Sharada Shetty: ಕುಮಟಾ ಕಾಂಗ್ರೆಸ್ ಬಂಡಾಯ ಶಮನ: ನಾಮಪತ್ರ ಹಿಂಪಡೆದು ರಾಜಕೀಯ ನಿವೃತ್ತಿ ಘೋಷಿಸಿದ ಶಾರದಾ ಶೆಟ್ಟಿ
ಕಾರವಾರ, ಏಪ್ರಿಲ್ 24: ಕಾಂಗ್ರೆಸ್‌ನಿಂದ ಬಂಡಾಯವೆದ್ದು ಪಕ್ಷೇತರರಾಗಿ ಚುನಾವಣಾ ಕಣಕ್ಕಿಳಿಯಲು ನಿರ್ಧರಿಸಿದ್ದ ಮಾಜಿ ಶಾಸಕಿ ಶಾರದಾ ಶೆಟ್ಟಿ ಕೊನೆಗೂ ನಾಮಪತ್ರ ಹಿಂಪಡೆಯುವುದರ ಜೊತೆಗೆ ರಾಜಕೀಯದಿಂದಲೇ ನಿವೃತ್ತಿ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಕುಮಟಾ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಾರದಾ ಶೆಟ್ಟಿ ಅವರನ್ನು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರವಾಣಿ ಕರೆ ಮಾಡಿ ನಾಮಪತ್ರ ಹಿಂಪಡೆಯುವಂತೆ ಮನವೊಲಿಕೆ ಮಾಡಿದ್ದಾರೆ. ಎಂ.ಎಲ್.ಸಿ. ಅಥವಾ ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ಕೊಡುವುದಾಗಿಯೂ ಭರವಸೆ ಕೊಟ್ಟಿದ್ದರು ಎನ್ನಲಾಗಿತ್ತು.

ಆದರೆ ಶಾರದಾ ಶೆಟ್ಟಿನಾಮಪತ್ರ ಹಿಂಪಡೆಯುವುದರ ಜೊತೆಗೆ, ಇಂದು ನಾನು ರಾಜಕೀಯವಾಗಿಯೇ ನಿವೃತ್ತಿ ಪಡೆಯಲು ಬಯಸಿದ್ದೇನೆ ಎಂದು ತಿಳಿಸಿದ್ದಾರೆ.
ಪಕ್ಷಕ್ಕಾಗಿ ಹಲವು ವರ್ಷದಿಂದ ನಾನು ಮತ್ತು ನಮ್ಮ ಕುಟುಂಬದವರು ಕೆಲಸ ಮಾಡಿದ್ದೇವೆ. ಆದರೆ ಪಕ್ಷ ಟಿಕೆಟ್ ನೀಡದಿರುವುದು ನೋವುಂಟು ಮಾಡಿದೆ ಎಂದಿರುವ ಶಾರದಾ ಶೆಟ್ಟಿ ರಾಜಕೀಯ ನಿವೃತ್ತಿ ಪಡೆದ ಮೇಲೆ ಯಾರೊಬ್ಬರಿಗೂ ಬೆಂಬಲಿಸುವ ಪ್ರಮೇಯವೇ ಇಲ್ಲ. ನಮ್ಮ ಬೆಂಬಲಿಗರು ಯಾರನ್ನಾದರೂ ಬೆಂಬಲಿಸಲು ಸ್ವತಂತ್ರರಾಗಿದ್ದಾರೆ ಎಂದು ತಿಳಿಸಿದ್ದಾರೆ.
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕುಮಟಾ-ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಯನ್ನು ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಅವರ ಪುತ್ರ ನಿವೇದಿತ್ ಆಳ್ವಾ ಅವರಿಗೆ ಹೈಕಮಾಂಡ್ ನೀಡಿತ್ತು. ಕುಮಟಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸದ ನಿವೇದಿತ್ ಆಳ್ವಾ ಅವರಿಗೆ ಟಿಕೆಟ್ ನೀಡುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.

ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ, ಮಂಜುನಾಥ ನಾಯಕ, ಶಿವಾನಂದ ಹೆಗಡೆ ಕಡತೋಕಾ ಸೇರಿದಂತೆ 15ಕ್ಕೂಆಂಕಾಕ್ಷಿಗಳು ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಆಕಾಂಕ್ಷಿಗಳ ನಿರೀಕ್ಷೆಗೆ ತಣ್ಣೀರು ಎರಚಿದ್ದ ಕಾಂಗ್ರೆಸ್ ನಿವೇದಿತ್ ಆಳ್ವಾಗೆ ಟಿಕೆಟ್ ನೀಡಿತ್ತು. ಇದರಿಂದ ಕುಮಟಾ-ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಮೇಲೆ ತೀವ್ರ ಅಸಮಾಧಾನಗೊಂಡಿದ್ದರು.
ಮಾಜಿ ಶಾಸಕಿ ಶಾರದಾ ಶೆಟ್ಟಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು, ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ದೃಢ ನಿರ್ಧಾರ ಮಾಡಿದ್ದ ಅವರು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನವೊಲಿಕೆ ಮೇಲೆ ನಾಮಪತ್ರ ಹಿಂಪಡೆದಿದ್ದು, ಜೊತೆಗೆ ಯಾವ ಪಕ್ಷಕ್ಕೂ ಬೆಂಬಲ ಸೂಚಿಸದೇ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ.












Click it and Unblock the Notifications