‘ಚೌರಿ’ ಹಾಕಿ ಕಪ್ಪೆ ಬೊಂಡಾಸ್ ಅವ್ಯಾಹತ ಬೇಟೆ; ಮಾಯವಾಗುತ್ತಿದೆ ಕಡಲ ತೀರ

ಕಾರವಾರ, ನವೆಂಬರ್ 13: ಕಾರವಾರದ ಲೇಡೀಸ್ ಬೀಚ್ ಬಳಿ ತಮಿಳುನಾಡು ಹಾಗೂ ಕೇರಳದ ಮೀನುಗಾರರು ನಿಷೇಧಿತ 'ಚೌರಿ' ಹಾಕಿ ಕಪ್ಪೆ ಬೊಂಡಾಸ್ (ಸ್ಕ್ವಿಡ್ ಫಿಶ್) ಮೀನುಗಳನ್ನು ಅವ್ಯಾಹತವಾಗಿ ಬೇಟೆಯಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಅಪರೂಪದ ಮೀನು ತಳಿ ಸಂತತಿ ನಶಿಸುತ್ತಿರುವುದರ ಜತೆಗೆ, ಪರಿಸರ ಮಾಲಿನ್ಯಕ್ಕೂ ಎಡೆಮಾಡಿಕೊಡುತ್ತಿದೆ.

ಸ್ಥಳೀಯವಾಗಿ ನುಚ್ಕೆ, ಮಣಕಿ ಎಂದು ಕರೆಯಲಾಗುವ ಕಪ್ಪೆ ಬೊಂಡಾಸ್ ಮೀನುಗಳನ್ನು ಅಪಾರ ಪ್ರಮಾಣದಲ್ಲಿ ಹೊರ ರಾಜ್ಯದ ಮೀನುಗಾರರು 'ಚೌರಿ' ಹಾಕಿ ಹಿಡಿಯುತ್ತಿದ್ದಾರೆ. ಪಾತಿ ದೋಣಿ ಮೂಲಕ ಮೀನುಗಾರಿಕೆ ನಡೆಸುತ್ತಿರುವ ಅವರು, ಅವೈಜ್ಞಾನಿಕ ಕ್ರಮವನ್ನು ಅನುಸರಿಸುತ್ತಿರುವುದು ಮಾಲಿನ್ಯಕ್ಕೂ ದಾರಿ ಮಾಡಿಕೊಡುತ್ತಿದೆ. ಏನಿದು ಈ ಮೀನು ಬೇಟೆಯ ಪರಿ? ಇಲ್ಲಿದೆ ನೋಡಿ ಅದರ ವಿವರ...

 ಏನಿದು ‘ಚೌರಿ’ ಮೀನುಗಾರಿಕೆ?

ಏನಿದು ‘ಚೌರಿ’ ಮೀನುಗಾರಿಕೆ?

ಹೊರ ರಾಜ್ಯದ ಮೀನುಗಾರರು ಮೀನುಗಾರಿಕೆಗೆ ಗಾಳಿ ಮರದ ಟೊಂಗೆ ಹಾಗೂ ಮರಳನ್ನು ಬಳಸುತ್ತಾರೆ. ಆಳ ಸಮುದ್ರಕ್ಕೆ ತೆರಳಿ, ಮರಳು ತುಂಬಿದ ಪ್ಲಾಸ್ಟಿಕ್ ಚೀಲಗಳಿಗೆ ಟೊಂಗೆ ಕಟ್ಟಿ ನೀರಿಗೆ ಇಳಿಬಿಡುತ್ತಾರೆ. ಈ ಟೊಂಗೆಗಳು ವಾರದಲ್ಲೇ ಕೊಳೆಯುತ್ತವೆ. ಅದರ ಮೇಲೆ ಪಾಚಿಗಳು ಬೆಳೆಯಲಾರಂಭಿಸುತ್ತವೆ. ಬೊಂಡಾಸ್ ಮೀನುಗಳಿಗೆ ಈ ರೀತಿಯ ವಾತಾವರಣವಿರುವ ಸ್ಥಳಗಳೇ ಆವಾಸ ಸ್ಥಾನವಾಗಿರುವುದರಿಂದ ಅವು ಗುಂಪಾಗಿ ಬಂದು ಟೊಂಗೆಗಳ ಮೇಲೆ ವಾಸ ಮಾಡುತ್ತವೆ.

ಸೆಪ್ಟೆಂಬರ್‌ ನಿಂದ ಡಿಸೆಂಬರ್ ತಿಂಗಳು ಬೊಂಡಾಸ್ ಮೀನುಗಳ ಸಂತಾನಾಭಿವೃದ್ಧಿಯ ಸಮಯ. ಅವುಗಳು ಇಳಿಬಿಟ್ಟ ಟೊಂಗೆಗಳ ಮೇಲೆ ಮೊಟ್ಟೆ ಇಟ್ಟು ಮರಿ ಮಾಡಲಾರಂಭಿಸುತ್ತವೆ. ಚೀಲಗಳನ್ನು ಇಳಿಬಿಟ್ಟು ವಾರ ಕಳೆದ ಬಳಿಕ ಮತ್ತೆ ಬರುವ ಈ ಮೀನುಗಾರರು, ಗಾಳ ಹಾಕಿ ಅವುಗಳನ್ನು ಬೇಟೆಯಾಡುತ್ತಾರೆ. ಈ ವೇಳೆ ಅವುಗಳ ಮೊಟ್ಟೆ, ಮರಿಗಳೂ ನಾಶವಾಗುತ್ತವೆ. ಈ ರೀತಿಯ ಮೀನುಗಾರಿಕೆಗೆ 'ಚೌರಿ' ಎಂದು ಹೇಳಲಾಗುತ್ತದೆ. ಈ 'ಚೌರಿ' ಪದ್ಧತಿಯಲ್ಲಿ ಕಪ್ಪೆ ಬೊಂಡಾಸ್ ‌ಗಳನ್ನು ಬೇಟೆಯಾಡುವುದನ್ನು ರಾಜ್ಯ ಸರ್ಕಾರ 2012ರಲ್ಲೇ ನಿಷೇಧಿಸಿದೆ.

 ದೋಣಿ ಸಂಖ್ಯೆ ನಕಲಿ!

ದೋಣಿ ಸಂಖ್ಯೆ ನಕಲಿ!

ಹೀಗಿದ್ದರೂ ಪ್ರತಿವರ್ಷ ಇದೇ ಪದ್ಧತಿಯಲ್ಲಿ ಹೊರ ರಾಜ್ಯದವರಿಂದ ಮೀನುಗಾರಿಕೆ ಮುಂದುವರಿದೆ. ಕಾರವಾರದ ಲೇಡಿಸ್ ಬೀಚ್, ದೇವಬಾಗ, ಮಾಜಾಳಿ, ಭಟ್ಕಳದ ನೇತ್ರಾಣಿ, ಹೊನ್ನಾವರ ಹಾಗೂ ಕುಮಟಾ ಭಾಗಗಳಲ್ಲೂ ಈ ರೀತಿಯ ಮೀನುಗಾರಿಕೆ ಮುಂದುವರಿದಿದೆ. 'ವಿಷಯ ತಿಳಿದರೂ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ' ಎಂದು ದೂರುತ್ತಾರೆ ಮೀನುಗಾರರು.

ತಮಿಳುನಾಡು ಹಾಗೂ ಕೇರಳದ ಮೀನುಗಾರರು ತಮ್ಮೂರಿನಿಂದಲೇ ಪಾತಿ ದೋಣಿಗಳನ್ನು ಇಲ್ಲಿಗೆ ಲಾರಿಯ ಮೂಲಕ ತರುತ್ತಿದ್ದರು. ಇತ್ತೀಚಿಗೆ ಚೆಕ್‌ಪೋಸ್ಟ್ ಗಳಲ್ಲಿ ಇಂಥ ದೋಣಿಗಳನ್ನು ಪರಿಶೀಲಿಸುತ್ತಿರುವುದರಿಂದ, ಬೋಟ್‌ಗಳ ಮೂಲಕವೇ ದೋಣಿಗಳನ್ನು ಇಲ್ಲಿಗೆ ತರುತ್ತಿದ್ದಾರೆ. ಸ್ಥಳೀಯ 'ಏಜೆಂಟ್' ಮೀನುಗಾರ ಕೆಲವರಿಗೆ ಹಣ ಕೊಟ್ಟು, ಇಲ್ಲಿನ ದೋಣಿಯ ಸಂಖ್ಯೆಯನ್ನು ಪಡೆದುಕೊಳ್ಳುತ್ತಾರೆ. ಅದನ್ನು ತಮ್ಮ ಪಾತಿ ದೋಣಿಗೆ ಅಂಟಿಸಿಕೊಂಡು, ಇಲ್ಲಿ ಮೀನುಗಾರಿಕೆ ನಡೆಸುತ್ತಾರೆ.

ಮೀನುಗಾರ ಮುಖಂಡರೂ ಶಾಮೀಲು?

ಮೀನುಗಾರ ಮುಖಂಡರೂ ಶಾಮೀಲು?

ಈ ರೀತಿ ಅವೈಜ್ಞಾನಿಕವಾಗಿ ಮೀನುಗಾರಿಕೆ ನಡೆಸುವವರಿಗೆ ಕೆಲವು ಮೀನುಗಾರ ಮುಖಂಡರೂ ಸಹಕಾರ ನೀಡುತ್ತಿರುವುದಾಗಿ ಆರೋಪ ಕೇಳಿ ಬಂದಿದೆ. ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಇಂಥ ಅವೈಜ್ಞಾನಿಕ ಪದ್ಧತಿಯಲ್ಲಿ ಮೀನುಗಾರಿಕೆ ನಡೆಸುವವರನ್ನು ಹಿಡಿದಾಗ, ಅವರನ್ನು ಬಿಡುವಂತೆ ಕೆಲವರು ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸುತ್ತಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳ ಕಚೇರಿಗೆ ತೆರಳಿ, ಹೊರ ರಾಜ್ಯದ ಮೀನುಗಾರರನ್ನು ಬಿಡಿಸಿಕೊಂಡು ಬಂದಿರುವ ಹಲವು ಉದಾಹರಹಣೆಗಳೂ ಇವೆ ಎನ್ನುತ್ತಾರೆ ಕೆಲವು ಮೀನುಗಾರರು. ಇದರಿಂದಾಗಿಯೇ ಅಧಿಕಾರಿಗಳು ಹೊರ ರಾಜ್ಯದ ಮೀನುಗಾರರ ಮೇಲೆ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.

 ‘ಲೇಡಿಸ್ ಬೀಚ್’ ಮಾಯ!

‘ಲೇಡಿಸ್ ಬೀಚ್’ ಮಾಯ!

ಈ 'ಚೌರಿ' ಮೀನುಗಾರಿಕೆಗೆ 25 ಕೆ.ಜಿ ಸಾಮರ್ಥ್ಯದ ಪ್ಲಾಸ್ಟಿಕ್ ಚೀಲಗಳನ್ನು ಬಳಸಲಾಗುತ್ತದೆ. ಅದರ ಒಳಗೆ ಪ್ಲಾಸ್ಟಿಕ್ ಕವರ್‌ಗಳನ್ನೂ ಬಳಕೆ ಮಾಡಲಾಗುತ್ತದೆ. ಚೀಲದೊಳಗೆ ತುಂಬಲು ಮರಳನ್ನು 'ಲೇಡಿಸ್ ಬೀಚ್'ನಿಂದ ತೆಗೆದುಕೊಳ್ಳಲಾಗುತ್ತಿದೆ. ಕಡಲತೀರದಲ್ಲಿ ಮರಳು ಖಾಲಿಯಾಗತೊಡಗಿದ್ದು, ಸಮುದ್ರ ತೀರವನ್ನೇ ಆಪೋಷನ ಮಾಡಿಕೊಳ್ಳುತ್ತಿದೆ.

ಇನ್ನು, ಮತ್ಸ್ಯ ಶಿಕಾರಿಯ ಬಳಿಕ ಚೀಲಗಳನ್ನು ಸಮೀಪದ ದಡದಲ್ಲಿ ಎಸೆಯಲಾಗುತ್ತಿದೆ. ಇದರಿಂದಾಗಿ ಪ್ಲಾಸ್ಟಿಕ್ ಕವರ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ಪ್ಲಾಸ್ಟಿಕ್‌ಗಳು ಸಮುದ್ರಕ್ಕೆ ಸೇರಿ, ಸಾಂಪ್ರದಾಯಿಕ ಮೀನುಗಾರರ ಮೀನುಗಾರಿಕೆಗೆ ತೊಡಕುಂಟು ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+