ಗಂಗಾವತಿ ಕಾರ್ಪೊರೇಟರ್ ಅಪಹರಣ ಯತ್ನ; ಬಿಜೆಪಿ ವಿರುದ್ಧ ಘೋಟ್ನೆಕರ್ ಆಕ್ರೋಶ
ಕಾರವಾರ, ಅಕ್ಟೋಬರ್ 30: ಕೊಪ್ಪಳ ಜಿಲ್ಲೆ ಗಂಗಾವತಿ ನಗರ ಸಭೆಯ ಕಾಂಗ್ರೆಸ್ ಬೆಂಬಲಿತ ಚುನಾಯಿತ ಸದಸ್ಯ ಮನೋಹರ ಹಿರೇಮಠ್ ಅವರನ್ನು ಬಿಜೆಪಿಯವರು ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಅಪಹರಿಸಲು ಯತ್ನಿಸಿ ಹಳಿಯಾಳದಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ಘಟನೆ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೆಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಹಳಿಯಾಳದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಬಿಜೆಪಿಯವರಿಗೆ ಪ್ರಜಾಸತ್ತಾತ್ಮಕ ಮೌಲ್ಯಗಳ ಬಗೆಗೆ ಯಾವುದೇ ಗೌರವ, ಒಲವು ಇಲ್ಲ. ಅಧಿಕಾರದ ಚುಕ್ಕಾಣಿ ಹಿಡಿಯಲು ಅವರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಸ್ಪಷ್ಟ ಬಹುಮತ ಇಲ್ಲದ ಗಂಗಾವತಿ ನಗರ ಸಭೆಯಲ್ಲೂ ಅಧಿಕಾರ ಹಿಡಿಯಬೇಕೆಂಬ ಉದ್ದೇಶದಿಂದ ಅವರು ಅಲ್ಲಿನ ಚುನಾಯಿತ ಸದಸ್ಯ ಹಿರೇಮಠ ಅವರನ್ನು ಕಿಡ್ನಾಪ್ ಮಾಡಿದ್ದರು. ಅದೃಷ್ಟವಶಾತ್ ಅವರ ಪ್ರಯತ್ನ ವಿಫಲವಾಯಿತು" ಎಂದು ಆರೋಪಿಸಿದರು.
ಹೈಜಾಕ್ ಮತ್ತು ಆಪರೇಷನ್ ಕಮಲಗಳನ್ನು ಬಿಜೆಪಿ ಪರಿಪಾಠದಂತೆ ಅನುಸರಿಸುತ್ತಾ ಬರುತ್ತಿದೆ. ಈವರೆಗೂ ಆ ಪಕ್ಷ ತಾಲೂಕು, ಜಿಲ್ಲಾ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೂ ವಾಮ ಮಾರ್ಗದ ಮೂಲಕ ಪಡೆದಿರುವ ಅಷ್ಟೂ ಅಧಿಕಾರಗಳು ಬಿಜೆಪಿ ಪಕ್ಷದ ಅನೈತಿಕತೆಯ ಫಲ. ಬಿಜೆಪಿಯ ಈ ಅನೈತಿಕ ಧೋರಣೆಯನ್ನು ಖಂಡಿಸುತ್ತೇವೆ ಎಂದರು.

ಗಂಗಾವತಿ ಕಾರ್ಪೊರೇಟರ್ ಅಪಹರಣಕಾರರ ಬಂಧನ: ಗಂಗಾವತಿಯ ಸ್ಥಳೀಯ ಆಡಳಿತ ಸಂಸ್ಥೆಯ ಚುನಾಯಿತ ಪ್ರತಿನಿಧಿ ಮನೋಹರ ಹಿರೇಮಠ ಅವರನ್ನು ಅಪಹರಿಸಿ ಅಜ್ಞಾತ ಸ್ಥಳದೆಡೆಗೆ ಸಾಗಿಸುತ್ತಿದ್ದ ಮೂವರು ಅಪಹರಣಕಾರರನ್ನು ಹಳಿಯಾಳ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಗಂಗಾವತಿಯಿಂದ ಅಲ್ಲಿನ ಕಾಂಗ್ರೆಸ್ ಕಾರ್ಪೊರೇಟರ್ ಮನೋಹರ ಸ್ವಾಮಿ ಹಿರೇಮಠ ಅವರನ್ನು ನಾಲ್ವರು ಅಪಹರಿಸಿ ಜೊಯಿಡಾದತ್ತ ಸಾಗಿಸುತ್ತಿದ್ದರು.
ಹಳಿಯಾಳ ಮೂಲಕ ಜೊಯಿಡಾ ಭಾಗದತ್ತ ತೆರಳುತ್ತಿದ್ದ ಅಪಹರಣಕಾರರಿದ್ದ ವಾಹನವನ್ನು ಶುಕ್ರವಾರ ಬೆಳಗಿನ ಜಾವ ಹಳಿಯಾಳ ಪೊಲೀಸರು ತಡೆದು ನಿಲ್ಲಿಸಿ ಪರಿಶೀಲಿಸಿದ್ದರು. ಆಗ ಕಿಡ್ನಾಪ್ ಸಂಗತಿ ಹೊರಬಿದ್ದಿತ್ತು. ನಾಲ್ವರು ಆರೋಪಿಗಳ ಪೈಕಿ ಒಬ್ಬ ತಪ್ಪಿಸಿಕೊಂಡಿದ್ದು, ಮೂವರನ್ನು ಬಂಧಿಸಲಾಗಿದೆ.












Click it and Unblock the Notifications