ಮಾವನಿಂದ ಅತ್ಯಾಚಾರ: ಮನನೊಂದ ಸೊಸೆ ಅಂಕೋಲಾದಲ್ಲಿ ಆತ್ಮಹತ್ಯೆ
ಕಾರವಾರ, ಆಗಸ್ಟ್ 04 : ಪತಿಯ ತಂದೆಯಿಂದ ಅತ್ಯಾಚಾರಕ್ಕೊಳಗಾಗಿ, ಮಾನಸಿಕವಾಗಿ ನೊಂದ ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.
ಅಂಕೋಲಾ ತಾಲೂಕಿನ ಹಿಲ್ಲೂರ್ ಗ್ರಾಮದ ಸಮೀಪದ ಅರಣ್ಯದಲ್ಲಿ ಈ 20ರ ಹರೆಯದ ವಿವಾಹಿತೆ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿವಾಹಿತೆಯ ಮೇಲೆ ಆಕೆಯ ಮಾವ ಬ್ರಹ್ಮ ಹರಿಕಂತ್ರ (50) ಎಂಬಾತ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಅತ್ಯಾಚಾರ ನಡೆಸಿದ್ದ. ಇದರಿಂದಾಗಿ ಮನನೊಂದ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರೇಮ ವಿವಾಹವಾಗಿತ್ತು
ಗೋಕರ್ಣ ಹಿರೇಗುತ್ತಿಯ ನವಗ್ರಹ ಗ್ರಾಮದ ಯುವಕನನ್ನು ಪ್ರೀತಿಸಿದ್ದ ಈಕೆ, ಒಂದು ವರ್ಷದ ಹಿಂದೆ ರಿಜಿಸ್ಟರ್ ಮದುವೆಯಾಗಿದ್ದರು. ಪತಿಯು ಮೀನುಗಾರಿಕೆ ದೋಣಿಯಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ, ಮೀನುಗಾರಿಕೆಗೆಂದು ತೆರಳಿದ್ದ ಸಂದರ್ಭ ಸೊಸೆಯೊಂದಿಗೆ ಮಾವ ಅನುಚಿತವಾಗಿ ವರ್ತಿಸುತ್ತಿದ್ದ.
ಈ ರೀತಿ ವರ್ತಿಸದಂತೆ ಅನೇಕ ಬಾರಿ ವಿವಾಹಿತೆ ತನ್ನ ಮಾವನ ಬಳಿ ಬೇಡಿಕೊಂಡಿದ್ದರು. ಆದರೂ ಆತ ಅದನ್ನು ಮುಂದುವರಿಸಿದ್ದ. ಆಕೆ ಆತನ ಅಸಭ್ಯ ವರ್ತನೆಯನ್ನು ವಿರೋಧಿಸಿದಾಗೆಲ್ಲ ಅಸಹ್ಯವಾದ ಪದಗಳನ್ನು ಬಳಸಿ ಆಕೆಯನ್ನು 'ವೇಶ್ಯೆ' ಅಂತಲೂ ಕರೆಯುತ್ತಿದ್ದ.
ಆದರೆ, ಕಳೆದ ಮೇ ತಿಂಗಳಲ್ಲಿ ವಿವಾಹಿತೆಯ ಪತಿಯು ಮೀನುಗಾರಿಕೆಗೆಂದು ತೆರಳಿದ್ದ ಸಂದರ್ಭ ಒಂದು ದಿನ ರಾತ್ರಿ ಮಾವ ಕೋಣೆ ಪ್ರವೇಶಿಸಿದ್ದ. ಎಷ್ಟೇ ವಿರೋಧಿಸಿದರೂ, ಏನೂ ಮಾಡದಂತೆ ಬೇಡಿಕೊಂಡರೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಒಂದು ತಿಂಗಳಿನಿಂದ ತವರು ಮನೆಯಲ್ಲಿ ನೆಲೆಸಿದ್ದಳು
ಇದಾದ ನಂತರ ವಿವಾಹಿತೆ ತನ್ನ ಅಂಕೋಲಾದ ತವರು ಮನೆಗೆ ಹಿಂದಿರುಗಿದ್ದಳು. ಅಲ್ಲಿ ಪೋಷಕರೊಂದಿಗೆ ಉಳಿದುಕೊಂಡಿದ್ದಳು. ಆದರೆ, ಗುರುವಾರ ಅರಣ್ಯ ಪ್ರದೇಶಕ್ಕೆ ತೆರಳಿದವಳು ಧರಿಸಿದ್ದ ದುಪ್ಪಟ್ಟಾವನ್ನೇ ನೇಣನ್ನಾಗಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಾವನ ಕೃತ್ಯ ಬಿಚ್ಚಿಟ್ಟ ಡೆತ್ ನೋಟ್
ಮರಕ್ಕೆ ನೇಣು ಹಾಕಿಕೊಂಡಿದ್ದ ವಿವಾಹಿತೆಯು ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್ ನೋಟ್ ನಲ್ಲಿ ತನ್ನ ಮಾವನ ಕೃತ್ಯವನ್ನು ವಿವರಿಸಿದ್ದಾಳೆ. ಅದರ ಅನ್ವಯವಾಗಿ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಉಡುಪಿಯಲ್ಲಿ ಆರೋಪಿಯ ಮಾವನ ಬಂಧನ
ಅಂಕೋಲಾ ಪೊಲೀಸರ ತಂಡವು ಆರೋಪಿಯ ಬಂಧನಕ್ಕೆ ಉಡುಪಿಯ ಮಲ್ಪೆಗೆ ಹೊರಟಿತ್ತು. ಆರೋಪಿ ಬ್ರಹ್ಮ ಕೆಲಸ ಮಾಡುತ್ತಿದ್ದ ದೋಣಿಯಲ್ಲಿ ಆತನನ್ನು ಬಂಧಿಸಿದ್ದಾರೆ. ಆರೋಪಿ ಬ್ರಹ್ಮ ಮೂಲತಃ ತಮಿಳುನಾಡಿನವನಾಗಿದ್ದು, ಹಲವು ವರ್ಷಗಳ ಹಿಂದೆ ಅಂಕೋಲಾಕ್ಕೆ ಕೆಲಸವನ್ನು ಅರಸಿ ಬಂದಿದ್ದ. ನಂತರ ಹಿರೇಗುತ್ತಿಯ ಮಹಿಳೆಯನ್ನು ಮದುವೆಯಾಗಿ ಅಲ್ಲಿಯೇ ನೆಲೆಸಿದ್ದನು.












Click it and Unblock the Notifications