ಖಬರಸ್ಥಾನವಾದ ನೂರಾರು ವರ್ಷದ ಗೋಮಾಳ: ಸ್ಥಳೀಯರ ಅರಿವಿಗೆ ಬಾರದೆ ದಾಖಲೆ ತಿದ್ದುಪಡಿ!
ಕಾರವಾರ, ಡಿಸೆಂಬರ್ 12 : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ ಪಂಚಾಯಿತಿ ವ್ಯಾಪ್ತಿಯಲ್ಲಿನ ನೂರಾರು ವರ್ಷದ ಗೋಮಾಳ ಜಾಗ ಇದೀಗ ಖಬರಸ್ಥಾನವಾಗಿದೆ. ಸ್ಥಳೀಯರಿಗೆ ಮಾಹಿತಿಯೇ ನೀಡದೆ ನೂರಾರು ವರ್ಷದ ಸರ್ಕಾರಿ ದಾಖಲೆಗಳನ್ನು ತಿದ್ದುಪಡಿ ಮಾಡಿರುವುದು ಇದೀಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.
ಕುಮಟಾ ತಾಲೂಕಿನ ಮಿರ್ಜಾನ ಪಂಚಾಯಿತಿಯ ಹೆದ್ದಾರಿಯ ಪಕ್ಕದ ಸರ್ವೇ ನಂ.238 ರಲ್ಲಿ 9 ಎಕರೆ 12 ಗುಂಟೆ ಗೋಮಾಳ ಜಾಗವಿದೆ. 1932 ರಿಂದ ಸರಕಾರಿ ಗೋಮಾಳವಾಗಿದ್ದ ಜಾಗವನ್ನು ಈಗ ಕಂಪೌಂಡ್ ನಿರ್ಮಿಸಿ ಖಬರಸ್ಥಾನವೆಂದು ಆಪೋಷಣೆ ತೆಗೆದುಕೊಳ್ಳಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

1932 ರಿಂದ ಗೋರ ಸ್ಥಾನ (ಗೋವುಗಳ ರಕ್ಷಣೆಯ ಸ್ಥಾನ) ಎಂದು ದಾಖಲೆಗಳಲ್ಲಿ ನಮೂದಿಸಲಾಗಿತ್ತು. ಆದರೆ ಮಿರ್ಜಾನದ ನಾಡಕಚೇರಿಗೆ 2005 ರಲ್ಲಿ ಬಂದ ಕಂದಾಯ ನಿರೀಕ್ಷಕ ಎಂಎಂ ಖಾನ್, ತಹಸೀಲ್ದಾರ ಮಿರಾಂಡಾ ಹಾಗೂ ಉಪ ತಹಶೀಲ್ದಾರ್ ಶೇಕ್ ಎನ್ನುವವರು ದಾಖಲೆಗಳನ್ನು ತಿದ್ದುಪಡಿ ಮಾಡಿ ಖಬರಸ್ಥಾನವೆಂದು ಬದಲು ಮಾಡಲಾಗಿದೆ.
ಅಲ್ಲದೆ ಅಧಿಕಾರಿಗಳು ಇನ್ನೊಂದು ಹೆಜ್ಜೆ ಮುಂದುವರೆದು 2017-18 ರಲ್ಲಿ ಹಜರತ್ ಕಾಕಾ ತೋಫಿಕ್ ಹಾಗು ಕಾಕಾ ರಫೀಕ ಅವರ ದರ್ಗಾ ಅಥವಾ ಖಬರಸ್ಥಾನ ಎಂದು ದಾಖಲು ಮಾಡಿದ್ದಾರೆ. ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತಂದು ಆಕ್ಷೇಪಣೆ ಸಲ್ಲಿಸಲು ಅವಕಾಶ ಕೊಡದೇ ಈ ರೀತಿ ಬದಲು ಮಾಡಿದ್ದನ್ನು ಖಂಡಿಸುವುದಾಗಿ ಮಿರ್ಜಾನ ಗ್ರಾಮ ಪಂಚಾಯಿತಿಯ ಸದಸ್ಯ ಗಣೇಶ ಅಂಬಿಗ ತಿಳಿಸಿದರು.
ಇನ್ನು ಇದರ ಪಕ್ಕದಲ್ಲಿ ಇದೇ ಹೆಸರಿನಲ್ಲಿರುವ 4 ಎಕರೆ ಜಮೀನಿನ ಪೈಕಿ ಒಂದು ಎಕರೆ ಜಮೀನನ್ನು ಸರ್ಕಾರಿ ಶಾಲೆ ನಿರ್ಮಾಣಕ್ಕೆ ನೀಡಲಾಗಿದೆ. ಸರ್ಕಾರಿ ನಿಯಮದಂತೆ ಒಂದು ಸಮುದಾಯದ ಸ್ಮಶಾನಗಳಿಗೆ ಗರಿಷ್ಠ 20 ಗುಂಟೆ ಭೂಮಿ ಮಾತ್ರ ನೀಡಬಹುದಾಗಿದೆ. ಆದರೆ ಇಲ್ಲಿ ದಾಖಲೆಗಳನ್ನು ತಿದ್ದುಪಡಿ ಮಾಡಿ ಜಾಗಕ್ಕೆ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಇದರಿಂದ ಸ್ಥಳೀಯ ಶಾಲೆಯ ಮಕ್ಕಳಿಗೆ ಓಡಾಟ ನಡೆಸಲು, ಆಟ ಆಡಲು, ಗೋವುಗಳಿಗೆ ಮೇಯಲು ಸ್ಥಳವೇ ಇಲ್ಲದಂತಾಗಿದೆ.

ಕೂಡಲೇ ಜಿಲ್ಲಾಡಳಿತ ಪ್ರಕರಣದಲ್ಲಿ ಇರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಅಲ್ಲಿನ ಎಲ್ಲಾ ಅನಧಿಕೃತ ಕಟ್ಟಡಗಳನ್ನು ತೆಗೆಯಬೇಕು. ಅಲ್ಲದೆ ಈ ಬಗ್ಗೆ ಕಾನೂನು ಹೋರಾಟ ಕೂಡ ನಡೆಸಲಾಗುವುದು ಎಂದು ವಕೀಲ ನಾಗರಾಜ ನಾಯಕ ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ ಐತಿಹಾಸಿಕ ಕ್ಷೇತ್ರದಲ್ಲಿನ ನೂರಾರು ವರ್ಷಗಳ ಹಿಂದಿನ ದಾಖಲೆಗಳು ಇದ್ದಕ್ಕಿದ್ದಂತೆ ತಿದ್ದುಪಡಿ ಆಗಿರುವುದು ಇದೀಗ ದಾಖಲೆಗಳಿಂದ ಬಹಿರಂಗಗೊಂಡಿದೆ. ಇದೀಗ ಎಚ್ಚೆತ್ತುಕ್ಕೊಂಡಿರುವ ಸ್ಥಳೀಯರು ಹೋರಾಟಕ್ಕೆ ಮುಂದಾಗಿದ್ದಾರೆ. ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಆಗಿರುವ ಎಡವಟ್ಟುಗಳನ್ನು ಸರಿಪಡಿಸಬೇಕಿದೆ.












Click it and Unblock the Notifications