ಲಗ್ನ ಪತ್ರಿಕೆಯಲ್ಲಿ ಮೋದಿ ಮತ್ತೆ ಪ್ರಧಾನಿಯಾಗಲೆಂದು ಸಂದೇಶ ಮುದ್ರಿಸಿದ ಜೋಡಿ
ಕಾರವಾರ, ಜನವರಿ 29: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಪ್ರಮುಖ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಮತ್ತೊಂದೆಡೆ ವಿವಿಧ ಪಕ್ಷಗಳ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.
ಅದರಂತೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜೋಡಿಯೊಂದು ತಮ್ಮ ಲಗ್ನ ಪತ್ರಿಕೆಯಲ್ಲಿ 'ಇಂದು ಸ್ವಾಭಿಮಾನದಿಂದ ನನ್ನೆದೆ ಬೀಗುತ್ತಿದೆ. ನಾನು ಭಾರತೀಯ ಎಂದು ಎದೆತಟ್ಟಿ ಹೇಳಿಕೊಳ್ಳುವಂತಾಗಿದೆ. ಹಲವು ವರ್ಷಗಳಲ್ಲಿ ಕುಸಿದೇ ಹೋಗಿದ್ದ ಆತ್ಮ ವಿಶ್ವಾಸ ಮತ್ತೆ ಗರಿಗೆದರಿದೆ. ಸದೃಢ ದೇಶಕ್ಕಾಗಿ ಮತ್ತೊಮ್ಮೆ ಮೋದಿ..' ಎಂದು ಮುದ್ರಿಸಿದ್ದು, ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಫೆ.17ರಂದು ಭಟ್ಕಳದ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಸಪ್ತಪದಿ ತುಳಿಯಲಿರುವ ಭಟ್ಕಳ ಮೂಲದ ವೆಂಕಟೇಶ ಮತ್ತು ದೀಪಾ ಅವರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರ ಹಾಕಿ, ಈ ರೀತಿ ಸಂದೇಶವೊಂದನ್ನು ಅಚ್ಚು ಹಾಕಿಸಿದ್ದಾರೆ.

ಕೆಲವು ದಿನಗಳ ಹಿಂದೆ ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದ ನವ ಜೋಡಿಯೊಂದು ತಮ್ಮ ಲಗ್ನ ಪತ್ರಿಕೆಯಲ್ಲಿ ರಫೇಲ್ ಯುದ್ಧ ವಿಮಾನ ಖರೀದಿ ಕುರಿತ ಮಾಹಿತಿಯನ್ನು ಮುದ್ರಿಸಿದ್ದು, ಇದನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದರು.












Click it and Unblock the Notifications