ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ಇಬ್ಬರು ಸಾವು, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
Bengaluru-Chennai Expressway Accident: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತದೆ. ಇನ್ನೂ ಇದೀಗ ಇದೇ ಎಕ್ಸ್‌ಪ್ರೆಸ್‌ನಲ್ಲಿ ಸರಣಿ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಸರಣಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಂಡಿದ್ಧಾರೆ. ಅವರನ್ನು ಬಂಗಾರಪೇಟೆ, ಕೆಜಿಎಫ್ ಹಾಗೂ ಕೋಲಾರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಈ ಘಟನೆ ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.

ಬೆಂಗಳೂರು-ಚೆನೈ ಎಕ್ಸ್‌ಪ್ರೆಸ್‌ವೇನಲ್ಲಿ ಟೆಂಪೋಗೆ ಈಚರ್ ವಾಹನ ಡಿಕ್ಕಿ ಹೊಡೆದಿದ್ದು, ಬಳಿಕ ಟೆಂಪೋ ಆ್ಯಂಬುಲೆನ್ಸ್ಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಆ್ಯಂಬುಲೆನ್ಸ್ ಚಾಲಕ ವಿಕ್ರಮ್ ಪಾಲ್ ಹಾಗೂ ಟೆಂಪೋ ಚಾಲಕ ಶಿವರಾಜ್ ಎಂಬುವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಟೆಂಪೋದಲ್ಲಿ ಬೆಂಗಳೂರಿನ ಎಸ್ಕೆಸಿ ಕ್ಯಾಟರಿಂಗ್ನ 15 ಜನ ಸಿಬ್ಬಂದಿ ಪ್ರಯಾಣ ಮಾಡುತ್ತಿದ್ದರು. ಅದರಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಘಟನೆ ಬಳಿಕ ಸ್ಥಳಕ್ಕೆ ಎಸ್ಪಿ ಶಿವಾಂಶು ರಜಪೂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎಕ್ಸ್‌ಪ್ರೆಸ್‌ವೇಗಳಲ್ಲಿ ಇಂತಹ ಅಪಘಾತ ಸಂಭವಿಸಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಹ ನಡೆದಿರುವ ಉದಾಹರಣೆಗಳಿವೆ.
ಅಪಘಾತದಲ್ಲಿ ಇಬ್ಬರು ಸಾವು: ಹಂಪಿಯಿಂದ ಬೆಂಗಳೂರಿಗೆ ಹೊರಟಿದ್ದ ಕಾರೊಂದು ಸೇತುವೆ ತಡೆಗೋಡೆಗೆ ಡಿಕ್ಕಿಯಾಗಿದೆ. ಈ ಅಪಘಾತದ ರಭಸಕ್ಕೆ ಇಬ್ಬರು ಸಾವು, 7 ಮಂದಿ ಗಾಯಗೊಂಡಿರುವ ಘಟನೆ ಕೂಡ್ಲಿಗಿ ತಾಲ್ಲೂಕಿನ ಬಣವಿಕಲ್ಲು ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಮೃತರನ್ನು ಬೆಂಗಳೂರು ಮೂಲದ ಪ್ರೀತಿ (35) ಮತ್ತು ಅವರ ಅವರ ಪುತ್ರ ಯಶ್ಚಿತ್ (1 ವರ್ಷ10 ತಿಂಗಳು) ಎಂದು ಗುರುತಿಸಲಾಗಿದೆ. ಇನ್ನು ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ನಿವಾಸಿ ಮೋಹನ್ ಕುಮಾರ್ ಅವರು ತಮ್ಮ ಕುಟುಂಬ ಹಾಗೂ ಸಂಬಂಧಿಕರೊಂದಿಗೆ ಮಂತ್ರಾಲಯಕ್ಕೆ ತೆರಳಿ ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ. ಹಂಪಿ ವೀಕ್ಷಣೆ ಮಾಡಿಕೊಂಡು ಊರಿಗೆ ಮರಳುವ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಕಾನಹೊಸಹಳ್ಳಿ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಮೋಹನ್ ಕುಮಾರ್ ಕಾರು ಚಾಲನೆ ಮಾಡುತ್ತಿದ್ದರು. ಅಪಘಾತದಲ್ಲಿ ಅವರ ಪುತ್ರ ಯಶ್ಚಿತ್ ಸ್ಥಳದಲ್ಲೇ ಮೃತಪಟ್ಟರು. ಅವರ ಪತ್ನಿ ಪ್ರೀತಿ ಅವರನ್ನು ಕೂಡ್ಲಿಗಿ ಆಸ್ಪತ್ರೆಗೆ ಕರೆತಂದು, ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗಕ್ಕೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿ ಮೃತಪಟ್ಟವರು. ಗಾಯಗೊಂಡಿರುವ ಮೋಹನ್ ಕುಮಾರ್, ರಾಧಾ, ಮರಿರಂಗಯ್ಯ, ರೂಪಾ, ಲಕ್ಷ್ಮಿದೇವಿ, ಚರಿತ್ ಹಾಗೂ ಮಿಥುನ್ ಅವರನ್ನು ಚಿತ್ರದುರ್ಗ ಮತ್ತು ದಾವಣಗೆರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ಪ್ರಕರಣ ಕಾನಹೊಸಹಳ್ಳಿ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications