ಗೋಕರ್ಣ: ಶಿವ-ಗಂಗೆಯರ ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾದ ಭಕ್ತರು

By: ಡಿ.ಪಿ.ನಾಯ್ಕ
Subscribe to Oneindia Kannada

ಕಾರವಾರ, ಅಕ್ಟೋಬರ್ 19: ಶ್ರೀಕ್ಷೇತ್ರ ಗೋಕರ್ಣದಲ್ಲಿ ದೀಪಾವಳಿಯ ನರಕಚತುರ್ದಶಿಯಂದು ಶಿವಗಂಗಾ ವಿವಾಹ ಮಹೋತ್ಸವು ನಡೆಯಿತು. ಅನಾದಿಕಾಲದಿಂದ ನಡೆದುಬಂದ ಸಂಪ್ರದಾಯದಂತೆ ಬುಧವಾರ (ಅ.18) ಗೋಕರ್ಣದ ಬೇಲೆಹಿತ್ತಲಿನಲ್ಲಿ ಗಂಗಾವಳಿ ಸೀಮೆಯ ಅಂಬಿಗರು ಗಂಗಾಮಾತೆಯನ್ನು ಮತ್ತು ಗೋಕರ್ಣಸೀಮೇಯ ಹಾಲಕ್ಕಿ ಒಕ್ಕಲಿಗರು ಮಹಾಬಲೇಶ್ವರನನ್ನು ತಂದು ಅತಿ ವಿಜೃಂಭಣೆಯಿಂದ ಶಿವಗಂಗಾ ಮಹೋತ್ಸವವನ್ನುನೆರವೇರಿಸಿದರು.

ಈ ಆಚರಣೆಗೆ ಇಲ್ಲಿ ಹೋಂಡೆಹಬ್ಬ ಎಂದು ಕರೆಯಲಾಗುತ್ತದೆ. ಮಹಾಬಲೇಶ್ವರನಿಗೂ ಗಂಗೆಗೂ ನಿಶ್ಚಿತಾರ್ಥ ಅ.11ರಂದು ರಾತ್ರಿ 12 ಗಂಟೆಗೆ ಶ್ರೀಮಹಾಬಲೇಶ್ವರ ದೇವಾಲಯದಿಂದ ದೇವರ ಪಲ್ಲಕ್ಕಿಯು ಸಕಲ ಬಿರುದು ಬಾವಲಿಗಳೊಡನೆ ವಾದ್ಯ ಘೋಷದೊಂದಿಗೆ ಗಂಗಾವಳಿಗೆ ಹೋಗಿ, ಬೆಳಿಗ್ಗೆ ಸೂರ್ಯ ಮೂಡುವುದಕ್ಕೂ ಮೊದಲೇ ಗಂಗಾವಳಿ ನದಿಯಲ್ಲಿ ಸ್ನಾನ ಮಾಡಿ, ಗಂಗಾಮಾತಾ ದೇವಾಲಯಕ್ಕೆ ತೆರಳಿದ್ದರು. ಆ ವೇಳೆ ಅಲ್ಲಿ ಗಂಗೆ ಉದ್ಭವ ಆಗುತ್ತಾಳೆ ಎನ್ನುವುದು ಇಲ್ಲಿನ ಪ್ರತೀತಿ.

ಬಳಿಕ ಅಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗಂಗಾಮಾತೆಯು ಮಹಾಬಲೇಶ್ವರನನ್ನು ಮದುವೆಯಾಗುವುದಾಗಿ ಒಪ್ಪಿ, ನಿಶ್ಚಿತಾರ್ಥ ತಾಂಬೂಲೋತ್ಸವವನ್ನು ನಡೆಸಲಾಗಿತ್ತು. ಅದಾದ ಆರು ದಿನಗಳ ಬಳಿಕ, ಅಂದರೆ ಈ ಬಾರಿಯ ಬುಧವಾರದ ನರಕ ಚತುರ್ದಶಿಯಂದು ಅವರಿಬ್ಬರಿಗೆ ವಿವಾಹ ಕಾರ್ಯವು ನೆರವೇರಿಸಲಾಯಿತು. ದೇವರ ಈ ವಿವಾಹವನ್ನು ನೋಡಲು ಸಾವಿರಾರು ಜನ ಸೇರಿದ್ದರು.

ವಿವಾಹ ಮಹೋತ್ಸವದ ಹಿಂದೊಂದು ಪುರಾಣ ಕಥೆಯಿದೆ. ಆದಿಯಲ್ಲಿ ಲಂಕಾಧಿಪತಿ ರಾವಣನು ಕೇವಲ ತನ್ನ ತಾಯಿಯ ಇಚ್ಛೆ ಪೂರೈಸಲು ಪರಶಿವನ ಆತ್ಮಲಿಂಗವನ್ನು ಪಡೆದು ಲಂಕೆಗೆ ಒಯ್ಯುವ ಸಮಯದಲ್ಲಿ ದೇವಾನುದೇವತೆಗಳ ಪ್ರಾರ್ಥನೆಯಂತೆ ವಿಘ್ನೇಶ್ವರನು ಶಿವಲಿಂಗವು ಗೋಕರ್ಣ ಸೀಮೆಯಲ್ಲಿ ಶ್ರೀಮಹಾಬಲೇಶ್ವರನಾಗಿ ನೆಲೆಸುವಂತೆ ಮಾಡುತ್ತಾನೆ. ಅದೇ ರೀತಿ ಶಿವನ ಶಿರದಲ್ಲಿರುವ ಗಂಗೆಯು ಶಿವನ ಸಾನ್ನಿಧ್ಯದಲ್ಲಿಯೇ ನೆಲೆಸಬೇಕು ಎಂದು, ಬಲೆ ಬೀಸಿ ಮೀನು ಹಿಡಿದು ಜೀವನ ನಡೆಸುವ ಅಂಬಿಗರ ಬಲೆಗೆ ಗಂಗಾವಳಿ ಸಮೀಪದ ಸಮುದ್ರದಲ್ಲಿ ಮೂರ್ತಿ ರೂಪದಲ್ಲಿ ಸಿಗುತ್ತಾಳೆ.

ಗಂಗೆಗೆ ಮನಸೋತ ಮಹಾಬಲೇಶ್ವರ

ಗಂಗೆಗೆ ಮನಸೋತ ಮಹಾಬಲೇಶ್ವರ

ಅಂಬಿಗರು ಮೂರ್ತಿಯನ್ನು ಭಕ್ತಿಯಿಂದ ಗೋಕರ್ಣ ಸಮೀಪದ ಗಂಗಾವಳಿಯಲ್ಲಿ ಪ್ರತಿಷ್ಠಾಪಿಸಿ ತಮ್ಮ ಕುಲದೇವತೆಯಾಗಿ ಪೂಜಿಸುತ್ತಾ ಬರುತ್ತಾರೆ. ಗೋಕರ್ಣದಲ್ಲಿ ನೆಲೆಸಿರುವ ಶ್ರೀಮಹಾಬಲೇಶ್ವರ ತನ್ನ ಪರಿವಾರದೊಂದಿಗೆ ದಸರಾ ಹಬ್ಬದ ಸಂದರ್ಭದಲ್ಲಿ ಮಾಸ್ಕೇರಿ ಸೀಮೆಗೆ ಬಂದಾಗ ಚೆಲುವೆಯೂ, ಸೌಂದರ್ಯವತಿಯೂ ಆದ ಗಂಗೆಯ ರೂಪ, ಲಾವಣ್ಯಕ್ಕೆ ಮನಸೋತು ಅವಳನ್ನು ಮದುವೆಯಾಗಲು ನಿಶ್ಚಿಯಿಸುತ್ತಾನೆ.

ಗಂಗೆಯನ್ನು ಬಿಡುವುದಕ್ಕೆ ಸಿದ್ಧನಿಲ್ಲದ ಶಿವ

ಗಂಗೆಯನ್ನು ಬಿಡುವುದಕ್ಕೆ ಸಿದ್ಧನಿಲ್ಲದ ಶಿವ

ಆದರೆ ಆಗಲೇ ಗೌರಿಯನ್ನು ಮದುವೆಯಾಗಿರುವ ಮಹಾಬಲೇಶ್ವರನು ಗಂಗೆಯನ್ನು ಬಿಡಲಾಗದೇ, ಗೌರಿಗೆ ತಿಳಿಯದ ರೀತಿಯಲ್ಲಿ ಗಂಗೆಯನ್ನು ಮದುವೆಯಾಗಲು, ಗೌರಿಯು ಗಾಢ ನಿದ್ರೆಯಲ್ಲಿರುವಾಗ ಕೃಷ್ಣ ಪಕ್ಷ ಅಷ್ಟಮಿಯ ಮಧ್ಯರಾತ್ರಿ ಕತ್ತಲೆಯಲ್ಲಿ ಸಮುದ್ರ ದಂಡೆಯಲ್ಲಿ ಪರಿವಾರದೊಂದಿಗೆ ನಡೆದು ಬರುತ್ತಾನೆ. ಆ ವೇಳೆ ಗಂಗೆಕೊಳ್ಳದಲ್ಲಿ ಸ್ನಾನಾದಿ ಕಾರ್ಯಗಳನ್ನು ಪೂರೈಸಿ ಕತ್ತಲಿರುವಾಗಲೇ ಗಂಗಾದೇವಿ ನೆಲೆಸಿರುವ ದೇವಸ್ಥಾನಕ್ಕೆ ಬರುತ್ತಾನೆ.

ಮಾರುವೇಷದಲ್ಲಿದ್ದ ಶಿವನಿಗೆ ಬಾಗಿಲು ಮುಚ್ಚಿದ ಗಂಗೆ!

ಮಾರುವೇಷದಲ್ಲಿದ್ದ ಶಿವನಿಗೆ ಬಾಗಿಲು ಮುಚ್ಚಿದ ಗಂಗೆ!

ಮಾರುವೇಷದಲ್ಲಿದ್ದ ಶಿವನ ಬರುವಿಕೆಯನ್ನು ಅರಿತ ಗಂಗೆಯು ತಾನೊಬ್ಬಳೇ ಇರುವುದರಿಂದ ಪರಪುರುಷನು ಒಳ ಪ್ರವೇಶಿಸದಂತೆ ಬಾಗಿಲು ಹಾಕುತ್ತಾಳೆ. ಬಾಗಿಲು ತೆರೆಯುವಂತೆ ಶಿವನು ಪರಿಪರಿಯಾಗಿ ಬೇಡಿಕೊಂಡರೂ ಅವನ ಯಾವ ಮಾತಿಗೂ ಗಂಗೆಯು ಒಪ್ಪದಿರಲು ತಾನು ನಿಜವಾದ ಶಿವನೆಂದೂ, ಮಹಾಬಲೇಶ್ವರನಾಗಿ ಗೋಕರ್ಣದಲ್ಲಿ ನೆಲೆಸಿರುವ ಬಗ್ಗೆಯೂ ತಿಳಿಸುತ್ತಾನೆ.

 ಶಿವ ಗಂಗೆಯರ ವಿವಾಹ ಮಹೋತ್ಸವ

ಶಿವ ಗಂಗೆಯರ ವಿವಾಹ ಮಹೋತ್ಸವ

ಬಳಿಕ ಮಾರುವೇಷದಿಂದ ಮುಕ್ತಿ ಹೊಂದಿ, ತನ್ನ ನಿಜರೂಪವನ್ನು ಗಂಗೆಗೆ ತೋರಿಸುತ್ತಾನೆ. ಆಗ ಗಂಗೆ ಶಿವನೊಂದಿಗೆ ವಿವಾಹವಾಗಲು ಒಪ್ಪಿಗೆ ಸೂಚಿಸುತ್ತಾಳೆ. ಮುಂದೆ ಆಶ್ವೀಜ ಮಾಸ ಕೃಷ್ಣ ಪಕ್ಷ ಚತುರ್ದಶಿಯಂದು ಸಾಯಂಕಾಲ ಗೋಧೂಳಿ ಮುಹೂರ್ತದಲ್ಲಿ ಗೋಕರ್ಣ ಮತ್ತು ಗಂಗಾವಳಿ ಮಧ್ಯ ಸಮುದ್ರ ದಂಡೆಯ ಮೇಲೆ ಶಿವ ಗಂಗೆಯರ ವಿವಾಹ ನೆರವೇರುವುದೆಂದು ನಿಶ್ಚಯವಾಗುತ್ತದೆ. ಅದರಂತೆ ಪ್ರತೀ ವರ್ಷ ಊರಿನ ಜನರು ಇವರಿಬ್ಬರ ವಿವಾಹವನ್ನು ನೆರವೇರಿಸುತ್ತಾರೆ. ಗೋಕರ್ಣ ಸೀಮೆಯನ್ನು ಸಲಹುವಂತೆ ಪ್ರಾರ್ಥಿಸುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lord Shiva and Goddess Ganga's marriage ceremony has taken place in heritage place Gokarna in Uttara Kannada district. Thousands of people witnessed the holy event.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ