ಕಾರವಾರದಲ್ಲಿ ಹಾಲಿ-ಮಾಜಿ ಶಾಸಕರ ಕಿತ್ತಾಟ: ರೂಪಾಲಿ ನಾಯ್ಕ ವಿರುದ್ಧ ಹಲ್ಲೆ ಆರೋಪ
ಜಿಲ್ಲಾ ಪಂಚಾಯಿತಿಯಲ್ಲಿ ಶಾಸಕಿ ರೂಪಾಲಿ ನಾಯ್ಕ ತಮ್ಮ ಮೇಲೆ ಪೇಪರ್ ವೇಟ್ನಿಂದ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಮಾಜಿ ಶಾಸಕ ಸತೀಸ್ ಸೈಲ್ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಕಾರವಾರ, ಮಾರ್ಚ್ 3: ಪಿಡಿಓ ವರ್ಗಾವಣೆ ಸಂಬಂಧ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ನಡೆದ ವಾಗ್ವಾದವೊಂದು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಶುಕ್ರವಾರ ಪರಸ್ಪರ ದೂರು ದಾಖಲಿಸಿದ್ದಾರೆ. ಜಿಲ್ಲಾ ಪಂಚಾಯಿತಿಯಲ್ಲಿ ಶಾಸಕಿ ರೂಪಾಲಿ ನಾಯ್ಕ ತಮ್ಮ ಮೇಲೆ ಪೇಪರ್ ವೇಟ್ನಿಂದ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಮಾಜಿ ಶಾಸಕ ಸತೀಸ್ ಸೈಲ್ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಇನ್ನು ಸೈಲ್ ದೂರು ಸಲ್ಲಿಸಿದ ವಿಷಯ ತಿಳಿಯುತ್ತಿದ್ದಂತೆ ಶಾಸಕಿ ರೂಪಾಲಿ ನಾಯಕ ಕೂಡ ಅದೇ ಠಾಣೆಗೆ ಆಗಮಿಸಿ ತಮ್ಮ ತಂದೆಯನ್ನು ಮಾಜಿ ಶಾಸಕ ಸತೀಶ್ ಸೈಲ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ದೂರು ದಾಖಲಿಸಿದ್ದಾರೆ.

ಏನಿದು ಪ್ರಕರಣ..?
ಕಾರವಾರ ತಾಲೂಕಿನ ಮಾಜಾಳಿ ಪಂಚಾಯಿತಿಯ ಪಿಡಿಓ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಅರುಣಾ ಎಂಬುವವರನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಹೊಸ ಪಿಡಿಓ ಅವರಿಗೆ ಕೊಂಕಣಿ ಬಾರದ ಹಿನ್ನಲೆಯಲ್ಲಿ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಮಾಜಿ ಶಾಸಕ ಸತೀಸ್ ಸೈಲ್ ಜಿ.ಪಂ ತೆರಳಿ ಸಿಇಓ ಈಶ್ವರ ಕಾಂದೂ ಅವರೊಂದಿಗೆ ಮಾತುಕತೆ ನಡೆಸಿದ್ದರು.
ಇದೇ ವೇಳೆ ಸಭೆಯೊಂದಕ್ಕೆ ಆಗಮಿಸಿದ್ದ ಹಾಲಿ ಶಾಸಕಿ ರೂಪಾಲಿ ನಾಯ್ಕ ಸಿಇಓ ಕಚೇರಿಗೆ ತೆರಳಿದ್ದರು. ಸಿಇಓ ಶಾಸಕರನ್ನು ಆಹ್ವಾನಿಸಿ ಮೀಟಿಂಗ್ ಹಾಲ್‌ನಲ್ಲಿ ಇದೇ ಪಿಡಿಓ ವರ್ಗಾವಣೆ ಸಂಬಂಧ ಮಾತುಕತೆ ನಡೆಸುತ್ತಿದ್ದಾಗ ಮೊದಲು ಬಂದ ತಮ್ಮನ್ನು ಸಿಇಓ ಕಡೆಗಣಿಸಿದ್ದಾರೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ಆರೋಪಿಸಿದಾಗ ಮಾಜಿ ಹಾಗೂ ಹಾಲಿ ಶಾಸಕ ನಡುವೆ ವಾಗ್ವಾದ ನಡೆದು ಬಳಿಕ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಏರುವಂತಾಗಿದೆ.

ಲೇಡಿಸ್ ಗುಂಡಾರಿತಿ ವರ್ತಿಸುವ ಶಾಸಕಿ: ಸೈಲ್ ಆರೋಪ
ಮಾಜಾಳಿ ಗ್ರಾ.ಪಂ ಪಿಡಿಓ ಅವರನ್ನು ನಾಲ್ಕು ತಿಂಗಳ ಹಿಂದೆ ವರ್ಗಾವಣೆ ಮಾಡಿ ಹೊಸಬರನ್ನು ನೇಮಕ ಮಾಡಲಾಗಿತ್ತು. ಆದರೆ ಈ ಬಗ್ಗೆ ಜಿ.ಪಂ ಸಿಇಓ ಅವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸುವ ವೇಳೆ ಶಾಸಕಿ ರೂಪಾಲಿ ನಾಯ್ಕ ಆಗಮಿಸಿದ್ದರು. ಸಿಇಓ ಕಚೇರಿಯಲ್ಲಿ ಇದೇ ವಿಷಯದ ಸಂಬಂಧ ಮಾತನಾಡಿ ಪಕ್ಷಪಾತ ಮಾಡಲು ಆರಂಭಿಸಿದ್ದರು. ಈ ಬಗ್ಗೆ ಸಿಇಓ ಅವರನ್ನು ಪ್ರಶ್ನಿಸಿದ್ದಾಗ ಶಾಸಕಿ ಗಲಾಟೆ ಮಾಡಿದ್ದಾರೆ. ನೀನು ಕುಡಿದು ಬಂದಿದ್ದೀಯಾ, ನಿನ್ನ ಮುಖ ನೋಡು ಎಂದು ಪೊಲೀಸರಿಗೆ ವಾಹನ ಚೆಕ್ ಮಾಡಲು ಸೂಚಿಸಿದರು.
ಆಗ ನಾನು ಕುಡಿಯೋದಕ್ಕೆ ಯಾರು ನಿಮ್ಮ ಅಪ್ಪಾ ಹಣ ನೀಡಿದ್ದಾರೆ ಎಂದು ಪ್ರಶ್ನಿಸಿದೇನೆ. ಬಳಿಕ ನೀನು ಯಾವಾಗಲೂ ಮಾಜಿ ಶಾಸಕನೇ ಆಗಿರುತ್ತಿಯಾ ಎಂದು ಮಾತು ಬೆಳಸಿ ಪೇಪರ್ ವೇಟ್ನಿಂದ ಹಲ್ಲೆಗೆ ಯತ್ನಿಸಿದ್ದರು. ಈ ಬಗ್ಗೆ ದೂರು ಸಲ್ಲಿಸಿ ಸಿಇಓ ಕಚೇರಿಯಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಕೋರಿದ್ದೇನೆ. ಶಾಸಕಿ ಲೇಡಿಸ್ ಗುಂಡಾತರ ವರ್ತನೆ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ಆರೋಪಿಸಿದ್ದಾರೆ.
ಕುಡಿದು ಬಂದು ಕಿರಿಕ್: ಶಾಸಕಿ ಆರೋಪ
ಇನ್ನು ಆರೋಪಕ್ಕೆ ಶಾಸಕಿ ರೂಪಾಲಿ ನಾಯ್ಕ ಕೂಡ ಪ್ರತಿಕ್ರಿಯಿಸಿದ್ದು, ಮಾಜಿ ಶಾಸಕರು ಅಧಿಕಾರ ದಾಹಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ದಿನವಿಡಿ ಕುಡಿದು ಇರುವ ಅವರು ವಾಹನದಲ್ಲಿ ಬಾಟಲಿ ಇಟ್ಟುಕೊಂಡಿರುತ್ತಾರೆ. ಕಚೇರಿಗಳಿಗೆ ತೆರಳಿ ಅಧಿಕಾರಿಗಳಿಗೆ ಹೆದರಿಸುವ ಕೆಲಸ ಮಾಡುತ್ತಾರೆ. ನನ್ನ ತಂದೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ಅವರು ವಿರುದ್ಧ ದೂರು ಸಲ್ಲಿಸಿದ್ದೇನೆ ಎಂದು ಆರೋಪಿಸಿದ್ದಾರೆ.
ಇನ್ನು ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ಕಿತ್ತಾಟದಿಂದ ಯಾರ ಮೇಲೆ ಕ್ರಮ ಕೈಗೊಳ್ಳಬೇಕು, ಯಾರ ದೂರು ದಾಖಲಿಸಬೇಕು ಎಂದು ಪೊಲೀಸರು ಗೊಂದಲಕ್ಕೆ ಸಿಲುಕುವಂತಾಯಿತು. ಕೊನೆಗೆ ಇಬ್ಬರ ದೂರನ್ನು ಆಲಿಸಿದ ಪೊಲೀಸರು ಲಿಖಿತ ರೂಪದಲ್ಲಿ ನೀಡುವಂತೆ ಸೂಚಿಸಿದರು. ಸಂಜೆ ವೇಳೆ ಇಬ್ಬರ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ರೂಪಾಲಿ ನಾಯ್ಕ ಆರೋಪಕ್ಕೆ ಸೈಲ್ ಬೆಂಬಲಿಗರ ಆಕ್ರೋಶ
ಕುಡಿದು ಬಂದು ಗಲಾಟೆ ಮಾಡುತ್ತಿದ್ದಾರೆ ಎಂಬ ಶಾಸಕಿ ರೂಪಾಲಿ ನಾಯ್ಕ ಆರೋಪಕ್ಕೆ ಸೈಲ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಶಾಸಕಿ ಜನರಿಗೆ ಸುಳ್ಳು ಮಾಹಿತಿ ನೀಡುತಿರುವುದರಿಂದ ಸತ್ಯಾಸತ್ಯತೆ ಜನರ ಮುಂದಿಡಲು ಆಸ್ಪತ್ರೆಯಲ್ಲಿ ಕುಡಿದಿದ್ದಾರೆ ಇಲ್ಲವೋ ಎಂಬುದರ ತಪಾಸಣೆ ನಡೆಸುವುದಾಗಿ ತಿಳಿಸಿದ್ದರು. ಅದರಂತೆ ಸತೀಶ್ ಸೈಲ್ ಅವರೊಂದಿಗೆ ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಿದ್ದು ಪ್ರಾಥಮಿಕ ತಪಾಸಣೆಯಲ್ಲಿ ಕುಡಿದಿಲ್ಲ ಎಂಬ ವರದಿ ನೀಡಲಾಗಿದೆ. ಅಲ್ಲದೆ ರಕ್ತದ ಮಾದರಿ ಕೂಡ ಪಡೆದಿದ್ದು ತಪಾಸಣೆಗೆ ಕಳುಹಿಸಲಾಗಿದೆ ಎನ್ನಲಾಗಿದೆ.












Click it and Unblock the Notifications