ಸರ್ಕಾರಿ ಕಾರ್ಯಕ್ರಮದಲ್ಲೂ ಕೇಳಿಬಂತು "ನಿಖಿಲ್ ಎಲ್ಲಿದ್ದೀಯಪ್ಪ"!
ಕಾರವಾರ, ಆಗಸ್ಟ್ 26: ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದ "ನಿಖಿಲ್ ಎಲ್ಲಿದ್ದಿಯಪ್ಪ?" ವಿಡಿಯೋ ಸರ್ಕಾರಿ ಕಾರ್ಯಕ್ರಮವೊಂದರಲ್ಲೂ ಪ್ರಸಾರವಾಗಿದೆ. ಗಂಭೀರ ಕಾರ್ಯಕ್ರಮದಲ್ಲಿ ಕೇಳಿ ಬಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಧ್ವನಿಗೆ ಸಭೆ ನಗೆಗಡಲಲ್ಲಿ ತೇಲಿದ ಪ್ರಸಂಗವೂ ನಡೆದಿದೆ.
ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯಿಂದ ಜಿಲ್ಲಾ ರಂಗಮಂದಿರದಲ್ಲಿ ಇತ್ತೀಚೆಗೆ ಸ್ವಚ್ಛ ಭಾರತ ಯೋಜನೆಯಡಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪ್ರಶ್ನೆಯೊಂದನ್ನು ವಿದ್ಯಾರ್ಥಿಗಳಿಗೆ ಕೇಳಲಾಗಿತ್ತು.
'2019ರಲ್ಲಿ ಯಾವ ಶೀರ್ಷಿಕೆಗಾಗಿ ನಿರ್ಮಾಪಕರಿಂದ ಹೆಚ್ಚಿನ ಬೇಡಿಕೆ ಬಂದಿತ್ತು?' ಎಂಬ ಪ್ರಶ್ನೆ ಇದಾಗಿತ್ತು. ಇದಕ್ಕೆ ವಿದ್ಯಾರ್ಥಿಗಳಿಂದ ಯಾವುದೇ ಉತ್ತರ ಬಂದಿರಲಿಲ್ಲ. ಒಂದು ಕ್ಷಣ ಸಭೆ ಸ್ತಬ್ಧಗೊಂಡಿತ್ತು. ಗಂಭೀರವಾಗಿ ಎಲ್ಲರೂ ಉತ್ತರಕ್ಕಾಗಿ ಚರ್ಚೆ ಆರಂಭಿಸಿದರು.

ಬಳಿಕ ನಿರೂಪಣೆ ಮಾಡುತ್ತಿದ್ದವರು ಈ ಪ್ರಶ್ನೆಗೆ ಸೂಚನೆಯೊಂದನ್ನು ಕೂಡ ನೀಡಿದರು. 'ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ವೈರಲ್ ಆಗಿದ್ದ ವಿಡಿಯೋ ಕೂಡ ಇದಾಗಿತ್ತು' ಎಂದು ಅವರು ಹೇಳಿದರೂ ಉತ್ತರ ಬಂದಿರಲಿಲ್ಲ. ಕೊನೆಗೆ ಎರಡು ಬಾರಿ ನಿಖಿಲ್ ಎಲ್ಲಿದ್ದಿಯಪ್ಪ? ವಿಡಿಯೋ ತುಣುಕನ್ನು ಪ್ರಸಾರ ಮಾಡಲಾಯಿತು.
ಈ ವಿಡಿಯೋ ನೋಡುತ್ತಿದ್ದಂತೆಯೇ ಇಡೀ ಸಭಾಭವನದಲ್ಲಿ ನಗು ಕೇಳಿಬಂತು. ಎಲ್ಲರೂ ನಕ್ಕುನಕ್ಕು, 'ನಿಖಿಲ್ ಎಲ್ಲಿದ್ದಿಯಪ್ಪ?' ಎಂದು ಕಿರುಚಲಾರಂಭಿಸಿದರು.












Click it and Unblock the Notifications