ಕಡಲ ಮಕ್ಕಳಿಗೂ ಮತ್ಸ್ಯದ ಬರ: ಅವಧಿಗೂ ಮುನ್ನವೇ ಬೋಟ್‌ಗಳಿಗೆ ಲಂಗರು
ಕಾರವಾರ, ಡಿಸೆಂಬರ್ 09: ರಾಜ್ಯದಲ್ಲಿ ಎದುರಾದ ಬರಕ್ಕೆ ರೈತರು ಕಂಗಾಲಾಗಿದ್ದಾರೆ. ಬಿತ್ತಿದ ಬೆಳೆ ಬಾರದೆ ಇದೀಗ ಸರ್ಕಾರದ ಪರಿಹಾರಕ್ಕಾಗಿ ಎದುರು ನೋಡುವಂತಾಗಿದೆ. ಆದರೆ ಇದೇ ಸ್ಥಿತಿ ಇದೀಗ ಮೀನುಗಾರರಿಗೂ ಎದುರಾಗಿದ್ದು ಆಳಸಮುದ್ರ ಹಾಗೂ ಒಳನಾಡು ಮೀನುಗಾರಿಕೆ ಸರಿಯಾಗಿ ಆಗದ ಕಾರಣ ಮೀನುಗಾರರು ಕೆಲಸವಿಲ್ಲದೆ ಖಾಲಿ ಕೂರುವಂತಾಗಿದೆ.
ಪ್ರಸಕ್ತ ಸಾಲಿನಲ್ಲಿ ಮೀನುಗಾರಿಕೆ ನಿರೀಕ್ಷೆಯಂತೆ ಸಮಯಕ್ಕೆ ಸರಿಯಾಗಿ ಆರಂಭವಾಗಿತ್ತು. ಆರಂಭದಲ್ಲಿ ಸ್ಥಳೀಯವಾಗಿ ಕಾರ್ಮಿಕರು ಸಿಗದ ಕಾರಣಕ್ಕೆ ಒಂದಿಷ್ಟು ಬೋಟ್‌ಗಳು ತಡವಾಗಿ ಮೀನುಗಾರಿಕೆಗೆ ತೆರಳಿದ್ದವಾದರೂ ಬಹುತೇಕರು ಉತ್ತಮ ಮೀನುಗಾರಿಕೆ ನಿರೀಕ್ಷೆಯಲ್ಲಿ ತೆರಳಿದ್ದರು. ಆದರೆ ಇದೀಗ ಮೀನುಗಾರಿಕಾ ಹಂಗಾಮು ಪ್ರಾರಂಭವಾಗಿ ಮೂರು ತಿಂಗಳು ಕಳೆದರೂ ಕೂಡ ಮೀನುಗಾರಿಕೆ ಚೇತರಿಸಿಕೊಂಡಿಲ್ಲ. ಮೀನುಗಾರಿಕೆಗೆ ತೆರಳಿದ ಬೋಟ್‌ಗಳಿಗೆ ಖರ್ಚು ಕೂಡ ಹುಟ್ಟದ ಕಾರಣಕ್ಕೆ ಮತ್ತು ಬಲೆಗಳಿಗೆ ಜೆಲ್ಲಿ ಫಿಶ್‌ಗಳೆ ಹೆಚ್ಚಾಗಿ ಸಿಗುವ ಕಾರಣಕ್ಕೆ ಮೀನುಗಾರಿಕೆ ಬಂದ್ ಮಾಡಲಾಗಿದೆ.

ರಾಜ್ಯದಲ್ಲಿ ಕೆರೆ. ಕೋಳ, ಜಲಾಶಯ ಸೇರಿ 5.74 ಲಕ್ಷ ಹೆಕ್ಟೇರ್ ನಷ್ಟು ಒಳನಾಡು ಜಲಸಂಪನ್ಮೂಲ ಹೊಂದಿದೆ. 320 ಕಿ.ಮೀ ಕರಾವಳಿ ತೀರ ಪ್ರದೇಶವನ್ನು ಹೊಂದಿದ್ದು, ರಾಜ್ಯದಲ್ಲಿ ಒಟ್ಟು ಸುಮಾರು 9.84 ಲಕ್ಷದಷ್ಟು ಮೀನುಗಾರರು ಮೀನುಗಾರಿಕೆ ನಡೆಸುತ್ತಾರೆ. ಕಳೆದ ಬಾರಿ ಹಂಗಾಮಿನಲ್ಲಿ 1962.16 ಕೋಟಿ ಮೌಲ್ಯದ 7.30 ಲಕ್ಷ ಟನ್ ಮೀನು ಉತ್ಪಾದನೆಯಾಗಿತ್ತು. 2021-22ರಲ್ಲಿ 1,17,266 ಮೆಟ್ರಿಕ್ ಟನ್, 2020-21 ರಲ್ಲಿ 1,02,800 ಮೆಟ್ರಿಕ್ ಟನ್, 2018-19 ರಲ್ಲಿ 10.85 ಮೆಟ್ರಿಕ್ ಟನ್, 2019-20ರಲ್ಲಿ 10.19 ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು. ಆದರೆ ಈ ಬಾರಿ ಆರಂಭದಿಂದಲೂ ಈವರೆಗೂ ಹೇಳಿಕೊಳ್ಳುವಂತಹ ಮೀನುಗಾರಿಕೆ ಆಗಿಲ್ಲ ಎಂದು ಸ್ಥಳೀಯ ಮೀನುಗಾರರು ಹೇಳುತ್ತಾರೆ.
ರಾಜ್ಯದಲ್ಲಿ ಕೃಷಿ ಕ್ಷೇತ್ರ ಬರದಿಂದ ತತ್ತರಿಸಿದಂತೆ ಮೀನುಗಾರಿಕಾ ಕ್ಷೇತ್ರ ಮೀನಿಲ್ಲದೆ ಮತ್ಸ್ಯ ಕ್ಷಾಮ ಎದುರಿಸುತ್ತಿದೆ. ಕಳೆದ ವರ್ಷ ಉತ್ತಮ ಮೀನುಗಾರಿಕೆ ನಡೆಸಿದ್ದ ಪರ್ಶಿಯನ್ ಬೋಟ್‌ಗಳಿಗೂ ಕೂಡ ಇದೀಗ ಮೀನು ಸಿಗದಂತಾಗಿದೆ. ಇದರಿಂದ ಬಹುತೇಕರು ಬಂದರುಗಳಲ್ಲಿ ಲಂಗರು ಹಾಕುತ್ತಿದ್ದಾರೆ. ಇನ್ನು ಬಹುತೇಕ ಮೀನುಗಾರರು ಸಾಲ ಮಾಡಿಕೊಂಡಿದ್ದು ತುಂಬಲು ಸಾಧ್ಯವಾಗದ ಸ್ಥಿತಿ. ಇದೀಗ ಮೀನುಗಾರರು ಮತ್ತೆ ಸಾಲ ಕೇಳಿದರೇ ಬ್ಯಾಂಕಗಳು ನೀಡುತ್ತಿಲ್ಲ.

ಸಿಆರ್‌ಜೆಡ್ ವ್ಯಾಪ್ತಿಯಲ್ಲಿ ಬಹುತೇಕ ಮೀನುಗಾರರ ಮನೆ ಇರುವ ಕಾರಣ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಅಲ್ಲದೆ ಕೃಷಿ ಕ್ಷೇತ್ರವನ್ನು ಬರ ಎಂದು ಘೋಷಣೆ ಮಾಡಿದಂತೆ ಮೀನುಗಾರಿಕಾ ಕ್ಷೇತ್ರದಲ್ಲಿಯೂ ಎದುರಾಗಿರುವ ಬರಕ್ಕೆ ಪರಿಹಾರವಾಗಿ ಮೀನುಗಾರರ ಸಾಲ ಮನ್ನಾ ಮಾಡಲು ಮುಮದಾಗಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಆಗ್ರಹಿಸಿದರು.
ಇನ್ನು ರಾಜ್ಯದಾದ್ಯಂತ ಮಳೆ ಕೊರತೆಯಾದ ಕಾರಣ ಬಹುತೇಕ ಕೆರಗಳಲ್ಲಿ ನೀರು ಕಡಿಮೆ ಇದೆ. ಇದರಿಂದ ಒಳನಾಡು ಮೀನು ಮರಿಗಳಿಗೂ ಬೇಡಿಕೆ ಕಡಿಮೆ ಇದೆ. ಮೀನು ಮರಿ ಉತ್ಪಾದನೆ ತಾಯಿ ಮೀನುಗಳನ್ನು ಉತ್ಪಾದನಾ ಕೇಂದ್ರದಲ್ಲಿ ಪಾಲನೆ ಮಾಡಲಾಗುತ್ತಿದೆ. ಬೇಡಿಕೆ ಕೊರತೆಯಿಂದಾಗಿ ಈ ವರ್ಷ ತಾಯಿ ಮೀನುಗಳನ್ನು ಪೂರ್ಣವಾಗಿ ಬಳಸಿಕ್ಕೊಳ್ಳಲು ಸಾಧ್ಯವಾಗಿಲ್ಲ ಎಂದು ಮೀನುಗಾರಿಕಾ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿರುವ ಆಯ್ದ ಜಲಾಶಯಗಳಲ್ಲಿ ಮೀನು ಬಿತ್ತನೆ ಮಾಡಲು ಮೀನುಗಾರಿಕಾ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ ಸ್ಟಾನ್ ಹಂತದ ವಿವಿಧ ತಳಿಯ 87.86 ಕೋಟಿ ಮೀನು ಮರಿಗಳನ್ನು ದಾಸ್ತಾನು ಮಾಡಲಾಗಿದೆ. ಸಮುದ್ರದಲ್ಲಿ ಮೀನು ಉತ್ಪಾದನೆ ಹೆಚ್ಚಿಸುವ ಸಂಬಂಧ ಭವಿಷ್ಯದಲ್ಲಿ ಸೂಕ್ತ ತಳಿಯ ಮೀನು ಮರಿ ಉತ್ಪಾದನೆ ಮಾಡಿ ಸಮುದ್ರ ನದಿ, ಹಾಗೂ ಜಲಾಶಯಗಳಿಗೆ ಬಿತ್ತನೆ ಮಾಡಲು ಇಲಾಖೆ ಮುಂದಾಗಿದೆ.












Click it and Unblock the Notifications