ಉತ್ತರಕನ್ನಡ ಜಿಲ್ಲೆಯ ಈ 4 ಕ್ಷೇತ್ರಗಳಲ್ಲಿ ಬಿಜೆಪಿಗೆ ಹೀನಾಯ ಸೋಲು, ಕಾರಣ ಏನು? ಇಲ್ಲಿದೆ ವಿವರ
ಕಾರವಾರ, ಮೇ, 16: ಕಳೆದ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಪಡೆದು ಆಡಳಿತ ನಡೆಸಿದ್ದ ಬಿಜೆಪಿ ಈ ಬಾರಿ ಎರಡು ಸ್ಥಾನಕ್ಕೆ ಕುಸಿತ ಕಂಡಿದೆ. ಕಾಂಗ್ರೆಸ್ 4 ಸ್ಥಾನಗಳನ್ನು ಪಡೆದು ಜಿಲ್ಲೆಯನ್ನು ಮರಳಿ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಬಿಜೆಪಿ ಸೋಲಿಗೆ ಸ್ವಪಕ್ಷೀಯ ಮುಖಂಡರ ಒಳ ಹೊಡೆತವೇ ಮುಖ್ಯ ಕಾರಣ ಎಂಬುದು ಇದೀಗ ಪಕ್ಷದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಕಳೆದ ಬಾರಿ ಹಳಿಯಾಳ ಹೊರತುಪಡಿಸಿ ಉಳಿದ ಎಲ್ಲ ಕಡೆ ಬಿಜೆಪಿ ಆಡಳಿತ ನಡೆಸಿತ್ತು. ಆದರೆ ಆಡಳಿತ ವಿರೋಧಿ ಅಲೆ ದೊಡ್ಡಮಟ್ಟದಲ್ಲಿ ಕೇಳಿಬಂದಿತ್ತು. ಇದನ್ನು ಶಮನ ಮಾಡಲು ಬಿಜೆಪಿ ಅಭ್ಯರ್ಥಿಗಳು ಹತ್ತಾರು ಸಮಾವೇಶಗಳನ್ನು ನಡೆಸಿ ತಮ್ಮ ಯೋಜನೆಗಳ ಮಾಹಿತಿಯನ್ನು ನೀಡಿದ್ದರು. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಸೇರಿದಂತೆ ಸಚಿವರು ಸ್ಟಾರ್ ಪ್ರಚಾರಕರನ್ನು ಕರೆಸಿ ಅಬ್ಬರದ ಪ್ರಚಾರ ನಡೆಸಿದ್ದರು. ಆದರೆ ಅದು ಯಾವುದೂ ಚುನಾವಣೆಯಲ್ಲಿ ಲೆಕ್ಕಕ್ಕೆ ಬಾರದಂತಾಗಿದೆ.

ಇದರಿಂದ 2018ರಲ್ಲಿ 4 ಸ್ಥಾನವನ್ನು ಗೆದ್ದು, ಬಳಿಕ 2019ರ ಉಪ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರವನ್ನು ಕಾಂಗ್ರೆಸ್ ಮುಕ್ತ ಮಾಡಿ ಅಧಿಕಾರ ನಡೆಸಿದ್ದ ಬಿಜೆಪಿಗೆ ಈ ಬಾರಿ ಕೇವಲ ಎರಡು ಸ್ಥಾನಗಳನ್ನು ಮಾತ್ರ ಪಡೆಯುವಂತಾಗಿದೆ. ಆ ಎರಡು ಕ್ಷೇತ್ರಗಳಲ್ಲಿಯೂ ಪ್ರಯಾಸದ ಗೆಲುವು ದಾಖಲಿಸಿರುವ ಬಿಜೆಪಿಗೆ ಇದೀಗ ಸ್ವಪಕ್ಷೀಯರ ಕುತಂತ್ರ ಅರಿವಿಗೆ ಬಂದಿದೆ.
ಸ್ವಪಕ್ಷೀಯರ ಕುತಂತ್ರ ಬಂಡಾಯ ಶಮನ ವಿಫಲ
ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಬಿಜೆಪಿಗೆ ಸ್ವಪಕ್ಷೀಯರೇ ಕಾಲೆಳೆದಿರುವುದು ಗೆಲುವಿಗೆ ಮುಳುವಾಗಿದೆ. ಅಭ್ಯರ್ಥಿ ಪರ ಪ್ರಚಾರದ ವೇಳೆ ಕೆಲಸ ಮಾಡಿದವರೇ ಮತದಾನದ ವೇಳೆ ಕೈಕೊಟ್ಟಿದ್ದಾರೆ. ಈ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕರ್ತರಿಂದ ತೀವ್ರ ಆಕ್ರೋಶವನ್ನು ಹೊರ ಹಾಕಲಾಗುತ್ತಿದೆ. ಅಲ್ಲದೆ ಬಿಜೆಪಿ ಗಂಗಾಧರ್ ಭಟ್ ಬಂಡಾಯ ಶಮನ ಮಾಡುವಲ್ಲಿಯೂ ಪಕ್ಷ ವಿಫಲವಾಗಿದೆ.
ಇದರ ಪರಿಣಾಮ ಬಿಜೆಪಿ ಸೋಲಿಗೆ ಕಾರಣವಾದಷ್ಟು ಮತಗಳನ್ನು ಗಂಗಾಧರ ಭಟ್ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಪಡೆದಿದ್ದಾರೆ. ಇದು ಕೂಡ ಬಿಜೆಪಿ ಗೆಲುವಿಗೆ ಮುಳ್ಳಾದಂತಾಗಿದೆ. ಇನ್ನು ಭಟ್ಕಳದಲ್ಲಿ ಅಭ್ಯರ್ಥಿ ಘೋಷಣೆ ಪೂರ್ವದಲ್ಲಿಯೇ ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿ ಬದಲಿಗೆ ಆಕ್ರೋಶ ಹೊರಹಾಕಿದ್ದರು. ಅಲ್ಲದೆ ಅಭ್ಯರ್ಥಿ ಘೋಷಣೆ ಬಳಿಕವೂ ವಿರೋಧ ವ್ಯಕ್ತಪಡಿಸಿ ಬಹಿರಂಗವಾಗಿ ಇತರೆ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದರು.
ಇಷ್ಟಾದರೂ ಅಭ್ಯರ್ಥಿ ಬದಲಾವಣೆಯೂ ಇಲ್ಲದೆ ಬಂಡಾಯ ಶಮನಕ್ಕೂ ಹೈಕಮಾಂಡ್ ಕೈ ಹಾಕಿರಲಿಲ್ಲ. ಇದರಿಂದ ಪಕ್ಷದಲ್ಲಿದ್ದವರೂ ಕೂಡ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿರುವುದು ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣ
ಮತ್ತೊಂದೆಡೆ ಶಿರಸಿ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆ ಎಂದೇ ಹೇಳಲಾಗಿತ್ತು. ಪ್ರತಿ ಚುನಾವಣೆಯಲ್ಲಿಯೂ ವಿಶ್ವೇಶ್ವರ ಹೆಗಡೆ ಕಾಗೇರಿ ಭಾರಿ ಮತಗಳ ಅಂತರದ ಗೆಲುವು ಸಾಧಿಸುತ್ತಿದ್ದರು. ಆದರೆ ಈ ಬಾರಿ ಸ್ವಪಕೀಯರ ಕಡೆಗಣನೆ, ಅಧಿಕಾರ ನೀಡುವಲ್ಲಿ ನಡೆದ ತಾರತಮ್ಯಗಳು ಬಿಜೆಪಿಗರ ಒಳಹೊಡೆತಕ್ಕೆ ಕಾರಣ ಎನ್ನಲಾಗುತ್ತಿದೆ.
ಪಕ್ಷದ ಟಿಕೆಟ್ ಆಕಾಂಕ್ಷಿಗಳು ಸೇರಿದಂತೆ ಕಾಗೇರಿ ಅವರಿಂದ ಕಡೆಗಣನೆಗೆ ಒಳಗಾದವರು ಕೊನೆ ಗಳಿಗೆಯಲ್ಲಿ ಪಕ್ಷ ಬಿಟ್ಟು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಅಲ್ಲದೆ ಜಾತಿ ರಾಜಕಾರಣ, ಅನುದಾನ ಹಂಚಿಕೆಯಲ್ಲಿ ನಡೆದ ತಾರತಮ್ಯ ಕೂಡ ಸ್ವತಃ ಬಿಜೆಪಿಗರ ಮನಸ್ತಾಪಕ್ಕೂ ಕಾರಣವಾಗಿತ್ತು. ಆದರೆ ಗೆಲುವಿನ ಬಗ್ಗೆ ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ಕಾಗೇರಿ ಇದೆಲ್ಲವನ್ನು ನಿರ್ಲಕ್ಷಿಸಿದ್ದರು ಎನ್ನಲಾಗುತ್ತಿದೆ. ಇದು ಈ ಬಾರಿಯ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದೆ.
ಪಕ್ಷ ವಿರೋಧಿಗಳ ವಿರುದ್ಧ ದೂರು
ಬಿಜೆಪಿ ಸಂಘಟನೆ ಬಲಿಷ್ಠವಾಗಿದ್ದರೂ ಕೂಡ ಈ ಬಾರಿ ಪ್ರತಿ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳಿಗೆ ಸ್ವ ಪಕ್ಷೀಯರಿಂದಲೇ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ಪಕ್ಷದಲ್ಲಿದ್ದೇ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ್ದು ಇದು ಅಭ್ಯರ್ಥಿಗಳ ಕಣ್ಣು ಕೆಂಪಾಗಿಸುವಂತೆ ಮಾಡಿದೆ. ಕೆಲ ಅಭ್ಯರ್ಥಿಗಳು ಆಪ್ತರ ಎದುರು ಬೆನ್ನಿಗೆ ಚೂರಿ ಹಾಕಿದವರ ಹೆಸರು ಪ್ರಸ್ತಾಪ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಪಕ್ಷದ ನಾಯಕರಿಗೆ ದೂರು ನೀಡಲು ಮುಂದಾಗಿದ್ದಾರೆ.
ಪಕ್ಷ ವಿರೋಧಿಗಳ ಆಟಕ್ಕೆ ಆಕ್ರೋಶ
ಇನ್ನು ಯಲ್ಲಾಪುರ ಹಾಗೂ ಕುಮಟಾದಲ್ಲಿ ಬಿಜೆಪಿ ಪ್ರಯಾಸದ ಗೆಲುವು ದಾಖಲಿಸಿದೆ. ಕಾರ್ಮಿಕ ಸಚಿವರಾಗಿದ್ದ ಶಿವರಾಮ್ ಹೆಬ್ಬಾರ್ ಹಾಗೂ ಶಾಸಕ ದಿನಕರ ಶೆಟ್ಟಿ ಇಬ್ಬರು ಕೂಡ ಸಾಕಷ್ಟು ಅನುದಾನ ತಂದು ಕೆಲಸ ಮಾಡಿದ್ದರು. ಆದರೆ ಪಕ್ಷದ ಕಾರ್ಯಕರ್ತರು ಹಾಗೂ ಅಭ್ಯರ್ಥಿ ನಡುವಿನ ವೈಮನಸ್ಸುಗಳು ಮತದಾನದ ವೇಳೆ ವಿರೋಧಿಗಳಿಗೆ ಬೆಂಬಲಕ್ಕೆ ಕಾರಣವಾಗಿತ್ತು.
ಗೆಲುವಿನ ಬಳಿಕ ವಿಜಯೋತ್ಸವದ ವೇಳೆ ಹೆಬ್ಬಾರ್ ಖಾರವಾಗಿಯೇ ಆಕ್ರೋಶ ಹೊರಹಾಕಿದ್ದಾರೆ. ಇನ್ನು ದಿನಕರ ಶೆಟ್ಟಿಗೂ ಕೂಡ ಒಳ ಹೊಡೆತ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿತ್ತು. ಪರಿಣಾಮ ಅತಿ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸುವಂತಾಗಿದೆ.
ಉ.ಕನ್ನಡ ಜಿಲ್ಲೆಯ ಕ್ಷೇತ್ರಗಳು ಅಭ್ಯರ್ಥಿ ಪಕ್ಷ
ಹಳಿಯಾಳ ಆರ್.ವಿದೇಶಪಾಂಡೆ ಕಾಂಗ್ರೆಸ್
ಕಾರವಾರ ಸತೀಶ್ ಸೈಲ್ ಕಾಂಗ್ರೆಸ್
ಕುಮಟಾ ದಿನಕರ ಶೆಟ್ಟಿ ಬಿಜೆಪಿ
ಭಟ್ಕಳ ಮಂಕಾಳು ವೃದ್ಯ ಕಾಂಗ್ರೆಸ್
ಶಿರಸಿ ಭೀಮಣ್ಣ ನಾಯಕ್ ಕಾಂಗ್ರಸ್
ಯಲ್ಲಾಪುರ ಶಿವರಾಮ ಹೆಬ್ಬಾರ್ ಬಿಜೆಪಿ












Click it and Unblock the Notifications