ಮಳೆಗಾಲ ಬಂದರೂ ಪೂರ್ಣಗೊಳ್ಳದ ಸೇತುವೆ ಕಾಮಗಾರಿ: ಮತ್ತೆ ಸಂಕಷ್ಟದಲ್ಲಿ ಜಾಂಬಾ ಗ್ರಾಮಸ್ಥರು
ಕಾರವಾರ, ಜೂನ್ 28: ಕೊಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿಯೊಂದು ಕಳೆದ ಎರಡು ವರ್ಷದಿಂದ ಕುಂಟುತ್ತಿದ್ದು ಪರಿಣಾಮ ಈ ಬಾರಿಯೂ ಮಳೆಗಾಲದಲ್ಲಿ ಸಂಚಾರಕ್ಕೆ ಸ್ಥಳೀಯರು ಪರದಾಡುವ ಸ್ಥಿತಿ ತಾಲೂಕಿನ ಜಾಂಬಾ ಗ್ರಾಮದಲ್ಲಿ ನಿರ್ಮಾಣವಾಗಿದೆ.
ಕಾರವಾರ ತಾಲೂಕಿನ ಶಿರವಾಡದ ಜಾಂಬಾ ಮಾರ್ಗವಾಗಿ ಬೇಳೂರು, ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಹರಿದಿರುವ ಹಳ್ಳವೊಂದಕ್ಕೆ ಕಳೆದ ಎರಡು ವರ್ಷಗಳಿಂದ ಸೇತುವೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆಯಾದರೂ ಈವರೆಗೂ ಪೂರ್ಣಗೊಂಡಿಲ್ಲ. ಸೇತುವೆ ಕಾಮಗಾರಿಗಾಗಿ ಇರುವ ಸೇತುವೆಯನ್ನು ತೆರವುಗೊಳಿಸಿದ್ದು ಇದೀಗ ಮಳೆಗಾಲ ಸಮೀಪಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಸ್ಥಳೀಯರು ಮತ್ತೆ ಪರದಾಡುವಂತಾಗಿದೆ.

ಲೋಕೋಪಯೋಗಿ ಇಲಾಖೆ ಕೈಗೊಂಡಿರುವ ಕಾಮಗಾರಿ ಆರಂಭವಾಗಿ ಎರಡು ವರ್ಷವಾಗಿದೆ. ಸೇತುವೆ ನಿರ್ಮಾಣಕ್ಕೆ ಕಂಬಗಳನ್ನು ಹಾಕಲಾಗಿದೆ. ಆದರೆ ಅದರ ಮೇಲೆ ಹಾಕಬೇಕಾಗಿದ್ದ ಸ್ಲ್ಯಾಬ್ ಹಾಕದೆ ಇದ್ದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ವಿವಿಧ ಕೆಲಸ ಕಾರ್ಯಗಳಿಗೆ ನಗರಕ್ಕೆ ಬರುವ ಜಾಂಬಾ ಗ್ರಾಮದ ಜನರು ನಾರಗೇರಿ ಗ್ರಾಮದಿಂದ ಎರಡು-ಮೂರು ಕಿ.ಮೀ. ಸುತ್ತುವರಿದು ಬರುವಂಥ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಜನರು ಹಳ್ಳ ದಾಟಿ ಬರಬೇಕು. ಮಳೆಗಾಲದ ಸಂದರ್ಭದಲ್ಲಿ ಅರಣ್ಯದಿಂದ ಹರಿದು ಬರುವ ಅಪಾರ ಪ್ರಮಾಣದ ನೀರು ಸೇತುವೆ ನಿರ್ಮಾಣಗೊಳ್ಳುತ್ತಿರುವ ಮಾರ್ಗದಿಂದಲೇ ಹರಿಯುತ್ತದೆ. ಮಳೆಗಾಲದಲ್ಲಿ ಹಳ್ಳದಾಟುವುದು ಅಸಾಧ್ಯದ ಮಾತು. ಆದರೆ ಮಳೆಗಾಲ ಮುಕ್ತಾಯವಾಗಿ ಎರಡು ತಿಂಗಳ ಬಳಿಕ ಜನರು ಹಳ್ಳ ದಾಟುತ್ತಾರೆ.
ಬೇಸಿಗೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸೇತುವೆ ನಿರ್ಮಾಣಗೊಳ್ಳುತ್ತಿರುವ ಕೆಳಭಾಗದಿಂದ ಸಾಗಬಹುದು. ಸದ್ಯ ಮಳೆ ಆರಂಭವಾಗಿದ್ದು ಪ್ರದೇಶದಿಂದ ಸಂಚರಿಸುವುದು ಅಪಾಯಕಾರಿಯಾದ ಕಾರಣ ಈ ವರ್ಷ ಮತ್ತೆ ಪರದಾಡುವಂತಾಗಿದೆ.

ಜಾಂಬಾ ಗ್ರಾಮದಲ್ಲಿ 35ಕ್ಕೂ ಹೆಚ್ಚಿನ ಮನೆಗಳಿವೆ. ಕುಟುಂಬದ ಸದಸ್ಯರು ತಮ್ಮ ಜೀವನೋಪಾಯಕ್ಕಾಗಿ, ನಿತ್ಯದ ಕೆಲಸಗಳಿಗೆ, ಕೃಷಿಕರಿಗೆ, ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಅನಾರೋಗ್ಯದಿಂದ ಬಳಲುವವರು ಇದೇ ಮಾರ್ಗವಾಗಿ ತೆರಳಬೇಕು. ಸದ್ಯ ಮಳೆಯ ಪ್ರಮಾಣ ಹೆಚ್ಚಾದರೆ ಸಮಸ್ಯೆ ಇನ್ನಷ್ಟು ಹೆಚ್ಚಲಿದೆ. ಪರ್ಯಾಯ ಮಾರ್ಗ ನಾರಗೇರಿ ರಸ್ತೆ ಇದ್ದರೂ ದೂರದ ಪ್ರದೇಶದಿಂದ ತೆರಳಬೇಕು. ಇಲ್ಲಿನ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ.
ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ
ಕಳೆದ ಎರಡು ವರ್ಷಗಳ ಹಿಂದೆ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತಾದರೂ ಹಳೆ ಸೇತುವೆ ತೆರವು ಮಾಡಿದ ಬಳಿಕ ಕಳೆದ ಫೆಬ್ರುವರಿಯಲ್ಲಿ ಗುತ್ತಿಗೆದಾರರು ಕಾಮಗಾರಿ ಆರಂಭಿಸಲಾಗಿದೆ. ಪಿಲ್ಲರ್ ಮಾತ್ರ ಹಾಕಲಾಗಿದೆ. ಸೇತುವೆಯ ಕಂಬದ ಮೇಲೆ ಸ್ಲ್ಯಾಬ್ ಹಾಕುವ ಕಾಮಗಾರಿ ಇಬ್ಬರಿಗೆ ಟೆಂಡರ್ ಆಗಿದೆ. ಸದ್ಯ ಓರ್ವ ಗುತ್ತಿಗೆದಾರರ ಕಾಮಗಾರಿ ಆರಂಭಿಸಿದ್ದಾರೆ. ಮಳೆಯ ಪ್ರಮಾಣ ಹೆಚ್ಚಾದರೆ ಆರಂಭಗೊಂಡ ಕಾಮಗಾರಿಗೂ ಸ್ಥಗಿತವಾಗುವ ಸಾಧ್ಯತೆ ಇದೆ. ಒಂದೊಮ್ಮೆ ಹೋಗಾದಲ್ಲಿ ಮತ್ತೇ ಮುಂದಿನ ಫೆಬ್ರುವರಿಯ ಬಳಿಕವೇ ಕಾಮಗಾರಿ ಆರಂಭಿಸುವ ಸ್ಥಿತಿ ಇದೆ. ಗ್ರಾಮಕ್ಕೆ ಇದೇ ಸೇತುವೆ ಆಸರೆಯಾಗಿದ್ದರೂ ಕೂಡ ಈ ಬಗ್ಗೆ ಯಾವ ಅಧಿಕಾರಿಯೂ ಲಕ್ಷ್ಯ ವಹಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.












Click it and Unblock the Notifications