಾ ಇಟಿಯಸ್ ಕಾರು ಅಪಘಾತವಾಗಿದ್ದು, ಕಾರಿನಲ್ಲಿದ್ದ ಆಂಧ್ರ ಪ್ರದೇಶದ ಮದನಪಲ್ಲಿ ಮೂಲದ ಶಫೀ (55) ಹಾಗೂ ಶಮಾ (50)ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಳ್ಳಂಬೆಳಿಗ್ಗೆ ತಮ್ಮ ಮಗಳನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ವಾಪಾಸ್ ಬರುವಾಗ ದುರ್ಘಟನೆ ಸಂಭವಿಸಿದೆ. ಮದನಪಲ್ಲಿ-ಬೆಂಗಳೂರು ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಈ ವೇಳೆ ಸರಿಯಾದ ಸೈನ್ ಬೋರ್ಡ್ಗಳಿಲ್ಲ. ಕಳೆದ ರಾತ್ರಿ ಬೇರೆ ಮಳೆ ಸುರಿದ ಹಿನ್ನೆಲೆ ರಸ್ತೆ ಬದಿಯಲ್ಲಿ ಕೆಸರು ಹೆಚ್ಚಾಗಿದೆ.

ಜೊತೆಗೆ ಬೆಳಗಿನ ಜಾವ ನಿದ್ದೆಯ ಮಂಪರಿನಲ್ಲಿ ಕಾರು ಚಲಾಯಿಸಿದ್ದಾರೆ. ಈ ವೇಳೆ ಮದನಪಲ್ಲಿಯತ್ತ ತೆರಳುತ್ತಿದ್ದ ಕಾರು ರಸ್ತೆ ಬಿಟ್ಟು ಸ್ವಲ್ಪ ಪಕ್ಕಕ್ಕೆ ಇಳಿದಿದೆ. ರಸ್ತೆ ಬಿಟ್ಟು ಇಳಿದ ಕಾರು ನೇರವಾಗಿ ರಸ್ತೆಯ ಪಕ್ಕದಲ್ಲಿದ್ದ ದೊಡ್ಡ ಹಳ್ಳಕ್ಕೆ ಬಿದ್ದಿದೆ. ಈ ವೇಳೆ ಹಳ್ಳದೊಳಗೆ ಇದ್ದ ದೊಡ್ಡ ಕಲ್ಲು ಬಂಡೆಗೆ ಕಾರು ಡಿಕ್ಕಿಯಾಗಿದೆ.
ಕಾನರಿಲ್ಲಿದ್ದ ಎರಡೂ ಏರ್ ಬ್ಯಾಗ್ ಓಪನ್ ಆಗಿತ್ತಾದರೂ ಪಲ್ಟಿಯಾದ ರಭಸಕ್ಕೆ ಇಬ್ಬರ ತಲೆಗೆ ಬಲವಾದ ಪೆಟ್ಟು ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಕಾರು ರಸ್ತೆ ಬಿಟ್ಟು ಹಳ್ಳಕ್ಕೆ ಬಿದ್ದ ಕಾರಣ ಯಾರೂ ಗಮನಿಸಿಲ್ಲ. ಬೆಳಿಗ್ಗೆ 7.30ರ ಸುಮಾರಿನಲ್ಲಿ ಕಾರು ಬಿದ್ದಿರುವುದನ್ನು ಗಮನಿಸಿ ಗೌನಿಪಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಕ್ರೇನ್ ಮೂಲಕ ಕಾರು ಮೇಲೆತ್ತಿ ನಂತರ ಮೃತರ ಶವಗಳ ಗುರುತು ಪತ್ತೆ ಮಾಡಿ ಶವಗಳನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಮೃತ ಶಫೀಉಲ್ಲಾ ಹಾಗೂ ಶಮಾ ದಂಪತಿಗೆ ಮೂರು ಜನ ಹೆಣ್ಣು ಮಕ್ಕಳಿದ್ದರು. ಶಫೀ ಸಿವಿಲ್ ಎಂಜಿನಿಯರ್ ಆಗಿದ್ದು ಆಂಧ್ರ, ಕರ್ನಾಟಕ ಸೇರಿದಂತೆ ಹಲವೆಡೆ ರಸ್ತೆ, ಬ್ರಿಡ್ಜ್ ಸೇರಿದಂತೆ ಹಲವು ಗುತ್ತಿಗೆ ಕಾಮಗಾರಿಗಳನ್ನು ಮಾಡಿಸುತ್ತಿದ್ದವರು. ಇನ್ನು ಶಫೀ ಶಫೀ ಮೂರು ಜನ ಹೆಣ್ಣು ಮಕ್ಕಳ ಪೈಕಿ ಇಬ್ಬರು ಮಕ್ಕಳಿಗೆ ಮದುವೆಯಾಗಿತ್ತು.
ಮೂರನೇ ಮಗಳು ಶಿಫಾ ಈಜಿಪ್ಟ್ನಲ್ಲಿ ಕೆಲಸ ಮಾಡುತ್ತಿದ್ದು, ರಜೆಯ ಮೇಲೆ ಊರಿಗೆ ಬಂದಿದ್ದರು. ವಾಪಸ್ ತೆರಳ ಬೇಕಿದ್ದು, ಬೆಳಗ್ಗೆ 7 ಗಂಟೆಗೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಮಗಳನ್ನು ಬಿಟ್ಟು ವಾಪಸ್ ಬರುವ ವೇಳೆಯಲ್ಲಿ ಈ ಅಪಘಾತವಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಇನ್ನು ಅಪಘಾತದ ವಿಷಯವನ್ನು ಏರ್ಲೈನ್ಸ್ ಮೂಲಕ ಈಜಿಪ್ಟ್ಗೆ ತೆರಳುತ್ತಿದ್ದ ಮಗಳಿಗೂ ತಿಳಿಸಿಲಾಗಿದೆ.
ಮದನಪಲ್ಲಿ ಮತ್ತು ಬೆಂಗಳೂರು ನಡುವಿನ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಈ ವೇಳೆ ಸರಿಯಾದ ಲೈಟ್ ವ್ಯವಸ್ಥೆ ಇಲ್ಲದೆ. ಸರಿಯಾದ ಸೈನ್ ಬೋರ್ಡ್ ಇಲ್ಲದ ಹಿನ್ನೆಲೆಯಲ್ಲಿ ಇದೇ ರೀತಿಯ ಹಲವು ಅಪಘಾತಗಳು ನಡೆಯುತ್ತಿವೆ. ಜೊತೆಗೆ ಕಾಮಗಾರಿ ಕೂಡ ಬಹಳ ನಿಧಾನವಾಗಿ ಮಾಡಲಾಗುತ್ತಿದೆ.
ಅಪಘಾತಕ್ಕೆ ಹೆದ್ದಾರಿ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರನ ನಿರ್ಲ್ಯಕ್ಷವೇ ಕಾರಣ ಎನ್ನುವುದು ಸ್ಥಳೀಯರು ಹಾಗೂ ಮೃತ ಸಂಬಂಧಿಕರ ಆರೋಪವಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ಮೇಲೆ ಪ್ರಕರಣ ದಾಖಲು ಮಾಡಬೇಕು ಎಂದು ಮದನಪಲ್ಲಿ ಮಾಜಿ ಶಾಸಕ ಶಹಜಹಾನ್ ಆಗ್ರಹಿಸಿದ್ದಾರೆ.
ಇನ್ನು ಅಪಘಾತಕ್ಕೆ ಸಂಬಂಧಿಸಿದಂತೆ ಮೃತರ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಹೆದ್ದಾರಿ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.












Click it and Unblock the Notifications