ವ್ಯಾಪ್ತಿ ಮೀರಿ ಗೋವಾ ಸರ್ಕಾರದಿಂದ "ರೇಬೀಸ್ ಮಿಷನ್": ರಾಜ್ಯದಲ್ಲಿಯೂ ನಡೆಯಬೇಕಿದೆ ಕಾರ್ಯಾಚರಣೆ
ಕಾರವಾರ, ಆಗಸ್ಟ್, 21: ಉತ್ತರಕನ್ನಡ ಜಿಲ್ಲೆ ಸೇರಿದಂತೆ ಹಲವೆಡೆ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಅದರಲ್ಲಿಯೂ ಗೋವಾ ಕರ್ನಾಟಕ ಗಡಿ ಭಾಗವಾದ ಕಾರವಾರದಲ್ಲಿ ಬೀದಿ ನಾಯಿಗಳು ಹೆಚ್ಚಿವೆ. ಇಂತಹ ನಾಯಿಗಳಿಂದ ಹರಡಬಹುದಾದ ರೇಬೀಸ್ ಕಾಯಿಲೆ ನಿಯಂತ್ರಣಕ್ಕೆ ಇದೀಗ ಗೋವಾ ಸರ್ಕಾರ ತನ್ನ ವ್ಯಾಪ್ತಿ ಮೀರಿ ಕಾರ್ಯಾಚರಣೆ ನಡೆಸುತ್ತಿದೆ.
ರಾಜ್ಯದಲ್ಲಿ ಬೀದಿ ನಾಯಿಗಳ ಕಾಟದಿಂದ ಅದೆಷ್ಟೋ ಜನರು ತಮ್ಮ ಜೀವವನ್ನೇ ಬಲಿ ನೀಡಿದ್ದಾರೆ. ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಚಿಕಿತ್ಸೆ ಜೊತೆ ರೇಬಿಸ್ ಚುಚ್ಚುಮದ್ದು ನೀಡುವಂತೆ ಹಲವು ವರ್ಷಗಳಿಂದ ಜನರು ಆಗ್ರಸುತ್ತಲೇ ಇದ್ದಾರೆ. ಇದಕ್ಕೆ ಪೂರಕವಾಗಿ ಕೆಲವು ಜಿಲ್ಲೆಗಳಲ್ಲಿ ಮಾತ್ರ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಗೋವಾ ಗಡಿ ತಾಲೂಕಿನಲ್ಲಿ ಈವರೆಗೂ ಬೀದಿ ನಾಯಿಗಳನ್ನು ಹಿಡಿಯುವ ಅಥವಾ ಅವುಗಳಿಗೆ ಲಸಿಕೆ ನೀಡುವ ಕಾರ್ಯವೇ ನಡೆದಿಲ್ಲ.

ಹೀಗಾಗಿ ದೇಶದಲ್ಲೇ ರೇಬಿಸ್ ಮುಕ್ತ ರಾಜ್ಯ ಆಗಿರುವ ಗೋವಾ ಇದೀಗ ತನ್ನ ಸುತ್ತಲೂ ಇರುವ ಕರ್ನಾಟಕದ ಗಡಿ ತಾಲೂಕುಗಳಿಗೆ "ಮಿಷನ್ ರೇಬಿಸ್" ಯೋಜನೆಯನ್ನು ತನ್ನ ಬೊಕ್ಕಸದಿಂದ ಹಣ ನೀಡುವ ಮೂಲಕ ಅನುಷ್ಟಾನಗೊಳಿಸುತ್ತಿದೆ. ಕಾರವಾರದಲ್ಲಿ ಈವರೆಗೆ 24ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ರೇಬಿಸ್ ಇರುವುದನ್ನು ಗೋವಾ ಸರ್ಕಾರ ಇಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಪತ್ತೆ ಮಾಡಿದೆ.
ಹೀಗಾಗಿ ಕಳೆದ ಹಲವು ವರ್ಷದಿಂದ ಈ ರೀತಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ತನ್ನ ಅನುದಾನ ಬಳಸಿ ಗಡಿ ಭಾಗದ ತಾಲೂಕುಗಳಾದ ಕಾರವಾರ, ಜೋಯಿಡಾ ತಾಲೂಕಿನಲ್ಲಿ ಈ ಯೋಜನೆ ಜಾರಿ ಮಾಡಿದ್ದು, ಕಾರವಾರದಲ್ಲಿ ಕಳೆದ ಎರಡು ವಾರದಿಂದ ಗೋವಾ ಸರ್ಕಾರದ ಮಿಷನ್ ರೇಬಿಸ್ ತಂಡ 2 ಸಾವಿರಕ್ಕೂ ಹೆಚ್ಚು ಶ್ವಾನಗಳಿಗೆ ರೇಬಿಸ್ ಚುಚ್ಚುಮದ್ದು ನೀಡಿದೆ.
ಪಣಜಿಯಿಂದ ಕಾರ್ಯಾಚರಣೆ ನಡೆಸುವ ಮಿಷನ್ ರೇಬಿಸ್ ತಂಡ ಪ್ರತಿ ದಿನ ಕಾರವಾರ ತಾಲೂಕಿನಲ್ಲಿ ಬರುತಿದ್ದು, ಎರಡು ತಂಡಗಳು ಇಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಕೇವಲ ಉಚಿತ ಚುಚ್ಚುಮದ್ದು ನೀಡುವ ಜೊತೆಗೆ 24×7 ಹೆಲ್ಪ್‌ಲೈನ್ ಸಹ ತೆರೆದಿದ್ದು, ಶ್ವಾನಗಳು, ಹಸುಗಳು, ಬೆಕ್ಕುಗಳಿಗೆ ತಮ್ಮ ಅನುದಾನದಲ್ಲಿ ಉಚಿತ ಚಿಕಿತ್ಸೆ ನೀಡುತ್ತಿದೆ ಎನ್ನುತ್ತಾರೆ ಮಿಷನ್ ರೇಬಿಸ್ ತಂಡದ ಮುಖ್ಯಸ್ಥ ಲೋಕೇಶ ಮಿಶ್ರ.
ಇನ್ನು ಗೋವಾ ರಾಜ್ಯದ ಗಡಿ ತಾಲೂಕಾದ ಕಾರವಾರದಲ್ಲಿ 10 ಸಾವಿರಕ್ಕೂ ಹೆಚ್ಚು ಶ್ವಾನಗಳಿವೆ. ಇವುಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಅಧಿಕವಾಗಿವೆ. ಇತ್ತೀಚೆಗೆ ಬೀದಿ ನಾಯಿಗಳ ಕಡಿತವೂ ಹೆಚ್ಚಾಗಿದ್ದು, ಈ ಹಿಂದೆ ಬೀದಿ ನಾಯಿ ಕಡಿತಕ್ಕೆ ಹಸುವೊಂದು ರೇಬಿಸ್ ಬಂದು ಸಾವನ್ನಪ್ಪಿತ್ತು. ಇನ್ನು ಸ್ಥಳೀಯ ಆಡಳಿತ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದರೂ ಯಾವುದೇ ಕಾರ್ಯಾಚರಣೆಗೆ ಇಳಿದಿಲ್ಲ.
ಇನ್ನು ಪಶುಸಂಗೋಪನಾ ಇಲಾಖೆಯಲ್ಲಿ ರೇಬಿಸ್ ಸೊಂಕು ಎಷ್ಟು ಹಬ್ಬಿವೆ ಎಂದು ಸಹ ಮಾಹಿತಿ ಇಲ್ಲ. ರೋಗ ಪತ್ತೆಗೆ ಲ್ಯಾಬ್ ಇಲ್ಲ, ಇದಲ್ಲದೇ ಸಂತಾನ ಹರಣ ಚಿಕಿತ್ಸೆ, ರೇಬಿಸ್ ಚುಚ್ಚುಮದ್ದು ನೀಡಲು ವೈದ್ಯರ ಕೊರತೆ ಜೊತೆ ಶ್ವಾನಗಳನ್ನು ಹಿಡಿಯಲು ಸಹ ಸಿಬ್ಬಂದಿಯಿಲ್ಲ. ಹೀಗಾಗಿ ಗಡಿ ಭಾಗದ ಜನ ಗೋವಾ ಸರ್ಕಾರ ಮಾಡುತ್ತಿರುವ ಕಾರ್ಯವನ್ನು ಶ್ಲಾಘನೀಯವಾಗಿದೆ. ರಾಜ್ಯ ಸರ್ಕಾರ ಇನ್ನಾದರೂ ಜಿಲ್ಲೆಯ ಇತರೆಡೆಯೂ ಇಂತಹ ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಶಂಕರ್ ಗುನಗಿ ಆಗ್ರಹಿಸಿದ್ದಾರೆ.
ಗೋವಾ ರಾಜ್ಯಕ್ಕೆ ಹೊಂದಿಕೊಂಡ ಕರ್ನಾಟಕ ಗಡಿಯಲ್ಲಿ ಗೋವಾ ಸರ್ಕಾರ ಮಾಡುತ್ತಿರುವ ಉತ್ತಮ ಕಾರ್ಯಗಳಿಗೆ ಮೆಚ್ಚುಗೆ ಏನೋ ವ್ಯಕ್ತವಾಗುತ್ತಿದೆ. ಜೊತೆಗೆ ಸ್ಥಳೀಯ ಜನರಲ್ಲಿ ಗೊವಾ ಅಭಿಮಾನ ಸಹ ಹೆಚ್ಚುತ್ತಿದೆ. ಆದರೆ ಸದಾ ಗಡಿ ಕ್ಯಾತೆ ತೆಗೆಯುತ್ತಿರುವ ಗೋವಾ ಸರ್ಕಾರ ಈ ಹಿಂದೆ ಕಾರವಾರ, ಜೋಯಿಡಾವನ್ನು ತಮ್ಮ ರಾಜ್ಯಕ್ಕೆ ಸೇರಿಸಬೇಕು ಎಂಬ ಬೇಡಿಕೆ ಇಟ್ಟಿತ್ತು. ಹೀಗಿರುವಾಗ ನಮ್ಮ ಸರ್ಕಾರ ಗಡಿ ಭಾಗವನ್ನು ನಿರ್ಲಕ್ಷಿಸುತ್ತಿರುವುದು ಮಾತ್ರ ದುರಂತವಾಗಿದೆ.












Click it and Unblock the Notifications