ಕುಮಟಾ-ಹೊನ್ನಾವರದಲ್ಲಿ ನಿವೇದಿತ್ ಆಳ್ವಾಗೆ ಟಿಕೆಟ್ ಘೋಷಣೆ: ಸ್ಫೋಟಗೊಂಡ "ಕೈ" ಬಂಡಾಯ
ಕಾರವಾರ, ಏಪ್ರಿಲ್, 16: ಕುಮಟಾ-ಹೊನ್ನಾವರದಲ್ಲಿ ಕೊನೆಗೂ ನಿವೇದಿತ್ ಆಳ್ವಾಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ಆದರೆ ಇದರ ಬೆನ್ನಲ್ಲೆ ಟಿಕೆಟ್ ಆಕಾಂಕ್ಷಿತರ ಬಂಡಾಯ ಸ್ಪೋಟಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಪರ-ವಿರೋಧದ ಚರ್ಚೆ ಜೋರಾಗಿಯೇ ನಡೆಯಲಾರಂಭಿಸಿದೆ.
ಕಳೆದ ಎರಡ್ಮೂರು ತಿಂಗಳಿಂದ ತೀವ್ರ ಕುತೂಹಲ ಕೆರಳಿಸುತ್ತಿದ್ದ ಕುಮಟಾ-ಹೊನ್ನಾವರ ಕ್ಷೇತ್ರದಲ್ಲಿ ಕೊನೆಗೂ ಕಾಂಗ್ರೆಸ್ ಟಿಕೆಟ್ ಗೊಂದಲ ಅಂತ್ಯ ಕಂಡಿದೆ. ಅಲ್ಲದೆ ಇದರೊಂದಿಗೆ ಇತರೆ ಟಿಕೆಟ್ ಆಕಾಂಕ್ಷಿಗಳ ಬಂಡಾಯದ ಮಹಾಸ್ಫೋಟ ಸಂಭವಿಸಿದ್ದು, ಕಾಂಗ್ರೆಸ್ ಕ್ಷೇತ್ರದಲ್ಲಿ ಅಲಗಾಡುವಂತಾಗಿದೆ. ಟಿಕೆಟ್ ಕೈ ತಪ್ಪಿದ್ದ ಬೆನ್ನಲ್ಲೆ ಪ್ರಮುಖ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಕಣ್ಣೀರು ಹಾಕಿದ್ದಾರೆ.

ಅಲ್ಲದೆ ಕಳೆದ ಬಾರಿ ಸೋತರೂ ಕೂಡ ಶಾರದಾ ಶೆಟ್ಟಿ ಅವರು, ನಿಷ್ಠೆಯಿಂದ ಕಾರ್ಯಕರ್ತರು, ಜನರೊಂದಿಗೆ ಸೇರಿ ಪಕ್ಷ ಕಟ್ಟಿದವರಿಗೆ ಅನ್ಯಾಯ ಮಾಡಲಾಗಿದೆ ಎಂದು ಬೆಂಬಲಿಗರಲ್ಲಿ ಅಳಲು ತೋಡಿಕೊಂಡಿದ್ದಾರೆ. ಹಾಗೆಯೆ ಮುಂದಿನ ನಡೆಯ ತೀರ್ಮಾನಕ್ಕೂ ಬೆಂಬಲಿಗರ ಸಭೆಯನ್ನು ಕರೆದಿದ್ದಾರೆ.
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
ಇನ್ನು ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶಿವಾನಂದ ಹೆಗಡೆ ಕಡತೋಕ ರಾಜೀನಾಮೆ ಸಲ್ಲಿಸಿದ್ದಾರೆ. ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಪ್ರಮುಖ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ನಿವೇದಿತ್ ಆಳ್ವಾಗೆ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ತಮ್ಮ ಬಂಡಾಯವನ್ನು ಘೋಷಣೆ ಮಾಡಿದ್ದಾರೆ.
ನಿವೇದಿತ್ ಆಳ್ವಾಗೆ ಟಿಕೆಟ್ ಪರ-ವಿರೋಧದ ಚರ್ಚೆ
ಇನ್ನು ನಿವೇದಿತ್ ಆಳ್ವಾ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ಜೋರಾಗಿದೆ. ಫೇಸ್‌ಬುಕ್, ವಾಟ್ಸಪ್‌ಗಳಲ್ಲಿ ನಿವೇದಿತ್ ಆಳ್ವಾಗೆ ಟಿಕೆಟ್ ನೀಡಿ ಶಾರದಾ ಶೆಟ್ಟಿಗೆ ಅನ್ಯಾಯ ಮಾಡಲಾಗಿದೆ. ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನು ಬಿಟ್ಟು ಬೇರೆಯವರಿಗೆ ಮಣೆ ಹಾಕಲಾಗಿದೆ. ನಿವೇದಿತ್ ಆಳ್ವಾ ಹೊರಗಿನವರು ಎಂದು ಟೀಕಿಸಲಾಗುತ್ತಿದೆ.
ಇನ್ನು ಕೆಲವರು ನಿವೇದಿತ್ ಆಳ್ವಾ ಅವರಿಗೆ ಶುಭಾಶಯ ಸಹ ಕೋರಿದ್ದು, ಬಹುತೇಕ ಪೋಸ್ಟ್‌ಗಳಿಗೆ ಟೀಕೆಯ ಕಮೆಂಟ್‌ಗಳೇ ಕಂಡುಬರುತ್ತಿದೆ.
ಸೂರಜ್ ನಾಯ್ಕ ಸೋನಿ ಬೆಂಬಲಕ್ಕೆ ಕರೆ
ಕಾಂಗ್ರೆಸ್ ಟಿಕೆಟ್ ನಿವೇದಿತ್ ಆಳ್ವಾಗೆ ಘೋಷಣೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಅವರನ್ನು ಬೆಂಬಲಿಸುವಂತೆ ಕರೆ ನೀಡಲಾಗುತ್ತಿದೆ. ಒಂದಿಷ್ಟು ಮಂದಿ ಸೂರಜ್ ನಾಯ್ಕ ಬೆಂಬಲಿಸಿ ಇದೊಂದು ಅವಕಾಶ ಕಲ್ಪಿಸಲು ಮನವಿ ಮಾಡುತ್ತಿದ್ದಾರೆ. ಅಲ್ಲದೆ ಇದೇ ವೇಳೆ ಶಾರದಾ ಶೆಟ್ಟಿ ಅವರಿಗೆ ಅನ್ಯಾಯ ಮಾಡಿರುವುದನ್ನು ಕೆಲವರು ಪ್ರಸ್ತಾಪ ಮಾಡಿ ಹೊರಗಿನ ಅಭ್ಯರ್ಥಿಗಿಂತ ಕ್ಷೇತ್ರದ ಸೂರಜ್ ನಾಯ್ಕ ಸೋನಿ ಅವರನ್ನು ಕಣಕ್ಕೆ ಇಳಿಸುವಂತೆ ಆಗ್ರಹಿಸಿದ್ದಾರೆ.
ಸೂರಜ್ ಹಿಂದೆ ಯುವಕರ ಪಡೆ
ಕಳೆದ ಬಾರಿ ಪರೇಶ್ ಮೆಸ್ತಾ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸೂರಜ್ ನಾಯ್ಕ ಸೋನಿ ಬಿಜೆಪಿ ಟಿಕೆಟ್ ಆಕಸಂಕ್ಷಿ ಆಗಿದ್ದರು. ಆದರೆ ಟಿಕೆಟ್ ಸಿಗದೆ ಇದ್ದಾಗ ಬಂಡಾಯ ಎದ್ದು ಪಕ್ಷೇತರವಾಗಿ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದರೆ ಈ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಅವರ ಹಿಂದೆ ಯುವ ಸಮುದಾಯ ಒಂದಾಗಿ ಬೆಂಬಲವಾಗಿ ನಿಂತಿದೆ.
ಯುವಕರು ದಂಡು ಸೂರಜ್ ಗೆಲುವಿಗೆ ಶ್ರಮಿಸುತ್ತಿದೆ. ಇದರಿಂದ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ನಡುವೆ ಕುಮಟಾ ಕ್ಷೇತ್ರವನ್ನು ಜೆಡಿಎಸ್ ಮರಳಿ ಪಡೆಯುವುದೇ ಎಂಬ ಕುತೂಹಲ ಮೂಡಿಸಿದೆ.












Click it and Unblock the Notifications