ಕುಮಟಾದಲ್ಲಿ ದೇಶದ ಅತಿದೊಡ್ಡ ಬಿಳಿ ಹೆಬ್ಬಾವು ಪ್ರತ್ಯಕ್ಷ: 2ನೇ ಬಾರಿ ಬಳಿ ಹೆಬ್ಬಾವು ಕಂಡು ಹೌಹಾರಿದ ಜನ
ಕಾರವಾರ, ಆಗಸ್ಟ್ 30: ಎಲ್ಲೆಂದರಲ್ಲಿ ಹೆಬ್ಬಾವುಗಳು ಕಾಣಸಿಗುವುದು ಸಾಮಾನ್ಯ. ಆದರೆ ಕುಮಟಾದಲ್ಲಿ 2ನೇ ಬಾರಿಗೆ ಬಿಳಿ ಹೆಬ್ಬಾವೊಂದು ಪ್ರತ್ಯಕ್ಷವಾಗಿದ್ದು, ಭಾರತದಲ್ಲಿ ಈವರೆಗೆ ಸಿಕ್ಕ ಬಿಳಿ ಹೆಬ್ಬಾವಿನ ಪೈಕಿ ಇದು ದೊಡ್ಡ ಹೆಬ್ಬಾವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹೆಗಡೆ ಗ್ರಾಮದ ಗಾಂಧಿ ನಗರದ ದೇವಿ ನಾರಾಯಣ ಮುಕ್ರಿ ಎನ್ನುವವರ ಮನೆಯ ಅಂಗಳದಲ್ಲಿ ಮಂಗಳವಾರ ಬಿಳಿ ಹೆಬ್ಬಾವು ಕಾಣಿಸಿಕೊಂಡಿದೆ. ಇದೇ ಮೊದಲ ಬಾರಿ ಬಿಳಿ ಬಣ್ಣದ ಹಾವನ್ನು ಕಂಡು ಆತಂಕಗೊಂಡ ಮನೆಯವರು ತಕ್ಷಣ ಮನೆಯ ಸಮೀಪದ ಹೋಮ್ ಗಾರ್ಡ್ ಗಣೇಶ ಮುಕ್ರಿ ಮೂಲಕ ಉರಗ ತಜ್ಞ ಪವನ್ ನಾಯ್ಕ ಸಂಪರ್ಕ ಮಾಡಿದ್ದರು.

ರಾತ್ರಿ 12 ಘಂಟೆ ವೇಳೆ ಸ್ಥಳಕ್ಕೆ ತೆರಳಿದ ಉರಗ ತಜ್ಞ ಪವನ್ ನಾಯ್ಕ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಣೆ ಮಾಡಿದ್ದಾರೆ.
ಕಳೆದ ವರ್ಷವೂ ಮಿರ್ಜಾನ್ ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಕಾಣಿಸಿದ್ದು ರಾತ್ರಿಯ ವೇಳೆ ಪವನ್ ನಾಯ್ಕ ಹೋಗಿ ರಕ್ಷಣೆ ಮಾಡಿದ್ದರು.
ಈ ಹೆಬ್ಬಾವಿನ ಬಣ್ಣ ಬಿಳಿಯಾಗಿರುವುದು ಸಾಕಷ್ಟು ಸುದ್ದಿಯಾಗಿ ವಿಡಿಯೋ ಪೋಟೊಗಳು ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಕಳೆದ ವರ್ಷ ಸಿಕ್ಕ ಹೆಬ್ಬಾವಿಗಿಂತಲೂ 3 ಪಟ್ಟು ದೊಡ್ಡ ಗಾತ್ರದ ಹೆಬ್ಬಾವು ಹೆಗಡೆಯಲ್ಲಿ ಕಾಣಿಸಿದ್ದು, ಜನ ಕುತೂಹಲದಿಂದ ಬಂದು ವೀಕ್ಷಣೆ ಮಾಡಿದ್ದಾರೆ.
ಇದು ಸಾಮಾನ್ಯ ಹೆಬ್ಬಾವಿನ ಜಾತಿಗೆ ಸೇರಿದ ಹೆಬ್ಬಾವೇ ಆಗಿದೆ. ಆದರೆ ಚರ್ಮಕ್ಕೆ ಬಣ್ಣ ನೀಡುವ ವರ್ಣ ದ್ರವ್ಯ ಗ್ರಂಥಿ ಅಂದರೆ ಮೆಲಾಲಿನ್ ಅಥವಾ ಪಿಗ್ಮೆಂಟ್‌ನ ಕೊರತೆಯಿಂದ ಚರ್ಮಕ್ಕೆ ಬಣ್ಣ ಬರದೇ ಈ ರೀತಿ ಬಿಳಿ ಬಣ್ಣಕ್ಕೆ ಕಾರಣವಾಗುತ್ತದೆ. ಇದನ್ನು ಅಲ್ಬಿನೋ ಸ್ನೇಕ್ಸ್ ಎಂದು ಕೂಡಾ ಕರೆಯುತ್ತಾರೆ. ಆದರೆ ಅಲ್ಬಿನೋ ಹಾವುಗಳಾದರೆ ಕಣ್ಣು ಸಹ ಕೆಂಪು ಮಿಶ್ರಿತ ಬಿಳಿ ಬಣ್ಣ ಇರಬೇಕಾಗುತ್ತದೆ. ಇದರ ಕಣ್ಣು ಅರ್ಧ ಮಾತ್ರ ಬಿಳಿ ಇದ್ದು ಇನ್ನರ್ಧ ಕಪ್ಪಿರೋ ಕಾರಣ ಇದನ್ನು ಅಲ್ಬಿನೋ ಹಾವಿನ ಗುಂಪಿಗೆ ಸೇರಿಸಲು ಸಾಧ್ಯವಿಲ್ಲ ಎಂದು ಪವನ್ ನಾಯ್ಕ ಮಾಹಿತಿ ನೀಡಿದ್ದಾರೆ.
ಈ ರೀತಿ ಬಿಳಿ ಹೆಬ್ಬಾವು ಕರ್ನಾಟಕದಲ್ಲೇ ಮೂರನೇ ಬಾರಿ ರಕ್ಷಣೆಯಾಗಿದ್ದು, ಅದರಲ್ಲಿ 2 ಬಾರಿ ಕುಮಟಾದಲ್ಲೇ ರಕ್ಷಣೆಯಾಗಿದೆ. ಇದು ಭಾರತದಲ್ಲೇ ಅತೀ ದೊಡ್ಡ ಬಿಳಿ ಹೆಬ್ಬಾವು ಎಂದು ಅಂದಾಜಿಸಲಾಗಿದೆ.
ಇನ್ನು ರಕ್ಷಣೆ ಬಳಿಕ ರಾತ್ರಿಯಾಗಿದ್ದರಿಂದ ಹೆಬ್ಬಾವನ್ನು ಬೆಳಗ್ಗೆ ಕುಮಟಾ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಮೈಮೇಲೆ ಸಣ್ಣ ಪುಟ್ಟ ಗಾಯಗಳಿರುವುದರಿಂದ ಮೈಸೂರ್ ಜೂಗೆ ಕಳುಹಿಸಲಾಗಿದೆ. ಡಿಎಫ್‌ಓ ರವಿಶಂಕರ್, ಏಸಿಎಫ್ ಜಿ ಲೋಹಿತ್, ಆರ್ಎಪ್ ಓಎಸ್‌ಟಿ ಪಟಗಾರ್, ಡಿಆರ್‌ಎಫ್ ಓ ಹೂವಣ್ಣ ಗೌಡ ಸ್ಥಳದಲ್ಲಿದ್ದರು. ಹಾವಿನ ಛಾಯಾಗ್ರಹಣವನ್ನು ಪ್ರಸಿದ್ದ ಛಾಯಾಗ್ರಾಹಕ ಗೋಪಿ ಜೊಲಿಯವರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.












Click it and Unblock the Notifications