ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಕನ್ನಡ: ಗ್ಯಾರೇಜ್‌ನಲ್ಲಿ ತುಕ್ಕು ಹಿಡಿಯುತ್ತಿರುವ ಸರ್ಕಾರಿ ಆಸ್ಪತ್ರೆ ಆ್ಯಂಬುಲೆನ್ಸ್‌

By ಉತ್ತರಕನ್ನಡ ಪ್ರತಿನಿಧಿ
|
Google Oneindia Kannada News

ಕಾರವಾರ, ಆಗಸ್ಟ್‌, 12: ಸುಸಜ್ಜಿತ ಆಸ್ಪತ್ರೆ ಇಲ್ಲದ ಕಾರಣ ಉತ್ತರಕನ್ನಡ ಜಿಲ್ಲೆಯ ಜನರು ಪರಡಾಡುತ್ತಿದ್ದಾರೆ. ನೂರಾರು ಕಿಲೋ ಮೀಟರ್ ದೂರವಿರುವ ಅಕ್ಕಪಕ್ಕದ ಜಿಲ್ಲೆಗಳನ್ನು ಚಿಕಿತ್ಸೆಗಾಗಿ ಆಶ್ರಯಿಸಬೇಕಾಗಿದೆ. ಕಳೆದ‌ ಭಾರಿ ಕೊರೊನಾ ಸಂದರ್ಭದಲ್ಲಿ ಜನಪ್ರತಿನಿಧಿಗಳು ಸ್ಪರ್ಧೆಗೆ ಬಿದ್ದವರಂತೆ ಆಂಬುಲೆನ್ಸ್‌ಗಳನ್ನು ನೀಡಿದ್ದರು. ಆದರೆ ಜನ ಸೇವೆಗೆ ಸಿಗಬೇಕಿದ್ದ ಈ ಸರ್ಕಾರಿ ಆ್ಯಂಬುಲೆನ್ಸ್‌ಗಳು ಇದೀಗ ಗ್ಯಾರೇಜ್‌ಗಳಲ್ಲಿ ನಿಂತು ತುಕ್ಕು ಹಿಡಿಯುತ್ತಿವೆ. ಹೀಗೆ ಆ್ಯಂಬುಲೆನ್ಸ್‌ಗಳನ್ನು ಕೊಟ್ಟು ಪ್ರಯೋಜನವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಹೌದು ಉತ್ತರಕನ್ನಡ ಜನತೆ ನಮಗೊಂದು ಸುಸಜ್ಜಿತ ಆಸ್ಪತ್ರೆ ನಿರ್ಮಿಸಿಕೊಡಿ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಇದರ ಜೊತೆಗೆ ಅಭಿಯಾನಗಳನ್ನು ಮಾಡುವ ಮೂಲಕ ಸರ್ಕಾರವನ್ನು ಆಸ್ಪತ್ರೆ ನಿರ್ಮಿಸಿಕೊಡಿ ಎಂದು ಅಂಗಲಾಚುತ್ತಿದ್ದಾರೆ. ಆದರೆ ಆಸ್ಪತ್ರೆಗಳಿಗೆ ಕರೆದೊಯ್ಯಲು ನೆರವಾಗಬೇಕಾದ ಸರ್ಕಾರಿ ಆ್ಯಂಬುಲೆನ್ಸ್‌ಗಳೇ ಸೇವೆಗೆ ಬಳಕೆ ಆಗದಂತಹ ದುರಂತ ಸ್ಥಿತಿ ನಿರ್ಮಾಣವಾಗಿದೆ. ಬಡಜನರು, ಕಾರ್ಮಿಕರ ಸೇವೆಗಾಗಿ ಬಳಕೆಯಾಗಬೇಕಿದ್ದ ಆ್ಯಂಬುಲೆನ್ಸ್‌ಗಳು ಇದೀಗ ರಿಪೇರಿ ಕಾಣದೆ ತುಕ್ಕು ಹಿಡಿಯುತ್ತಾ ಗ್ಯಾರೇಜ್‌ಗಳಲ್ಲಿ ನಿಂತಿವೆ. ಕೊರೊನಾ ಅವಧಿಯಲ್ಲಿ ಸಚಿವರು, ಶಾಸಕರುಗಳ ಅನುದಾನದಲ್ಲಿ ನೀಡಿದ್ದ ಹೊಸ ಆ್ಯಂಬುಲೆನ್ಸ್‌ಗಳೂ ಸಹ ಗ್ಯಾರೇಜ್ ಸೇರಿವೆ.

 ಮೂಲೆ ಗುಂಪಾದ ಸರ್ಕಾರಿ ಆ್ಯಂಬುಲೆನ್ಸ್‌ಗಳು

ಮೂಲೆ ಗುಂಪಾದ ಸರ್ಕಾರಿ ಆ್ಯಂಬುಲೆನ್ಸ್‌ಗಳು

ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಅಡಿಯಲ್ಲಿ 45 ಆ್ಯಂಬುಲೆನ್ಸ್‌ಗಳಿದ್ದು, ಜಿವಿಕೆ ನಿರ್ವಹಿಸುತ್ತಿರುವ 108 ನಂಬರ್‌ನ 20 ಆ್ಯಂಬುಲೆನ್ಸ್‌ಗಳು ಇವೆ. ಇದರೊಂದಿಗೆ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಆಯಾ ವ್ಯಾಪ್ತಿಯ ಸಚಿವರು, ಶಾಸಕರು ತಮ್ಮ ಅನುದಾನದಲ್ಲಿ ನೀಡಿದ 17 ಆ್ಯಂಬುಲೆನ್ಸ್‌ಗಳಿವೆ. ಆದರೆ ಸದ್ಯ ಜಿಲ್ಲೆಯಲ್ಲಿ ನೋಡಿದರೆ ಒಂದೆರಡು ಸರ್ಕಾರಿ ಆ್ಯಂಬುಲೆನ್ಸ್‌ಗಳು ಮಾತ್ರ ಇವೆ ಅಷ್ಟೇ. ಇದನ್ನು ಹೊರತುಪಡಿಸಿದರೇ ಬಹುತೇಕ ಸರ್ಕಾರಿ ಆ್ಯಂಬುಲೆನ್ಸ್‌ಗಳು ಸೂಕ್ತ ನಿರ್ವಹಣೆಯಿಲ್ಲದೇ ಗ್ಯಾರೇಜ್ ಸೇರಿವೆ. ಇದರಿಂದಾಗಿ ಜಿಲ್ಲೆಯ ಜನಸಾಮಾನ್ಯರು ತುರ್ತು ಅವಶ್ಯಕತೆ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಲು ಖಾಸಗಿ ಆ್ಯಂಬುಲೆನ್ಸ್‌ಗಳನ್ನೇ ಅಲವಂಬಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇದು ಬಡಜನರಿಗೆ ಸಾಕಷ್ಟು ಹೊರೆಯಾಗುತ್ತಿದೆ ಎಂದು ಸ್ಥಳೀಯರಾದ ಪುಷ್ಪಾ ನಾಯ್ಕ ಅವರು ಅಸಮಾಧಾನ ಹೊರಹಾಕಿದರು.

 ಖಾಸಗಿ ಆ್ಯಂಬುಲೆನ್ಸ್‌ಗಳಿಂದ ದಂಧೆ

ಖಾಸಗಿ ಆ್ಯಂಬುಲೆನ್ಸ್‌ಗಳಿಂದ ದಂಧೆ

ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದ ಕಾರಣ ಅಲ್ಲಿನ ಜನರು ಅನಿವಾರ್ಯವಾಗಿ ನೆರೆಯ ಮಂಗಳೂರು, ಉಡುಪಿ, ಹುಬ್ಬಳ್ಳಿ, ಗೋವಾ ಭಾಗಗಳ ಆಸ್ಪತ್ರೆಗಳನ್ನು ಅವಲಂಬಿಸುವಂತಾಗಿದೆ. ಇಲ್ಲಿನ ಆಸ್ಪತ್ರೆಗಳಿಗೆ ತುರ್ತು ರೋಗಿಗಳನ್ನು ಸಾಗಿಸಲು ವೆಂಟಿಲೇಟರ್, ಡೀಫಿಬ್ರಿಲೇಟರ್, ಮಾನಿಟರ್ ಸೇರಿದಂತೆ ಸುಸಜ್ಜಿತ ವ್ಯವಸ್ಥೆಗಳಿರುವ ಆ್ಯಂಬುಲೆನ್ಸ್‌ ಅಗತ್ಯವಿದೆ. ಆದರೆ ಜಿಲ್ಲೆಯಲ್ಲಿ ಸದ್ಯ ಕೆಲವೇ ಸರ್ಕಾರಿ ಆ್ಯಂಬುಲೆನ್ಸ್‌ಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳು ಇವೆ. ಹೀಗಾಗಿ ತುರ್ತು ಅಗತ್ಯ ಸಂದರ್ಭಗಳಲ್ಲಿ ಖಾಸಗಿ ಆ್ಯಂಬುಲೆನ್ಸ್‌ಗಳಿಗೆ 8 ರಿಂದ 10 ಸಾವಿರ ರೂಪಾಯಿ ನೀಡಿ ಆಸ್ಪತ್ರೆಗೆ ತೆರಳಬೇಕಿದೆ. ಇದರಿಂದ ಆಸ್ಪತ್ರೆಗೆ ಬಿಲ್‌ ಕಟ್ಟಲಾಗದೇ ಬಡಜನರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರ ಇತ್ತ ಗಮನಹರಿಸಿ ಆ್ಯಂಬುಲೆನ್ಸ್ ಸೇವೆಯನ್ನ ಸರಿಪಡಿಸಲಿ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ.

 ಆಸ್ಪತ್ರೆ ಸಿಬ್ಬಂದಿಯ ಕಮಿಷನ್‌ ಕಳ್ಳಾಟ

ಆಸ್ಪತ್ರೆ ಸಿಬ್ಬಂದಿಯ ಕಮಿಷನ್‌ ಕಳ್ಳಾಟ

ಜಿಲ್ಲೆಯ ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆ್ಯಂಬುಲೆನ್ಸ್ ಚಾಲಕರ ಲಾಬಿಗೆ ಒಳಗಾಗಿರುವ ಸಿಬ್ಬಂದಿ ಹಾಗೂ ಅಧಿಕಾರಿಗಳು, ಸರ್ಕಾರಿ ಆ್ಯಂಬುಲೆನ್ಸ್ ಬೇರೆಡೆ ಹೋಗಿದೆ ಎಂದು ನೆಪ ಹೇಳುತ್ತಾರೆ. ನಂತರ ಖಾಸಗಿ ಆ್ಯಂಬುಲೆನ್ಸ್ ಒಯ್ಯುವಂತೆ ಸೂಚಿಸುತ್ತಾರೆ. ಖಾಸಗಿ ಆ್ಯಂಬುಲೆನ್ಸ್ ದರ ದುಬಾರಿಯಾಗುವ ಕಾರಣ ಜನಸಾಮಾನ್ಯರು ಪರದಾಡುವಂತಾಗಿದೆ. ಈ ಬಗ್ಗೆ ತಿಳಿದವರು ಸ್ವಲ್ಪ‌ ಗಟ್ಟಿಯಾಗಿ ಮಾತನಾಡಿ ವಿಚಾರಿಸಿದರೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವುದು ಸ್ವಲ್ಪ ತಡವಾಗಬಹುದು ಎಂದು ಹೇಳುತ್ತಾ ಜಾರಿಕೊಳ್ಳುತ್ತಾರೆ. ಹೀಗೆ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸರ್ಕಾರಿ ಆ್ಯಂಬುಲೆನ್ಸ್ ಡ್ರೈವರ್‌ಗಳು ಕಮಿಷನ್‌ಗಾಗಿ ಕಳ್ಳಾಟ ಆಡುತ್ತಾರೆ ಎಂದು ಸಮಸ್ಯೆಯಿಂದ ನೊಂದ ಪ್ರಭಾಕರ್ ಗೌಡ ಅಳಲು ತೋಡಿಕೊಂಡರು.

 ಟೋಲ್ ಫ್ರೀ ನಂಬರ್ ಕ್ರಮದ ಭರವಸೆ

ಟೋಲ್ ಫ್ರೀ ನಂಬರ್ ಕ್ರಮದ ಭರವಸೆ

ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಕೇಳಿದರೆ ಜಿಲ್ಲೆಯಲ್ಲಿ ಆ್ಯಂಬುಲೆನ್ಸ್ ಅಲಭ್ಯತೆ ಬಗ್ಗೆ ಗಮನಕ್ಕೆ ಬಂದಿದೆ. 24 ಗಂಟೆಯೂ ಸಂಪರ್ಕಿಸಬಹುದಾದ ಟೋಲ್ ಫ್ರೀ ನಂಬರನ್ನು ಪ್ರಾರಂಭಿಸುತ್ತಿದ್ದೇವೆ. ಈ ಮೂಲಕ ಜನರಿಗೆ ಅಗತ್ಯವಿರುವಲ್ಲಿ ಸರ್ಕಾರಿ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದರು. ಒಟ್ಟಿನಲ್ಲಿ ಜನರ ಜೀವ ಉಳಿಸುವಲ್ಲಿ ನೆರವಾಗಬೇಕಿದ್ದ ಆ್ಯಂಬುಲೆನ್ಸ್‌ಗಳಿಗೇ ಇದೀಗ ಚಿಕಿತ್ಸೆಯ ಅಗತ್ಯತೆ ಇದೆ. ಇನ್ನಾದರೂ ಜನಪ್ರತಿನಿಧಿಗಳು ಈ ಬಗ್ಗೆ ಗಮ‌ನಹರಿಸಿ ಬಡಜನರಿಗೆ ಸರ್ಕಾರಿ ಆ್ಯಂಬುಲೆನ್ಸ್‌ ಸೇವೆ ಸಿಗುವಂತೆ ಮಾಡಬೇಕಿದೆ ಎಂದು ಸ್ಥಳೀಯರ ಅಭಿಪ್ರಾಯ ಆಗಿದೆ.

Recommended Video

ಊರ್ವಶಿ ರೌಟೇಲಾ ಹೇಳಿಕೆಗೆ ಫುಲ್ ಗರಂ‌ ಆದ ರಿಷಬ್ ಪಂತ್ ತಿರುಗೇಟು ಕೊಟ್ಟಿದ್ದು ಹೀಗೆ.. | *Cricket | OneIndia

English summary
In Uttara Kannada district, government hospital ambulances rusting in garage and people scrambling.know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X