ಫಲ ನೀಡಿದ ತಂತ್ರಾಂಶ:ಉ.ಕ.ಜಿಲ್ಲೆಯಲ್ಲಿ ಶೇ.97 ರಷ್ಟು ಅಂಗವಿಕಲರಿಂದ ಮತದಾನ
ಕಾರವಾರ, ಏಪ್ರಿಲ್ 24:ದೇಹದ ಅಂಗಾಂಗಳು ಸರಿ ಇದ್ದೂ ಹಲವರು ಮತ ಚಲಾವಣೆ ಮಾಡಿಲ್ಲ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.97 ರಷ್ಟು ಅಂಗವಿಕಲರು ಮತ ಚಲಾವಣೆ ಮಾಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹೌದು, ಜಿಲ್ಲೆಯಲ್ಲಿ ಗುರುತಿಸಲಾಗಿದ್ದ 13,457 ಅಂಗವಿಕಲ ಮತದಾರರಲ್ಲಿ 13,009 ಮಂದಿ ಮತದಾನದ ದಿನವಾದ ಮಂಗಳವಾರ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆ ಮೂಲಕ ತಾವು ಯಾರಿಗೂ ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಈ ಬಾರಿ ಅಂಗವಿಕಲ ಮತದಾರರಿಗೆ ಮತದಾನಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಜಿಲ್ಲಾಡಳಿತ ಗೂಗಲ್ ಮ್ಯಾಪ್ ಸಹಾಯದಿಂದ ಅಭಿವೃದ್ಧಿಪಡಿಸಿದ್ದ ತಂತ್ರಾಂಶ ಉಪಯೋಗಕ್ಕೆ ಬಂದಿದೆ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ರೋಷನ್ ಅವರ ಮುತುವರ್ಜಿಯಲ್ಲಿ, ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‍ಐಸಿ) ಸಹಯೋಗದಲ್ಲಿ ಈ ವಿನೂತನ ತಂತ್ರಾಂಶವನ್ನು ರೂಪಿಸಲಾಗಿತ್ತು.

ಅಂಗವಿಕಲ ಮತದಾರರು ಎಲ್ಲಿದ್ದಾರೆ?ಅವರ ಮತಗಟ್ಟೆ ಸಂಖ್ಯೆ ಯಾವುದು? ಅವರು ಮತದಾನ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂದು ನೋಡಬಹುದಾದ ವ್ಯವಸ್ಥೆಯನ್ನು ಗೂಗಲ್ ಮ್ಯಾಪ್‌ಗಳ ಮೂಲಕ ಈ ತಂತ್ರಾಂಶದಲ್ಲಿ ಅಳವಡಿಸಲಾಗಿತ್ತು.
ಗುರುತಿಸಲಾದ ಎಲ್ಲಾ ಅಂಗವಿಕಲರ ಮತದಾರರ ಮನೆಗಳನ್ನು ಹಸಿರು ಬಣ್ಣದ ವೃತ್ತದಿಂದ ಮ್ಯಾಪ್‌ನಲ್ಲಿ ಗುರುತಿಸಲಾಗಿತ್ತು. ಅವರನ್ನು ಅಧಿಕಾರಿಗಳು ಮತಗಟ್ಟೆಗೆ ಕರೆತಂದಾಗ ಆ ವೃತ್ತ ನೀಲಿ ಬಣ್ಣದಿಂದ ಕಾಣಿಸುತ್ತಿತ್ತು. ಈ ಬಗ್ಗೆ ರೋಷನ್ ಅವರು ಕಚೇರಿಯಲ್ಲಿ ಕುಳಿತು ಗಮನಿಸುತ್ತಿದ್ದರು.

ಮತದಾನ ಮಾಡದ ಅಂಗವಿಕಲರ ಬಗ್ಗೆ ಮಾಹಿತಿ ಕ್ರೋಢೀಕರಿಸಿ, ಆಯಾ ಅಧಿಕಾರಿಗಳಿಗೆ ರವಾನಿಸುತ್ತಿದ್ದರು. ಎಲ್ಲ ಅಂಗವಿಕಲರು ಮತದಾನ ಮಾಡಲು ಅವರು ಪ್ರಯತ್ನಿಸುತ್ತಿದ್ದರು.












Click it and Unblock the Notifications