Anna bhagya scheme: ಉತ್ತರಕನ್ನಡ ಜಿಲ್ಲೆಯ 39,043 ಕುಟುಂಬಗಳಿಗೆ ಸಿಗದ "ಅನ್ನಭಾಗ್ಯ"ದ ಹಣ, ಕಾರಣ ತಿಳಿಯಿರಿ
ಕಾರವಾರ, ಜುಲೈ, 20: ಸರ್ಕಾರ ಕೊಟ್ಟ ಮಾತಿನಂತೆ ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಅಕ್ಕಿ ಬದಲಾಗಿ ಜಿಲ್ಲೆಯ 2.37 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಒಟ್ಟು 14,32 ಕೋಟಿ ರೂಪಾಯಿ ಹಣ ಜಮಾ ಮಾಡಿದೆ. ಆದರೆ ಜಿಲ್ಲೆಯಲ್ಲಿ ಪಡಿತರ ಚೀಟಿ ಇದ್ದರೂ ಬ್ಯಾಂಕ್ ಖಾತೆ ಚಾಲ್ತಿಯಲ್ಲಿರದ ಕಾರಣಕ್ಕೆ 39,043 ಕುಟುಂಬಗಳು ಯೋಜನೆ ಲಾಭದಿಂದ ವಂಚಿತರಾಗುವಂತಾಗಿದೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ದಾರರಿಗೆ 5 ಕೆ.ಜಿ. ಅಕ್ಕಿ ಬದಲಾಗಿ ಪ್ರತಿ ಕುಟುಂಬದ ಸದಸ್ಯರಿಗೆ 170 ರೂಪಾಯಿನಂತೆ ಹಣವನ್ನು ವರ್ಗಾವಣೆ ಮಾಡಲಾಗಿದೆ. ಕುಟುಂಬದ ಯಜಮಾನನ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ (ಡಿಬಿಟಿ) ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಹೇಳಿದ್ದರು. ಇದೀಗ ಅದರಂತೆಯೇ ನಡೆದುಕೊಂಡು ಕೊಡ್ಡ ಮಾತನ್ನು ಉಳಿಸಿಕೊಂಡಿದ್ದಾರೆ.

ಉತ್ತರಕನ್ನಡದಲ್ಲಿ 14.32 ಕೋಟಿ ರೂಪಾಯಿ ಜಮಾ
ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು 16,285 ಅಂತ್ಯೋದಯ ಪಡಿತರ ಚೀಟಿ ಹಾಗೂ 2,94,497 ಆದ್ಯತಾ ಪಡಿತರ ಚೀಟಿ ಸಕ್ರೀಯವಾಗಿದೆ. ಈ ಪೈಕಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆಯಾಗಿರುವ 2,37,444 ಫಲಾನುಭವಿಗಳ ಖಾತೆಗೆ ಒಟ್ಟು 14.32 ಕೋಟಿ ರೂಪಾಯಿ ಜಮಾ ಮಾಡಲಾಗಿದೆ.
ಇಲಾಖೆ ಬಳಿಯೂ ಇಲ್ಲದ ಬ್ಯಾಂಕ್ ಖಾತೆ ಮಾಹಿತಿ
ಆದರೆ ಕಳೆದ ಮೂರು ತಿಂಗಳಿನಿಂದ ಆಹಾರ ಧಾನ್ಯ ಪಡೆಯದೆ ಇರುವ ಫಲಾನುಭವಿಗಳಿಗೆ ಹಣ ಪಾವತಿ ಮಾಡಿಲ್ಲ. ಜೊತೆಗೆ ಕುಟುಂಬದ ಯಜಮಾನನ ಬ್ಯಾಂಕ್ ಖಾತೆ ಚಾಲ್ತಿಯಿರದ 9,756 ಕಾರ್ಡ್, ಆಧಾರ್ ಲಿಂಕ್ ಆಗದ 29 ಕಾರ್ಡ್ ಹಾಗೂ ಆಹಾರ ಇಲಾಖೆ ಬಳಿ ಲಭ್ಯ ಇಲ್ಲದ 29,258 ಖಾತೆ ಸೇರಿ ಒಟ್ಟು 39,043 ಪಡಿತರ ಚೀಟಿದಾರರಿಗೆ ಪ್ರಸಕ್ತ ತಿಂಗಳಿನ ಹಣ ಜಮಾ ಮಾಡಿಲ್ಲ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.
ಹಣ ಖಾತೆಗೆ ಬರಬೇಕೆಂದರೆ ಏನು ಮಾಡಬೇಕು?
ಇನ್ನು ಈಗಾಗಲೇ ಹಣ ಜಮಾವಣೆಯಾಗದ ಪಡಿತರ ಚೀಟಿದಾರರ ವಿವರಗಳ ಬಗ್ಗೆ ತಾಲೂಕು ಕಚೇರಿಗಳಲ್ಲಿ ಹಾಗೂ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. ಬ್ಯಾಂಕ್ ಖಾತೆ ಇಲ್ಲದವರು ಹೊಸ ಖಾತೆ ತೆರೆಯಬೇಕು. ಜೊತೆಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕು. ಒಂದು ವೇಳೆ ಫಲಾನುಭವಿಗಳು ಬ್ಯಾಂಕ್ ಖಾತೆ ಹೊಂದಿದ್ದು, ಅದು ಚಾಲ್ತಿಯಲ್ಲಿ ಇಲ್ಲದೆ ಇದ್ದಲ್ಲಿ ಅಂತಹವರು ಆಧಾರ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಬ್ಯಾಂಕಿಗೆ ತೆರಳಿ ಬ್ಯಾಂಕ್ ಖಾತೆ ಇಕೆವೈಸಿ ಮಾಡಿಸಬೇಕು.
ತಿದ್ದುಪಡಿ ಮಾಡಿ ಮುಂದಿನ ತಿಂಗಳ ಹಣ ಪಡೆಯಲು ಇಂದೇ ಕೊನೆ ದಿನ:
ಇನ್ನು ಜುಲೈ ತಿಂಗಳ ಹಣದಿಂದ ವಂಚಿತರಾದವರಿಗೆ ಆದಷ್ಟು ಬೇಗ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವಂತೆ ಈಗಾಗಲೇ ಹಲವು ಬಾರಿ ಸೂಚಿಸಲಾಗಿತ್ತು. ಆಗಸ್ಟ್ ತಿಂಗಳ ಹಣ ಬರಬೇಕೆಂದರೆ ಇಂದೇ ಖಾತೆಯ ತಿದ್ದುಪಡಿ ಮಾಡಿಸಿ. ಅಥವಾ ಹೊಸ ಖಾತೆಗಳನ್ನು ತೆರೆದು ಆಧಾರ್ ಲಿಂಕ್ ಮಾಡಿದ್ದಲ್ಲಿ ಮಾತ್ರ ಆಗಸ್ಟ್ 2023ರ ತಿಂಗಳಿನ ಡಿ.ಬಿ.ಟಿ ಯೋಜನೆಗೆ ಅರ್ಹರಾಗಿರುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಣ ಬಂದಿರುವ ಪರಿಶೀಲಿವುದು ಹೇಗೆ?
ಇನ್ನು ಈಗಾಗಲೇ ಹಣ ಬಂದಿದ್ದು, ಪಡಿತರದಾರರು ಹಣ ವರ್ಗಾವಣೆಯಾದ ಬಗ್ಗೆ ಹಾಗೂ ಇತರ ವಿವರಗಳನ್ನು https://ahara.kar.nic.in/status2/status_of_dbt.aspx ಲಿಂಕ್‌ನ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇದಕ್ಕೆ ಪಡಿತರ ಸಂಖ್ಯೆ ನಮೂದಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಯೋಜನೆಯ ಲಾಭ ಪಡೆದವರು, ತಾಲೂಕುವಾರು ವಿವರ
1. ಅಂಕೋಲಾ - 2480 ಜನ
2. ಭಟ್ಕಳ - 3877
3. ದಾಂಡೇಲಿ - 2587
4. ಹಳಿಯಾಳ - 4268
5. ಹೊನ್ನಾವರ - 4655
6. ಕಾರವಾರ - 3538
7. ಕುಮಟಾ - 4038
8. ಮುಂಡಗೋಡ - 2579
9. ಸಿದ್ದಾಪುರ - 2282
10. ಶಿರಸಿ - 4769
11. ಜೊಯಿಡಾ 1859
12. ಯಲ್ಲಾಪುರ 2111












Click it and Unblock the Notifications