ಅಧಿಕಾರಿಗಳ ಮಲತಾಯಿ ಧೋರಣೆ ಆರೋಪ: ಸಾಂಪ್ರದಾಯಿಕ ಮೀನುಗಾರಿಕೆಗೆ ಹೊಡೆತ
ಕಾರವಾರ, ಜನವರಿ 3: ಕರಾವಳಿಯಲ್ಲಿ ಸಣ್ಣ ಯಾಂತ್ರೀಕೃತ ದೋಣಿ ಬಳಸಿ ಸಾಂಪ್ರದಾಯಿಕ ಮೀನುಗಾರಿಕೆ ಮೂಲಕ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಸರ್ಕಾರ ಇಂತಹ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ನೀಡುತ್ತಿದ್ದ ಸೀಮೆಎಣ್ಣೆಯನ್ನು ಕೇವಲ ಉಡುಪಿ ಮಂಗಳೂರು ಭಾಗದ ಮೀನುಗಾರರಿಗೆ ಮಾತ್ರ ನೀಡಿದ್ದು ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಇದೀಗ ಮೂರ್ನಾಲ್ಕು ತಿಂಗಳಿಂದ ಸೀಮೆಎಣ್ಣೆ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕರಾವಳಿಯ ಬಹುತೇಕರಿಗೆ ಮೀನುಗಾರಿಕೆಯೇ ಜೀವನಾಧಾರ. ಅದರಲ್ಲೂ ಉತ್ತರ ಕನ್ನಡದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯಿಂದಲೇ ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳಿವೆ. ಇಂತಹ ಸಾಂಪ್ರದಾಯಿಕ ಮೀನುಗಾರಿಕೆಗೆ ಸರ್ಕಾರ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆಯನ್ನು ಒದಗಿಸುತ್ತಿತ್ತು. ಆದರೆ ಇದೀಗ ಕಳೆದ 3-4 ತಿಂಗಳಿನಿಂದ ಉತ್ತರ ಕನ್ನಡ ಮೀನುಗಾರರಿಗೆ ಸೀಮೆಎಣ್ಣೆ ವಿತರಣೆಯಾಗಿಲ್ಲ. ಸಣ್ಣ ನಾಡದೋಣಿಗಳಲ್ಲಿ ಮೀನು ಹಿಡಿದು ಜೀವನ ಮಾಡುತ್ತಿದ್ದ ಮೀನುಗಾರರಿಗೆ ಇದೀದ ಸೀಮೆಎಣ್ಣೆ ಸಿಗದೆ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ನಿರ್ಲಕ್ಷ್ಯ ಮಾಡಿದರೆ ಹೋರಾಟದ ಎಚ್ಚರಿಕೆ
ನಾಡದೋಣಿ ಮೀನುಗಾರಿಕೆ ಮಾಡಲು ದೋಣಿ ಮೋಟಾರ್‌ಗಳಿಗೆ ಸೀಮೆಎಣ್ಣೆ ಬಳಸುವುದರಿಂದ ಸರ್ಕಾರಿ ಪ್ರತಿ ತಿಂಗಳು 300 ಲೀಟರ್ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆಯನ್ನು ವಿತರಣೆ ಮಾಡುತ್ತದೆ. ಆದರೆ ಕಳೆದ ಕೆಲ ತಿಂಗಳಿನಿಂದ ಸೀಮೆಎಣ್ಣೆ ವಿತರಣೆಯಾಗಿಲ್ಲ. ಇದರಿಂದ ನಾಡದೋಣಿ ಮೀನುಗಾರರು ದೋಣಿಯಿದ್ದು, ಕೆಲಸವಿದ್ದರೂ ಸೀಮೆಎಣ್ಣೆ ಸಿಗದೇ ಮೀನುಗಾರಿಕೆ ನಡೆಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸರ್ಕಾರ ಸೀಮೆಎಣ್ಣೆ ಬಿಡುಗಡೆ ಮಾಡಿ ಮೀನುಗಾರರು ಮೀನುಗಾರಿಕೆ ಮಾಡಲು ಅವಕಾಶ ಮಾಡಿಕೊಡಬೇಕು. ಇನ್ನು ಕೂಡ ನಿರ್ಲಕ್ಷ್ಯ ಮಾಡಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರವಾರ ಮೀನುಗಾರರಿಗೆ ಅನ್ಯಾಯ
ಇನ್ನು ಜಿಲ್ಲೆಯ ಕರಾವಳಿಯಲ್ಲಿ ಎರಡು ಸಾವಿರಕ್ಕೂ ಅಧಿಕ ನಾಡದೋಣಿಗಳಿದ್ದು ಸುಮಾರು 8 ಸಾವಿರಕ್ಕೂ ಅಧಿಕ ಮಂದಿ ಈ ಮೀನುಗಾರಿಕೆಯನ್ನೇ ನಂಬಿಕೊಂಡಿದ್ದಾರೆ. ಪ್ರತಿವರ್ಷ ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ಮೀನುಗಳು ದಡದತ್ತ ಬರುವುದರಿಂದ ನಾಡದೋಣಿ ಮೀನುಗಾರಿಕೆಗೆ ಉತ್ತಮ ಮೀನುಗಳು ಬಲೆಗೆ ಸಿಗುತ್ತವೆ. ಸಂಪೂರ್ಣ ವರ್ಷದ ಆದಾಯವನ್ನು ನಾಲ್ಕೈದು ತಿಂಗಳಲ್ಲಿ ಗಳಿಸಿಕೊಳ್ಳುತ್ತಿದ್ದರು. ಈ ಹಿಂದೆ ನಿಗದಿಯ ಅರ್ಧದಷ್ಟಾದರೂ ಸೀಮೆಎಣ್ಣೆ ವಿತರಣೆಯಾಗುತ್ತಿತ್ತು. ಆದರೆ ಈ ಬಾರಿ ಅದನ್ನೂ ಸಹ ನೀಡದೇ ಅನ್ಯಾಯ ಮಾಡಲಾಗುತ್ತದೆ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೀನುಗಾರರಿಗೆ ಸಿಗದ ಸೌಲಭ್ಯ
ಸರ್ಕಾರ ಸೀಮೆಎಣ್ಣೆಯನ್ನು ನೆರೆಯ ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳ ಮೀನುಗಾರರಿಗೆ ವಿತರಣೆ ಮಾಡಿದೆ. ಆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಸಮರ್ಥವಾಗಿರುವ ಕಾರಣ ಮೀನುಗಾರಿಕೆಗೆ ಸಂಬಂಧಿಸಿದಂತೆ ಅತಿ ಹೆಚ್ಚು ಸೌಲಭ್ಯಗಳು ಆ ಜಿಲ್ಲೆಗಳಿಗೆ ಲಭ್ಯವಾಗುತ್ತಿದೆ. ಆದರೆ ನಮ್ಮಲ್ಲಿನ ಜನಪ್ರತಿನಿಧಿಗಳು ಮಾತನಾಡುವುದಕ್ಕೂ ಹಿಂದೇಟು ಹಾಕುತ್ತಾರೆ. ಇದರಿಂದ ಮೀನುಗಾರರಿಗೆ ಸೌಲಭ್ಯ ಲಭ್ಯವಾಗುತ್ತಿಲ್ಲ ಎಂದು ಮೀನುಗಾರರು ಆಕ್ರೋಶ ಹೊರ ಹಾಕಿದ್ದಾರೆ.

ಅಧಿಕಾರಿಗಳಿಂದ ಮಲತಾಯಿ ಧೋರಣೆ
ಇನ್ನು ಈ ಬಗ್ಗೆ ವಿಧಾನ ಪರಿಷತ್ ಸದಸ್ಯ, ಮೀನುಗಾರ ಮುಖಂಡ ಗಣಪತಿ ಉಳ್ವೇಕರ್ ಅವರನ್ನು ಕೇಳಿದಾಗ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮೀನುಗಾರರಿಗೆ ಸೀಮೆಎಣ್ಣೆಯನ್ನು ವಿತರಣೆ ಮಾಡಲಾಗಿದೆ. ಆದರೆ ನಮ್ಮ ಜಿಲ್ಲೆಗೆ ಕೇವಲ ಶೇ. 35 ರಷ್ಟು ಮಾತ್ರ ಪೂರೈಕೆಯಾಗಿದೆ. ಈ ಬಗ್ಗೆ ಮೀನುಗಾರಿಕಾ ಸಚಿವರಿಗೂ ತಿಳಿಸಿದ್ದು 15 ದಿನದಲ್ಲಿ ಪೂರೈಕೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲೆಯಲ್ಲಿರುವ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಸೂಕ್ತ ಮಾಹಿತಿ ನೀಡದೇ ಇರುವುದರಿಂದ ಉತ್ತರ ಕನ್ನಡಕ್ಕೆ ಅನ್ಯಾಯವಾಗುತ್ತಿದೆ. ಜಿಲ್ಲೆಯಲ್ಲಿ ಬಹುತೇಕ ಆ ಭಾಗದ ಅಧಿಕಾರಿಗಳು ಇರುವುದರಿಂದ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಮೊದಲು ಈ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಜಿಲ್ಲೆಗೆ ಹೊಸ ಅಧಿಕಾರಿಗಳನ್ನು ನೇಮಕ ಮಾಡುವಂತೆ ಆಗ್ರಹಿಸಿದರು.
ಸಾಂಪ್ರದಾಯಿಕ ಮೀನುಗಾರರಿಗೆ ಮೀನು ಲಭ್ಯವಿದ್ದರೂ ಮೀನುಗಾರಿಕೆ ನಡೆಸಲಾಗದ ಪರಿಸ್ಥಿತಿ ಎದುರಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಮೀನುಗಾರಿಕೆಗೆ ಅಗತ್ಯವಿರುವ ಸೀಮೆಎಣ್ಣೆ ಪೂರೈಕೆ ಮಾಡಬೇಕಿದೆ.












Click it and Unblock the Notifications