ಸಿ.ಟಿ ರವಿ ಮೀನೂಟ ಸೇವಿಸಿ ದೇವಸ್ಥಾನಕ್ಕೆ ತೆರಳಿದ ವಿವಾದ: ಅದು ಗೋಬಿಮಂಚೂರಿ ಎಂದ ಸ್ಥಳೀಯ ಶಾಸಕ
ಸಿ.ಟಿ ರವಿ ಭೋಜನದ ವೇಳೆ ಅವರ ಜೊತೆಗಿದ್ದ ಶಾಸಕ ಸುನೀಲ್ ನಾಯ್ಕ್ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಸಿ.ಟಿ.ರವಿ ಮಾಂಸಾಹಾರ ಸೇವಿಸಿಲ್ಲ. ಅವತ್ತು ಮಾಂಸದ ಅಡುಗೆ ಮಾಡಿರಲಿಲ್ಲ. ಚಪಾತಿ, ಗೋಬಿಮಂಚೂರಿ, ಅನ್ನ, ರಸಂ ಮಾತ್ರ ಸೇವಿಸಿದ್ದಾರೆ ಎಂದಿದ್ದಾರೆ.
ಕಾರವಾರ, ಫೆಬ್ರವರಿ 23: ಕಳೆದ ವಿಧಾನಸಭಾ ಚುನಾವಣೆ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಮಾಂಸಾಹಾರ ಸೇವನೆ ಮಾಡಿ ಹೋಗಿದ್ದಾರೆ ಎನ್ನುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಬಿಜೆಪಿಗರು ಈ ವಿಚಾರವನ್ನ ರಾಜಕೀಯವಾಗಿ ಲಾಭವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಇದೇ ಆರೋಪ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮೇಲೆ ಬಂದಿರುವುದು ಕಾಂಗ್ರೆಸ್ಸಿಗರಿಗೆ ಚುನಾವಣೆ ವೇಳೆ ಆಹಾರವಾಗಿ ಸಿಕ್ಕಂತಾಗಿದೆ.
ಕಳೆದ 2018ರ ಚುನಾವಣೆಯಲ್ಲಿ ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ಮೇಲೆ ಮಾಂಸಾಹಾರ ಮಾಡಿ ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದಿದ್ದಾರೆ ಎನ್ನುವ ಆರೋಪ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಮಾಂಸಾಹಾರ ಮಾಡಿ ದೇವರ ದರ್ಶನ ಪಡೆದಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿ ರಾಜಕೀಯವಾಗಿ ಲಾಭ ಪಡೆಯುವಲ್ಲೂ ಯಶಸ್ವಿಯಾಗಿದ್ದರು. ಸದ್ಯ ಇದೇ ಆರೋಪ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮೇಲೆ ಬಂದಿದೆ.

ಕಳೆದ ಫೆಬ್ರವರಿ19 ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ರಾಜ್ಯ ಮಟ್ಟದ ಶಿವಾಜಿ ಜಯಂತಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಬಿಜೆಪಿ ಶಾಸಕ ಸಿ.ಟಿ ರವಿ ಆಗಮಿಸಿದ್ದರು. ಮಧ್ಯಾಹ್ನ ತಡವಾಗಿ ಕಾರವಾರದಿಂದ ತೆರಳಿದ್ದು ಭಟ್ಕಳಕ್ಕೆ ತೆರಳಿ ಸ್ಥಳೀಯ ಶಾಸಕ ಸುನೀಲ್ ನಾಯ್ಕ ಅವರ ಮನೆಯಲ್ಲಿ ಊಟ ಮಾಡಿ ನಂತರ ಪಟ್ಟಣದ ನಾಗಭನ ಹಾಗೂ ಕರಿಭಂಟ ಹನುಮ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದಿದ್ದರು.
ಶಾಸಕ ಸಿ.ಟಿ ರವಿ, ಸುನೀಲ್ ನಾಯ್ಕ ಅವರ ಮನೆಯಲ್ಲಿ ಮೀನು ತಿನ್ನುತ್ತಿರುವ ಫೋಟೋ ವೈರಲ್ ಆಗಿದ್ದು ,ಮೀನನ್ನ ತಿಂದ ಪೋಟೊ ಹಾಗೂ ದೇವರ ದರ್ಶನವನ್ನು ಪಡೆದಿರುವ ಎರಡೂ ವಿಡಿಯೋ ಇದೀಗ ವೈರಲ್ ಆಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಕನ್ನಡ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ"ಈ ಹಿಂದೆ ಬಿಜೆಪಿಯವರು ಸಿದ್ದರಾಮಯ್ಯ ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗಿದ್ದರು ಎಂದು ಸುಳ್ಳು ಸುದ್ದಿ ಹಬ್ಬಿಸಿ ಜನರಲ್ಲಿ ಮನಸ್ಸಿನಲ್ಲಿ ಕಲ್ಮಶ ತುಂಬಿದ್ದರು. ರಾಜಕೀಯ ಲಾಭ ಪಡೆದುಕೊಂಡಿದ್ದರು. ಮೂರು ದಿನದ ಹಿಂದೆ ರವಿ ಭಟ್ಕಳ ಶಾಸಕ ಸುನೀಲ್ ಮನೆಯಲ್ಲಿ ಮೀನು ತಿಂದು ನಾಗಬನಕ್ಕೆ ಹೋಗಿದ್ದು, ಸಾಕ್ಷಿ ಸಹಿತ ಸಿಕ್ಕಿದೆ ಎಂದು ಆರೋಪಿಸಿದರು.
ಮಾತು ಮುಂದುವರಿಸಿದ ಅವರು, ಸಿದ್ದರಾಮಯ್ಯ ಅವರನ್ನು ಖಂಡಿಸಿದ್ದ ರವಿ ಈಗ ಏಕೆ ಮಾಂಸಾಹಾರ ತಿಂದು ದೇವರ ದರ್ಶನ ಮಾಡಿದ್ದಾರೆ? ಈ ಎರಡು ನೀತಿಯನ್ನು ಖಂಡಿಸುತ್ತೇವೆ. ಬಿಜೆಪಿ ಪಕ್ಷದವರು ಹೇಳುವುದು ಗಾದೆ, ಇಕ್ಕುವುದು ಗಾಳ ಎಂದು ಟೀಕೆ ಮಾಡಿದ್ದಾರೆ.
ಇನ್ನು ಮಾಜಿ ಶಾಸಕ ಸತೀಶ ಸೈಲ್ ಮಾತನಾಡಿ, "ಸಿಟಿ ರವಿ ಭಟ್ಕಳಕ್ಕೆ ತೆರಳಿದ್ದ ವೇಳೆ ಮೀನೂಟ ಮಾಡಿ ಬಳಿಕ ದೇವಸ್ಥಾನಕ್ಕೆ ತೆರಳಿರುವ ದಾಖಲೆ ಸಹಿತ ಸಿಕ್ಕಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಂಸಾಹಾರ ಸೇವನೆ ಮಾಡಿ ಧರ್ಮಸ್ಥಳಕ್ಕೆ ಹೋಗಿದ್ದರು ಎಂದು ಗಲಾಟೆ ಮಾಡಿದ್ದಾರೆ. ಬಿಜೆಪಿಯವರು ಈಗ ಏನು ಹೇಳತ್ತಾರೆ..? ಎಂದು ಪ್ರಶ್ನಿಸಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದ ಬಿಜೆಪಿಗರು ಸಿ.ಟಿ ರವಿ ಮಾಡಿರುವುದು ಸರಿ ಎನ್ನುತ್ತಾರಾ? ನೀವು ಮಾತನಾಡಿದ್ದನ್ನು ಉಳಿಸಿಕೊಳ್ಳಿ. ಏನೇನೂ ಹೇಳಿಕೆ ನೀಡಿದ್ದೇವೆ ಎನ್ನುವುದನ್ನು ಬರೆದಿಟ್ಟುಕೊಳ್ಳಿ. ಇದು ನಾಗ ದೇವರಿಗೆ ಮಾಡಿದ ಅಪಮಾನವಲ್ಲವೇ? ಎಂದು ಕಿಡಿಕಾರಿದ್ದಾರೆ.
ಸಿ.ಟಿ ರವಿ ಭೋಜನದ ವೇಳೆ ಅವರ ಜೊತೆಗಿದ್ದ ಶಾಸಕ ಸುನೀಲ್ ನಾಯ್ಕ್ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಸಿ.ಟಿ.ರವಿ ಮಾಂಸಾಹಾರ ಸೇವಿಸಿಲ್ಲ. ಅವತ್ತು ಮಾಂಸದ ಅಡುಗೆ ಮಾಡಿರಲಿಲ್ಲ. ಚಪಾತಿ, ಗೋಬಿಮಂಚೂರಿ, ಅನ್ನ, ರಸಂ ಮಾತ್ರ ಸೇವಿಸಿದ್ದಾರೆ. ವಿವಾದ ಸೃಷ್ಟಿ ಮಾಡಲು ಫೋಟೋ ವೈರಲ್ ಮಾಡಲಾಗುತ್ತಿದೆ. ಸಿ.ಟಿ.ರವಿ ಜೊತೆ ನಾವೆಲ್ಲ ಒಟ್ಟಿಗೆ ಕುಳಿತು ಊಟ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಸದ್ಯ ಚುನಾವಣೆ ಸಮೀಪಿಸುತ್ತಿದ್ದು ಸಿ.ಟಿ ರವಿ ಮಾಂಸಾಹಾರ ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ ಎನ್ನುವ ವಿಚಾರ ಕಾಂಗ್ರೆಸ್‌ನವರಿಗೆ ಚುನಾವಣಾ ಅಸ್ತ್ರ ಸಿಕ್ಕಂತಾಗಿದೆ. ಅಲ್ಲದೇ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೆ ಸಹ ಕಾರಣವಾಗಿದೆ. ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಸಾಕಷ್ಟು ಚುರುಕುಗೊಂಡಿದ್ದು ಸಿ.ಟಿ ರವಿ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದಾರೆ ಎನ್ನುವ ವಿಚಾರ ಇನ್ನಷ್ಟು ದೊಡ್ಡದಾಗುವುದರಲ್ಲಿ ಅನುಮಾನವಿಲ್ಲ.












Click it and Unblock the Notifications