ಕಾರವಾರದಲ್ಲೊಂದು ವಿಭಿನ್ನ ಜಾತ್ರೆ: ಖಾಫ್ರಿ ದೇವರಿಗೆ ಮದ್ಯ, ಸಿಗರೇಟಿನ ನೈವೇದ್ಯ

ಕಾರವಾರದಲ್ಲಿರುವ ಖಾಫ್ರಿ ದೇವರಿಗೆ ಕುರಿ, ಕೋಳಿ ಜೊತೆಗೆ ಮದ್ಯ ಸಿಗರೇಟ್‌ ಅನ್ನು ಸಹ ಹರಕೆ ರೂಪದಲ್ಲಿ ಭಕ್ತರು ನೀಡಿರುವುದು ಇದೀಗ ಗಮನ ಸೆಳೆದಿದೆ.

ಕಾರವಾರ, ಮಾರ್ಚ್‌, 13: ಜಾತ್ರೆಗಳಲ್ಲಿ ಸಾಮಾನ್ಯವಾಗಿ ದೇವರಿಗೆ ಹಣ್ಣು-ಕಾಯಿ, ತಿಂಡಿ ತಿನಿಸುಗಳನ್ನು ನೈವೇದ್ಯ ಮಾಡಲಾಗುತ್ತದೆ. ಇನ್ನು ಕೆಲ ದೇವರಿಗೆ ಕುರಿ, ಕೋಳಿಯನ್ನು ಹರಕೆ ರೂಪದಲ್ಲಿ ಒಪ್ಪಿಸಲಾಗುತ್ತದೆ. ಆದರೆ ಕಾರವಾರದಲ್ಲಿರುವ ಖಾಫ್ರಿ ದೇವರಿಗೆ ಕುರಿ, ಕೋಳಿ ಜೊತೆಗೆ ಮದ್ಯ ಸಿಗರೇಟ್‌ ಅನ್ನು ಸಹ ಹರಕೆ ರೂಪದಲ್ಲಿ ಭಕ್ತರು ನೀಡಿರುವುದು ಇದೀಗ ಗಮನ ಸೆಳೆದಿದೆ.

ಕಾರವಾರ ನಗರದ ಕಾಳಿ ನದಿ ದಂಡೆಯ ಸಮೀಪವಿರುವ ಖಾಫ್ರಿ ದೇವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ದೇವರಿಗೆ ಕುರಿ, ಕೋಳಿ ಜೊತೆಗೆ ಮದ್ಯವನ್ನು ನೈವೇದ್ಯ ಮಾಡಿ ಸಿಗರೇಟ್‌ನ ಆರತಿ ಬೆಳಗುವ ವಿಶಿಷ್ಟ ಸಂಪ್ರದಾಯವನ್ನು ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ದೇವರ ಜಾತ್ರೆಗೆ ನೂರಾರು ಭಕ್ತರು ಆಗಮಿಸಿ ಮದ್ಯ, ಸಿಗರೇಟು, ಮೇಣದಬತ್ತಿ, ತುಲಾಭಾರದ ಸೇವೆ ಅರ್ಪಿಸಿ ಪೂಜೆ ಸಲ್ಲಿಸಿದರು.

ಅಲ್ಲದೆ ಭಕ್ತರು ದೇವರಿಗೆ ಕೋಳಿಗಳ ಬಲಿ ನೀಡುವ ಮೂಲಕ ಹರಕೆ ಸಮರ್ಪಿಸಿದರು. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯಿಂದ ಮಾತ್ರವಲ್ಲದೆ ರಾಜ್ಯ ಹಾಗೂ ಹೊರ ರಾಜ್ಯಗಳಾದ ಗೋವಾ, ಮಹಾರಾಷ್ಟ್ರಗಳಿಂದ ಬಂದಂತಹ ಭಕ್ತರು ದೇವರಿಗೆ ಹರಕೆ ಒಪ್ಪಿಸಿ ಪೂಜೆ ಸಲ್ಲಿಸಿದರು.

 ಖಾಫ್ರಿ ದೇವರಿಗೆ ಮದ್ಯದಲ್ಲೇ ಅಭಿಷೇಕ

ಖಾಫ್ರಿ ದೇವರಿಗೆ ಮದ್ಯದಲ್ಲೇ ಅಭಿಷೇಕ

ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಈ ದೇವರು ಸುತ್ತಮುತ್ತಲಿನ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವುದರ ಜೊತೆಗೆ, ಈ ಭಾಗದಲ್ಲಿ ಯಾವುದೇ ಅಪಘಾತಗಳಾಗದಂತೆ, ಮೀನುಗಾರಿಕೆಗೆ ತೆರಳುವ ಮೀನುಗಾರರನ್ನು ರಕ್ಷಣೆ ಮಾಡುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರದ್ದಾಗಿದೆ. ಇದರಿಂದ ಸ್ಥಳೀಯರಲ್ಲದೆ, ಮೀನುಗಾರರು, ಪ್ರತಿನಿತ್ಯ ಹೆದ್ದಾರಿಯಲ್ಲಿ ಸಂಚಾರ ಮಾಡುವವರು ದೇವರಿಗೆ ಮದ್ಯದ ಅಭಿಷೇಕ ಮಾಡುತ್ತಾರೆ.

 ದೇವಿಗೆ ರಾಜ್ಯದೆಲ್ಲೆಡೆ ಭಕ್ತರಿದ್ದಾರೆ

ದೇವಿಗೆ ರಾಜ್ಯದೆಲ್ಲೆಡೆ ಭಕ್ತರಿದ್ದಾರೆ

ಖಾಫ್ರಿ ದೇವರು ಕಳೆದ ಐದಾರು ತಲೆಮಾರುಗಳಿಂದ ಈ ಭಾಗದಲ್ಲಿ ನೆಲೆಸಿ ಇಲ್ಲಿನ ಜನರಿಗೆ ರಕ್ಷಣೆ ನೀಡುತ್ತಿದೆ. ಸ್ಥಳೀಯವಾಗಿ ಅಲ್ಲದೆ ಬೇರೆ ಬೇರೆ ಭಾಗದ ನೂರಾರು ಜನರು ದೇವಿಗೆ ನಡೆದುಕೊಳ್ಳುತ್ತಾರೆ. ಇತರ ದೇವಸ್ಥಾನಗಳಲ್ಲಿ ನಡೆಯುವಂತೆಯೇ ಇಲ್ಲಿಯೂ ಕೂಡ ಪೂಜೆ ಪುರಷ್ಕಾರಗಳು ನಡೆಯುತ್ತದೆ.

 ಮದ್ಯ ಮತ್ತು ಸಿಗರೇಟ್‌ನ ಹರಕೆ

ಮದ್ಯ ಮತ್ತು ಸಿಗರೇಟ್‌ನ ಹರಕೆ

ದೇವರಿಗೆ ಇಷ್ಟಾರ್ಥಗಳ ಸಿದ್ಧಿಗಾಗಿ ಭಕ್ತರು ಹಣ್ಣುಕಾಯಿ, ದವಸ ದಾನ್ಯ, ಹಾಲು ಮೊಸರು ಇತ್ಯಾದಿ ಹರಕೆ ಜೊತೆಗೆ ಮದ್ಯ ಹಾಗೂ ಸಿಗರೇಟನ್ನು ಕೂಡ ಹರಕೆ ರೂಪದಲ್ಲಿ ಅರ್ಪಿಸುತ್ತಾರೆ. ಹೀಗೆ ಹರಕೆ ತಿರಿಸುವುದರಿಂದ ವ್ಯಸನದಿಂದ ಮುಕ್ತರಾಗಲು ಸಾಧ್ಯವಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ಇದರಿಂದ ಎಲ್ಲೆಡೆ ಜಾಗೃತ ದೇವರು ಎಂದೇ ಹೆಸರು ವಾಸಿಯಾಗಿದ್ದು, ಹಿಂದೂ ಮಾತ್ರವಲ್ಲದೆ ಮುಸ್ಲಿಂ, ಕ್ರೀಶ್ಚಿಯನ್ ಧರ್ಮದವರು ಈ ದೇವರಿಗೆ ನಡೆದುಕೊಳ್ಳುತ್ತಾರೆ ಎಂದು ದೇವಸ್ಥಾನ ಸಮಿತಿಯ ಸದಸ್ಯ ವಿನಾಯಕ ಹೇಳಿದ್ದಾರೆ.

 ಖಾಫ್ರಿ ಎಂದು ಹೆಸರು ಬಂದಿದ್ದೇಕೆ?

ಖಾಫ್ರಿ ಎಂದು ಹೆಸರು ಬಂದಿದ್ದೇಕೆ?

ಕೋಡಿಭಾಗದ ಪುರ್ಸಪ್ಪ ಮನೆತನದವರು ಪೂಜೆಸಲ್ಲಿಸುವ ಈ ಖಾಫ್ರಿ ದೇವಿಯ ಮೂಲ ಆಫ್ರಿಕಾ ಎಂದು ಇಲ್ಲಿನ ಹಿರಿಯರು ಹೇಳುತ್ತಿದ್ದಾರೆ. ಅದಕ್ಕಾಗಿಯೇ ಈ ದೇವರಿಗೆ ಖಾಫ್ರಿ ಎನ್ನುವ ಹೆಸರು ಬಂದಿದೆ. ಆಫ್ರಿಕಾದ ವ್ಯಕ್ತಿಯೊಬ್ಬ 300 ವರ್ಷಗಳ ಹಿಂದೆ ಇಲ್ಲಿ ಪೂಜೆ ಸಲ್ಲಿಸುತ್ತಿದ್ದನಂತೆ. ಅವನು ನಾಪತ್ತೆಯಾದ ನಂತರ ಪುರ್ಸಪ್ಪನ ಮನೆಯವರು ಪೂಜೆ ಮುಂದುವರಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ.

ಅಲ್ಲದೆ ದೇವಸ್ಥಾನದಲ್ಲಿ ನಿತ್ಯವೂ ಪೂಜೆ ನಡೆಯುತ್ತದೆ. ಭಾನುವಾರ ಹಾಗೂ ಬುಧವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಒಟ್ಟಾರೇ ಕಾರವಾರದಲ್ಲಿ ನಡೆಯುವ ಸಾರಾಯಿ ಜಾತ್ರೆ ತುಂಬಾ ವಿಶೇಷತೆಯನ್ನು ಹೊಂದಿದ್ದು, ದೇವರನ್ನು ಹೀಗೂ ಆರಾಧಿಸುತ್ತಾರೆ ಅನ್ನವುದಕ್ಕೆ ಖಾಫ್ರಿ ದೇವರು ಸಾಕ್ಷಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+