ಉ.ಕ.ಜಿಲ್ಲೆಯಲ್ಲಿ ಭಾರೀ ಮಳೆ, 5 ತಾಲೂಕುಗಳ ಶಾಲೆಗಳಿಗೆ ಆ.13ರಂದು ರಜಾ
ಕಾರವಾರ, ಆಗಸ್ಟ್.13: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಸೋಮವಾರವೂ ಮಳೆ ಮುಂದುವರಿದಿದೆ.
ಮುನ್ನೆಚ್ಚರಿಕೆಯಾಗಿ ಮಲೆನಾಡು ಭಾಗದ ಐದು ತಾಲೂಕುಗಳ ಜಿಲ್ಲಾಧಿಕಾರಿಗಳು ಶಾಲೆಗಳಿಗೆ ಮಂಗಳವಾರ ರಜಾ ಘೋಷಿಸಲಾಗಿದೆ.
ಆಯಾ ತಾಲ್ಲೂಕಿನ ಶಿಕ್ಷಣಾಧಿಕಾರಿಗಳಿಗೆ ರಜಾ ಘೋಷಣೆಗೆ ಅಧಿಕಾರವನ್ನು ನೀಡಲಾಗಿತ್ತು. ಅದರಂತೆ, ಇದೀಗ ಕಾರವಾರ ಹಾಗೂ ಅಂಕೋಲಾ ತಾಲ್ಲೂಕುಗಳಿಗೂ ರಜೆ ಘೋಷಣೆ ಮಾಡಲಾಗಿದೆ. ಅಧಿಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಜಾ ಘೋಷಿಸಲಾಗಿದೆ.
ಶಾಲೆಯ ಮೇಲೆ ಬಿದ್ದ ಮರದ ಟೊಂಗೆ
ಯಲ್ಲಾಪುರ ಪಟ್ಟಣದ ಕಾಳಮ್ಮನಗರ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಜೋರು ಮಳೆಗೆ ಮರದ ಟೊಂಗೆಯೊಂದು ಬಿದ್ದು, ತರಗತಿ ಕೊಠಡಿ ಹಾಗೂ ಶೌಚಾಲಯಕ್ಕೆ ಭಾಗಶಃ ಹಾನಿಯಾಗಿದೆ.

ಮಧ್ಯಾಹ್ನ 11 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಈ ಸಂದರ್ಭದಲ್ಲಿ ಶಾಲೆಯ ಕೊಠಡಿಯಲ್ಲಿ ತರಗತಿ ನಡೆಯುತ್ತಿತ್ತು. ಮರದ ಟೊಂಗೆ ಕಿತ್ತು ಬರುವುದನ್ನು ಕಂಡ ಶಾಲೆಯ ಪಕ್ಕದ ನಿವಾಸಿಗಳು. ಕೂಡಲೇ ಶಾಲೆಯೆಡೆಗೆ ಧಾವಿಸಿ ಬೊಬ್ಬೆ ಹಾಕಿ ಮಕ್ಕಳನ್ನು ಓಡಿ ಹೋಗಲು ಪ್ರಚೋದಿಸಿದ್ದಾರೆ.
ಎಲ್ಲಾ ಮಕ್ಕಳು, ಶಿಕ್ಷಕರು ಶಾಲೆಯಿಂದ ಹೊರಗೆ ಓಡಿ ಬಂದಿದ್ದು, ಅದೇ ಸಮಯಕ್ಕೆ ಮರದ ಟೊಂಗೆ ಶಾಲೆಯ ಮೇಲೆ ಬಿದ್ದಿದೆ. ಶಾಲೆಯ ಅಕ್ಕಪಕ್ಕದ ನಿವಾಸಿಗಳು, ಚರ್ಚ್ ಕೆಲಸಗಾರನ ಮುಂಜಾಗ್ರತೆಯಿಂದಾಗಿ ಶಾಲೆಯಲ್ಲಿ ಸಂಭವಿಸಬಹುದಾದ ಅಪಾಯ ತಪ್ಪಿದಂತಾಗಿದೆ.
ಪ್ರವಾಹದ ಮುನ್ಸೂಚನೆ
ಭಾರತೀಯ ಹವಾಮಾನ ಇಲಾಖೆಯು ಆ.16ರವರೆಗೆ ರಾಜ್ಯದ ಕರಾವಳಿ ಭಾಗದಲ್ಲಿ ಪ್ರವಾಹ ಉಂಟಾಗಬಹುದೆಂಬ ಮುನ್ಸೂಚನೆ ರವಾನಿಸಿದೆ. ಅದರಂತೆ, ಆ.17ರ ವರೆಗೆ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ರವಾನಿಸಿದೆ.












Click it and Unblock the Notifications