ಕಾಡಿನ ಮಧ್ಯೆ ಹೆತ್ತ ತಾಯಿ ಎದುರಿನಲ್ಲೇ ಕಣ್ಣು ಮುಚ್ಚಿದ ಮರಿಯಾನೆ
ಕಾರವಾರ, ಜನವರಿ.09: ಆಗಷ್ಟೇ ತಾಯಿಯ ಗರ್ಭದಿಂದ ಪ್ರಪಂಚಕ್ಕೆ ಕಾಲಿಟ್ಟ ಆ ಪುಟ್ಟ ಕಂದ ಕಣ್ಣು ಬಿಡುವುದರಲ್ಲೇ ಕಣ್ಣು ಮುಚ್ಚಿದೆ. ವಿಧಿಯ ಆಟವೋ, ದೇವರ ಶಾಪವೋ, ಹೆತ್ತವಳ ಕಣ್ಣು ಎದುರಿನಲ್ಲೇ ಆಡಿ ನಲಿಬೇಕಿದ್ದ ಮಗು ಪ್ರಾಣ ಬಿಟ್ಟಿದೆ.
ಇದು ಮನುಷ್ಯರ ರೋಧನೆಯ ಕಥೆಯಲ್ಲ. ಬದಲಿಗೆ ಕಾಡಿನ ಮಧ್ಯೆ ಕಂದನ ಕಳೆದುಕೊಂಡು ರೋಧಿಸುತ್ತಿರುವ ಕಾಡಾನೆಯ ವ್ಯಥೆ. ಇಂಥದೊಂದು ಮನಕಲುಕುವ ಘಟನೆ ಉತ್ತಕರನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಉಗ್ಗಿನಕೇರಿ ಎಂಬಲ್ಲಿ ನಡೆದಿದೆ.
ಕಾಡಾನೆ ಜನ್ಮ ನೀಡಿದ ಕೆಲ ಸಮಯದಲ್ಲೇ ಮರಿಯಾನೆಯು ಸಾವನ್ನಪ್ಪಿದ್ದು, ಅನಾರೋಗ್ಯಕ್ಕೆ ಒಳಗಾಗಿರುವ ಕಾರಣಕ್ಕೆ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಕಾಡಾನೆ ಮರಿ ಸಾವನ್ನಪ್ಪಿರುವ ಸುದ್ದಿ ತಿಳಿದ ತಕ್ಷಣ ಅರಣ್ಯಾಧಿಕಾರಿಗಳು ಹಾಗೂ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಖರ ಮಾಹಿತಿ ಪತ್ತೆ ಹಚ್ಚುವಂತೆ ವೈದ್ಯರಿಗೆ ಸೂಚನೆ:
ಇನ್ನು, ಸ್ಥಳೀಯ ಶಾಸಕ ಶಿವರಾಮ್ ಹೆಬ್ಬಾರ ಸಹ ಸ್ಥಳಕ್ಕೆ ಭೇಟಿ ನೀಡಿದ್ದರು. ವೈದ್ಯರೊಂದಿಗೆ ಮಾತುಕತೆ ನಡೆಸಿ ಕಾಡಾನೆ ಮರಿ ಸಾವಿಗೆ ಕಾರಣ ಏನು ಎನ್ನುವ ಬಗ್ಗೆ ನಿಖರ ಕಾರಣ ಪತ್ತೆ ಹಚ್ಚಿ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಈ ಭಾಗದಲ್ಲಿ ಮೊದಲ ಬಾರಿಗೆ ಇಂತಹ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಜನ್ಮ ನೀಡಿರುವ ತಾಯಿ ಆನೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ತಾಯಿ ಆನೆ ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.












Click it and Unblock the Notifications