ಉಪಚುನಾವಣೆ; ಬಸ್ಸುಗಳ ಕೊರತೆ, ಪ್ರಯಾಣಿಕರಿಗೆ ಬೈಎಲೆಕ್ಷನ್ ಬಿಸಿ
ಕಾರವಾರ, ಡಿಸೆಂಬರ್ 5: ಯಲ್ಲಾಪುರ ಮುಂಡಗೋಡ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ಹಲವೆಡೆ ಬಸ್ ಇಲ್ಲದೇ ಪ್ರಯಾಣಿಕರು ಪರದಾಡುವಂತಾಯಿತು. ಸರ್ಕಾರಿ ಬಸ್‌ಗಳು ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು ಗ್ರಾಮೀಣ ಹಾಗೂ ವಿವಿಧ ಮಾರ್ಗಗಳಿಗೆ ತೆರಳಬೇಕಾಗಿದ್ದ ಬಸ್‌ಗಳಿಗೆ ಕೊರತೆಯುಂಟಾಗಿದೆ.
ಇದರಿಂದಾಗಿ ಗಂಟೆಗಳ ವರೆಗೆ ಕಾಯುತ್ತಾ ನಿಂತರೂ ಸೂಕ್ತ ಸಮಯಕ್ಕೆ ಬಸ್‌ಗಳು ಬಾರದೇ ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಯಿತು.
ನೆರೆ ಜಿಲ್ಲೆ ಹಾವೇರಿಯಲ್ಲೂ ಉಪಚುನಾವಣೆ ಇರುವ ಹಿನ್ನಲೆ ಶಿರಸಿ ಹಾವೇರಿ ಮಾರ್ಗಮಧ್ಯೆ ಸಂಚರಿಸುವ ಹಾವೇರಿ ವಿಭಾಗದ ಬಸ್ಸುಗಳ ಸಂಖ್ಯೆ ಕಡಿಮೆಯಾಗಿತ್ತು. ಇದರಿಂದಾಗಿ ಎರಡು ಗಂಟೆಗಳಿಗೊಮ್ಮೆ ಬರುವ ಬಸ್ಸು ಪ್ರಯಾಣಿಕರನ್ನು ತುಂಬಿಕೊಂಡು ಬರುತ್ತಿದ್ದರೂ ಅನಿವಾರ್ಯವಾಗಿ ಜನರು ತುಂಬಿದ ಬಸ್‌ಗಳಲ್ಲಿ ನಿಂತುಕೊಂಡೇ ಪ್ರಯಾಣ ಬೆಳೆಸುವಂತಾಗಿತ್ತು.

ಇನ್ನೂ ಕೆಲವು ಮಂದಿ ಖಾಸಗಿ ವಾಹನಗಳಿಗೆ ಕೈತೋರಿಸಿಕೊಂಡು ತಾವು ಸೇರಬೇಕಾದ ಸ್ಥಳಗಳಿಗೆ ಹರಸಾಹಸಪಟ್ಟು ತೆರಳಿದ್ದು ಚುನಾವಣೆಯ ಬಿಸಿ ಪ್ರಯಾಣಿಕರಿಗೆ ತಟ್ಟುವಂತಾಯಿತು.












Click it and Unblock the Notifications