ಉಳವಿ ಚನ್ನಬಸವೇಶ್ವರ ಜಾತ್ರೆ: ಚಕ್ಕಡಿ ಗಾಡಿಗಳಿಗೆ ನಿರ್ಬಂಧ ಹೇರಿದ್ದು ಯಾಕೆ?, ಇಲ್ಲಿಗೆ ಮಾಹಿತಿ
ಜೋಯಿಡಾ ತಾಲೂಕಿನ ಉಳವಿ ಕ್ಷೇತ್ರದಲ್ಲಿ ಪ್ರತಿವರ್ಷ ನಡೆಯುವ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಚಕ್ಕಡಿ ಗಾಡಿಗಳ ಮೂಲಕ ಭಕ್ತರು ಆಗಮಿಸುವುದು ವಿಶೇಷವಾಗಿದೆ. ಆದರೆ ಈ ಬಾರಿ ಚಕ್ಕಡಿ ಗಾಡಿಗಳಿಗೆ ಉತ್ತರ ಕನ್ನಡ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು ಏಕೆ? ಸಂಪೂರ್ಣ ಮಾಹಿತಿ
ಕಾರವಾರ, ಜನವರಿ, 25: ಜನವರಿ 28ರಿಂದ ಫೆಬ್ರವರಿ 8ರ ವರೆಗೂ ಪುರಾಣ ಪ್ರಸಿದ್ಧ ಉಳವಿ ಶ್ರೀ ಚೆನ್ನಬಸವೇಶ್ವರ ಕ್ಷೇತ್ರದ ಜಾತ್ರಾ ಮಹೋತ್ಸವ ನಡೆಯಲಿದೆ. ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಬಾಧಿಸುತ್ತಿರುವ ಹಿನ್ನೆಲೆ ಈ ಬಾರಿ ಜಾತ್ರೆಗೆ ಚಕ್ಕಡಿ ಗಾಡಿಗಳಿಗೆ ನಿರ್ಬಂಧ ಹೇರಲಾಗಿದೆ. ಹಾಗೆಯೇ ಭಕ್ತರ ಅನೂಕೂಲಕ್ಕಾಗಿ ವಿಶೇಷ ಬಸ್‌ಗಳನ್ನು ಬಿಡಲು ಉತ್ತರ ಕನ್ನಡ ಜಿಲ್ಲಾಡಳಿತ ನಿರ್ಧಾರ ಮಾಡಿದೆ.
ಪಶ್ಚಿಮ ಘಟ್ಟಗಳ ದಟ್ಟ ಕಾನನದ ನಡುವೆ ವಿರಾಜಮಾನರಾಗಿರುವ ಶ್ರೀ ಚನ್ನಬಸವೇಶ್ವರರ ಕ್ಷೇತ್ರ ಉಳವಿವಾಗಿದೆ. ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿರುವ ಉಳವಿ ಕ್ಷೇತ್ರದಲ್ಲಿ ಪ್ರತಿವರ್ಷ ನಡೆಯುವ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಚಕ್ಕಡಿ ಮೂಲಕ ಭಕ್ತರು ಆಗಮಿಸುವುದು ವಿಶೇಷವಾಗಿದೆ. ಚಕ್ಕಡಿ ಜಾತ್ರೆ ಎಂದೇ ಪ್ರಸಿದ್ಧವಾಗಿದ್ದ ಉಳವಿ ಜಾತ್ರೆಗೆ ವಿವಿಧೆಡೆಗಳಿಂದ ಆಗಮಿಸುವ ಭಕ್ತರು, ವಾರಗಳ ಕಾಲ ಇಲ್ಲಿಯೇ ಉಳಿದುಕೊಂಡು ಮಹಾರಥೋತ್ಸವ ಮುಗಿಸಿ ತಮ್ಮ ಊರುಗಳಿಗೆ ವಾಪಸ್ಸಾಗುತ್ತಿದ್ದರು. ಆದರೆ ಕಳೆದೆರಡು ವರ್ಷಗಳಿಂದ ಮಹಾಮಾರಿ ಕೊರೊನಾ ಕಾರಣದಿಂದ ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗಿದ್ದು, ಹೆಚ್ಚಿನ ಭಕ್ತರಿಲ್ಲದೇ ಜಾತ್ರೆಯೂ ಮಂಕಾಗಿತ್ತು.
ಆದರೆ ಈ ಬಾರಿ ಜನವರಿ 28 ರಿಂದ ಫೆಬ್ರವರಿ 8ರವರೆಗೆ ಜಾತ್ರೆ ನಡೆಯಲಿದ್ದು, ಫೆಬ್ರುವರಿ 6 ರಂದು ಮಹಾರಥೋತ್ಸವ ಜರುಗಲಿದೆ. ಜನವರಿ 28ರಂದು ಬೆಳಗ್ಗೆ 7 ಗಂಟೆಗೆ ಷಟಸ್ಥಲ ಧ್ವಜಾರೋಹಣ, ರಾತ್ರಿ 8 ಗಂಟೆಗೆ ರಥಗಳ ಪೂಜೆ, ಸೀಮೆ ಕಟ್ಟುವುದು, ಮಹಾಪೂಜೆ, ಮಂಗಳಾರತಿ ನಡೆಯಲಿದೆ.

ಯಾವೆಲ್ಲ ಕಾರ್ಯಕ್ರಮಗಳು ಇರಲಿವೆ?
ಇನ್ನು ಜನವರಿ 29ರಂದು ಪಲ್ಲಕ್ಕಿ ಉತ್ಸವ, ಜನವರಿ 30ರಂದು ಸಂಜೆ ಭೂಮಿಪೂಜೆ, ನವಧಾನ್ಯ ಹಾಕುವುದು, ಜನವರಿ 31ರಂದು ಹುಂಡಿಗಳ ಪೂಜೆ, ಉತ್ಸವಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಫೆಬ್ರವರಿ 1ರಂದು ಪಲ್ಲಕ್ಕಿ ಉತ್ಸವ, ರಕ್ಷಾದೇವಿಯ ಸಣ್ಣರಥೋತ್ಸವ, ಫೆಬ್ರವರಿ 2ರಂದು ವೀರಭದ್ರೇಶ್ವರ ಸಣ್ಣ ರಥೋತ್ಸವ, ಫೆಬ್ರವರಿ 3ರಂದು ಎಲ್ಲಾ ದೇವರ ಸಣ್ಣ ರಥೋತ್ಸವ, ಫೆಬ್ರವರಿ 4ರಂದು ಚತುರ್ದಶಿ, ಫೆಬ್ರವರಿ 5ರಂದು ರಾತ್ರಿ 8 ಗಂಟೆಗೆ ಚೆನ್ನಬಸವೇಶ್ವರರ ರಥಾರೋಹಣ, ಫೆಬ್ರವರಿ 6ರಂದು ಸಂಜೆ 4 ಗಂಟೆಗೆ ಮಹಾರಥೋತ್ಸವ, ಫೆಬ್ರವರಿ 7ರಂದು ಬಯಲು ಕುಸ್ತಿ, ಫೆಬ್ರವರಿ 8ರಂದು ಓಕಳಿ, ಸಣ್ಣರಥೋತ್ಸವ ನಡೆಯಲಿದೆ.

ಚಕ್ಕಡಿ ಗಾಡಿಗಳಿಗೆ ನಿರ್ಬಂಧ ಏಕೆ?
ಈ ಬಾರಿ ಜಾತ್ರೆಯನ್ನು ಅದ್ದೂರಿಯಾಗಿ ನಡೆಸಲು ಉದ್ದೇಶಿಸಲಾಗಿದೆ. ಆದರೂ ಜಾನುವಾರುಗಳಿಗೆ ಚರ್ಮಗಂಟು ರೋಗ ಎದುರಾಗಿರುವ ಹಿನ್ನೆಲೆ ಚಕ್ಕಡಿ ಗಾಡಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಜಾತ್ರೆಗೆ ಯಾರೂ ಸಹ ಚಕ್ಕಡಿ ಗಾಡಿಗಳನ್ನು ತರದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ದೇವಸ್ಥಾನ ಸಮಿತಿ ಸಹ ಭಕ್ತರಿಗೆ ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ಹಳಿಯಾಳ, ಜೋಯಿಡಾ ಭಾಗದಲ್ಲಿ ರೋಗ ಉಲ್ಬಣಗೊಂಡಿರುವ ಕಾರಣ ಇದರಿಂದ ಇತರೆ ಜಾನುವಾರುಗಳಿಗೂ ರೋಗ ತಗಲುವ ಸಾಧ್ಯತೆ ಇದೆ. ಈ ಕಾರಣದಿಂದ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು, ಭಕ್ತರು ಚಕ್ಕಡಿ ಗಾಡಿಗಳ ಬದಲಿಗೆ ಟ್ರಾಕ್ಟರ್ ಇಲ್ಲವೇ ಬಸ್‌ಗಳಲ್ಲಿ ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಚೆನ್ನಬಸವೇಶ್ವರ ಟ್ರಸ್ಟ್ ಮನವಿ ಮಾಡಿದೆ.

ಭಕ್ತರ ಅನೂಕೂಲಕ್ಕಾಗಿ ಬಸ್ ವ್ಯವಸ್ಥೆ
ಇನ್ನು ಉಳವಿ ಚೆನ್ನಬಸವೇಶ್ವರರು ರೈತರ ಆರಾಧ್ಯ ದೈವವಾಗಿದ್ದು, ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಅದರಲ್ಲೂ ರೈತರು ವಿಶೇಷವಾಗಿ ತಮ್ಮ ಕುಟುಂಬದವರೊಂದಿಗೆ ಜಾನುವಾರುಗಳನ್ನು ಕಟ್ಟಿಕೊಂಡು ಚಕ್ಕಡಿ ಗಾಡಿಗಳಲ್ಲಿ ಆಗಮಿಸಿ ಜಾತ್ರೆಯ 12 ದಿನಗಳ ಕಾಲ ಉಳವಿಯಲ್ಲೇ ಬೀಡು ಬಿಟ್ಟಿರುತ್ತಿದ್ದರು. ಪ್ರತಿವರ್ಷ ಸುಮಾರು ಐನೂರಕ್ಕೂ ಅಧಿಕ ಚಕ್ಕಡಿ ಗಾಡಿಗಳು ರಾಜ್ಯದ ವಿವಿಧೆಡೆಗಳಿಂದ ಈ ಜಾತ್ರೆಗಾಗಿಯೇ ಆಗಮಿಸುತ್ತಿದ್ದವು.

ಅನಾನುಕೂಲ ಆಗದಂತೆ ಮುನ್ನೆಚ್ಚರಿಕೆ
ಆದರೆ ಈ ಬಾರಿ ಜಾನುವಾರುಗಳಿಗೆ ಚರ್ಮಗಂಟು ರೋಗ ಉಲ್ಬಣಿಸುತ್ತಿದೆ. ಜೋಯಿಡಾ, ಹಳಿಯಾಳ ತಾಲೂಕುಗಳಲ್ಲೇ ಹೆಚ್ಚಿನದಾಗಿ ಭಾದಿಸುತ್ತಿದ್ದು, ಜಾನುವಾರುಗಳು ಸಾವನ್ನಪ್ಪಿದ ಘಟನೆಗಳು ಸಹ ನಡೆದಿವೆ. ಈ ಕಾರಣದಿಂದ ಜಾನುವಾರುಗಳಿಗೆ ರೋಗ ವ್ಯಾಪಿಸುವುದನ್ನು ನಿಯಂತ್ರಿಸುವ ಉದ್ದೇಶದಿಂದಲೇ ಈ ಬಾರಿ ಚಕ್ಕಡಿಗಳಿಗೆ ನಿಷೇಧ ಹೇರಲಾಗಿದೆ. ಆದ್ದರಿಂದ ಭಕ್ತರ ಅನುಕೂಲಕ್ಕಾಗಿ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಭಕ್ತರಿಗೆ ಯಾವುದೇ ರೀತಿಯಲ್ಲೂ ಅನಾನುಕೂಲ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಉಳವಿ ಚೆನ್ನಬಸವೇಶ್ವರ ಟ್ರಸ್ಟ್ ಉಪಾಧ್ಯಕ್ಷ ಸಂಜಯ ಕಿತ್ತೂರು ಮಾಹಿತಿ ನೀಡಿದರು.
ಒಟ್ಟಾರೆ ಕೊರೊನಾ ಆತಂಕದ ಎರಡು ವರ್ಷಗಳ ಬಳಿಕ ಉಳವಿ ಜಾತ್ರೆ ನಡೆಸಲು ಅವಕಾಶ ಸಿಕ್ಕಿದೆ. ಆದರೂ ಜಾನುವಾರುಗಳಿಗೆ ಚರ್ಮಗಂಟು ರೋಗದಿಂದಾಗಿ ಚಕ್ಕಡಿ ಗಾಡಿಗಳಿಗೆ ಈ ಬಾರಿ ಜಾತ್ರೆಗೆ ಪ್ರವೇಶ ಇಲ್ಲದಂತಾಗಿದೆ. ಈಗಾಗಲೇ ಚಕ್ಕಡಿಗಳನ್ನು ತರದಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗಿದ್ದು, ಜಾನುವಾರುಗಳ ಹಿತದೃಷ್ಟಿಯಿಂದ ಭಕ್ತರು ಜಿಲ್ಲಾಡಳಿತದ ಸೂಚನೆಯನ್ನ ಪಾಲಿಸಬೇಕಾಗಿರುವುದು ಅನಿವಾರ್ಯವಾಗಿದೆ.












Click it and Unblock the Notifications