ರಾಹುಲ್ ಗಾಂಧಿ 'ಪಪ್ಪು' ಆಗಿರೋದೆ ಸೋಲಿಗೆ ಕಾರಣ: ಆನಂದ ಅಸ್ನೋಟಿಕರ್
ಕಾರವಾರ, ಡಿಸೆಂಬರ್ 13: 'ಜನತಾದಳ ರಾಜ್ಯದಲ್ಲಿ ಸೋಲಲು ಕಾರಣವೇ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು. ಸಿದ್ದರಾಮಯ್ಯ, ಡಿಕೆಶಿಯಿಂದ ಕಾಂಗ್ರೆಸ್ ಸೋತಿಲ್ಲ; ಅದಕ್ಕೆ ಪಪ್ಪು ರಾಹುಲ್ ಗಾಂಧಿ ಕಾರಣ" ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಯುವಕರಿಗೆ ಕಾಂಗ್ರೆಸ್ ಇದೆ ಅನ್ನೋದೇ ಗೊತ್ತಿಲ್ಲ. ಕಾಂಗ್ರೆಸ್ ಗಾಂಧಿ ಕುಟುಂಬದ ಮೊನಾಪಲಿಯಾಗಿದೆ. ಯುವಕರ ತಲೆಯಲ್ಲಿ ರಾಹುಲ್ ಗಾಂಧಿ ಎಂದರೆ ಪಪ್ಪು ಎಂಬ ಇಮೇಜ್ ಇದೆ. ಸೋಲು ನಮ್ಮದಲ್ಲ, ಮೈತ್ರಿಯದ್ದು" ಎಂದಿದ್ದಾರೆ.
'ಈ ಹಿಂದೆ ಜಿಲ್ಲೆಯಲ್ಲಿ ನಡೆಯುತ್ತಿದ್ದ ರೋಲ್ ಕಾಲ್, ಅಧಿಕಾರಿಗಳ ಕಿರುಕುಳ ಶಿವರಾಮ ಹೆಬ್ಬಾರ್ ಅವರ ಜಿಲ್ಲಾ ಉಸ್ತುವಾರಿಯಲ್ಲಿ ಇರುವುದಿಲ್ಲ ಎಂಬ ನಂಬಿಕೆ' ಇದೆ ಎನ್ನುತ್ತಾ ಪರೋಕ್ಷವಾಗಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ತಿವಿದರು.
'ನಾನು ವರ್ಚಸ್ಸಿನ ರಾಜಕಾರಣ ಮಾಡುತ್ತಿಲ್ಲ. ರಾಜಕಾರಣ ಮಾಡಲು ಬಂದಿಲ್ಲ, ಜನಸೇವೆ ಮಾಡಲು ಬಂದವನು. ಜನರ ತೀರ್ಮಾನದ ಮೇಲೆ ಮೂರ್ನಾಲ್ಕು ತಿಂಗಳಲ್ಲಿ ಯಾವ ಪಕ್ಷಕ್ಕೆ ಸೇರಬೇಕು ಅಥವಾ ಜೆಡಿಎಸ್ ನಲ್ಲೇ ಇರಬೇಕೋ ಎನ್ನುವ ತೀರ್ಮಾನ ಮಾಡಲಿದ್ದೇನೆ. ಮಧು ಬಂಗಾರಪ್ಪನವರ ಅವಶ್ಯಕತೆ ಜನತಾ ದಳಕ್ಕೆ ಬಹಳ ಇದೆ. ಅವರು ಜೆಡಿಎಸ್ ಶಕ್ತಿ. ಕುಮಾರಣ್ಣನವರ ಜತೆ ಸೇರಿ ಅವರು ಪಕ್ಷ ಕಟ್ಟುತ್ತಾರೆ' ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕ ಉತ್ತರಿಸಿದರು.

'ಕಾರವಾರ ಶಾಸಕಿ ರೂಪಾಲಿ ನಾಯ್ಕ ರಾಜಕೀಯಕ್ಕೆ ಬಂದಿದ್ದೇ ವಸಂತ ಅಸ್ನೋಟಿಕರ್ ಅಭಿಮಾನಿ ಸಂಘದಿಂದ. ನಮಗೂ ಅವರಿಂದ ಸಾಕಷ್ಟು ನಿರೀಕ್ಷೆ ಇದೆ. ನೂರಾರು ಕೋಟಿ ಅನುದಾನ ತಂದಿದ್ದಾಗಿ ಅವರೀಗ ಹೇಳಿಕೊಳ್ಳುತ್ತಿದ್ದಾರೆ. 162 ಕೋಟಿಯ 300 ಬೆಡ್ ಆಸ್ಪತ್ರೆಗೆ ಮೆಡಿಕಲ್ ಕಾಲೇಜಿಗೆ ಅನುಮತಿ ಸಿಕ್ಕ ವೇಳೆಯಲ್ಲಿಯೇ ನೀಲನಕ್ಷೆ ತಯಾರಿಸಲಾಗಿತ್ತು. ಕುಮಾರಸ್ವಾಮಿ ಕ್ಯಾಬಿನೆಟ್ ನಲ್ಲಿ ಇದು ಅನುಮೋದನೆಗೊಂಡಿತ್ತು. ಇದುವರೆಗೂ 400 ಕೋಟಿ ಅನುದಾನ ತಂದಿದ್ದಾಗಿ ಶಾಸಕಿ ತೋರಿಸಿದ್ದಾರೆ. ಹಿಂದೆ ಇದ್ದ ಯೋಜನೆಗಳನ್ನೂ ತಮ್ಮ ಅಭಿವೃದ್ಧಿ ಎಂದು ಹೇಳಿಕೊಳ್ಳುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.
'ಆನಂದ್ ಕಮಿಷನ್ ಪಡೆಯುತ್ತಿದ್ದರು ಎಂದು ರೂಪಾಲಿ ಆರೋಪ ಮಾಡಿದ್ದಾರೆ. ನನ್ನ ಅವಧಿಯಲ್ಲಿ ತಾಲ್ಲೂಕು ಪಂಚಾಯತ್ ಅಧ್ಯಕ್ಷೆಯಾಗಿದ್ದವರಿಗೆ (ಈಗ ಶಾಸಕಿಯಾಗಿರುವ ರೂಪಾಲಿ ಅಂದು ತಾಲೂಕು ಪಂಚಾಯತಿ ಅಧ್ಯಕ್ಷರಿದ್ದರು) ಆನಂದ್ ಎಷ್ಟು ಪರ್ಸೆಂಟೇಜ್ ಪಡೆಯುತ್ತಿದ್ದರು ಅನ್ನೋದು ಗೊತ್ತಿದೆ' ಎಂದ ಅವರು, 'ನೆರೆಹಾವಳಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಜಗದೀಶ ನಾಯ್ಕ ಒಂದೂವರೆ ಕೋಟಿ ಒಬ್ಬರೇ ಪಡೆದಿದ್ದಾರೆ' ಎಂದು ಗಂಭೀರ ಆರೋಪ ಮಾಡಿದ್ದಾರೆ.












Click it and Unblock the Notifications