• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಕನ್ನಡದಲ್ಲಿ ಕೊರೊನಾ ಹೆಚ್ಚಿಸಿದೆ ಭಯ, ಎಲ್ಲೆಲ್ಲೂ ಅನುಮಾನದ ಕಣ್ಣು

|

ಕಾರವಾರ, ಮಾರ್ಚ್ 14: ಕೊರೊನಾ ವೈರಸ್ ಭೀತಿ ಎಲ್ಲೆಡೆ ಹಬ್ಬಿದೆ. ರಾಜ್ಯದಲ್ಲೂ ಕೊರೊನಾ ವೈರಸ್ ಕಾಲಿಟ್ಟ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸರ್ಕಾರ ಇಳಿದಿದೆ. ಆದರೆ, ಇದೇ ಜಾಗೃತಿ ಇದೀಗ ಜನರಲ್ಲಿ ಹೆಚ್ಚಿನ ಭಯ ಸೃಷ್ಟಿ ಮಾಡಿದ್ದು, ವಿದೇಶದಿಂದ ಬರುವವರನ್ನು ಅನುಮಾನದಿಂದ ನೋಡಲು ಜನರು ಪ್ರಾರಂಭಿಸಿದ್ದಾರೆ.

ವಿಶ್ವದಾದ್ಯಂತ ಸಾವಿರಾರು ಜನರ ಸಾವಿಗೆ ಕಾರಣವಾಗಿರುವ ಕೊರೊನಾ ದೇಶಕ್ಕೂ ಕಾಲಿಟ್ಟಿದ್ದು, ವಿದೇಶದಿಂದ ಬಂದಂತಹ ಹಲವರಲ್ಲಿ ಕೊರೋನಾ ವೈರಸ್ ಕಂಡು ಬಂದಿತ್ತು. ವಿದೇಶದಿಂದ ವಾಪಸ್ ಆಗಿದ್ದ ಕಲ್ಬುರ್ಗಿಯ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಆತನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಆತಂಕ ಇನ್ನಷ್ಟು ಹೆಚ್ಚಲು ಕಾರಣವಾಗಿತ್ತು. ವಿದೇಶದಿಂದ ಬಂದ ಹಲವರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ ಎನ್ನುವ ಸುದ್ದಿ ಸಾಕಷ್ಟು ಹರಡಿದ ಹಿನ್ನೆಲೆಯಲ್ಲಿ ಇದೀಗ ಯಾರೇ ವಿದೇಶದಿಂದ ಬಂದರೂ ಜನರು ಹೆದರಿ ಅವರನ್ನು ಅನುಮಾನದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊರೊನಾ ಬಗ್ಗೆ ಯಡಿಯೂರಪ್ಪ ತುರ್ತು ಸಭೆ; 18 ಅಂಶಗಳು

 ಉದ್ಯೋಗಕ್ಕಾಗಿ ವಿದೇಶದಲ್ಲಿ ನೆಲೆಸಿದ ಜಿಲ್ಲೆಯ ಜನರು

ಉದ್ಯೋಗಕ್ಕಾಗಿ ವಿದೇಶದಲ್ಲಿ ನೆಲೆಸಿದ ಜಿಲ್ಲೆಯ ಜನರು

ಉತ್ತರ ಕನ್ನಡ ಜಿಲ್ಲೆಯ ಹಲವರು ವಿದೇಶದಲ್ಲಿ ನೆಲೆಸಿದ್ದು, ಅದರಲ್ಲೂ ಅರಬ್ ದೇಶಗಳಲ್ಲಿ ಉದ್ಯೋಗಕ್ಕಾಗಿ ನೆಲೆಸಿರುವ ಜಿಲ್ಲೆಯ ಮೂಲದವರ ಸಂಖ್ಯೆ ಸಾಕಷ್ಟಿದೆ. ಇದರೊಂದಿಗೆ, ಪ್ರತಿದಿನ ಹಲವರು ವಿದೇಶದಿಂದ ಜಿಲ್ಲೆಗೆ ಬಂದು ವಾಪಸ್ ಹೋಗುತ್ತಿರುತ್ತಾರೆ. ಆದರೆ ಇದೀಗ ಕೊರೋನಾ ವೈರಸ್ ಮೇಲಿನ ಭಯದಿಂದ ವಿದೇಶದಿಂದ ಬರುವವರನ್ನೇ ಅನುಮಾನದಿಂದಲೇ ನೋಡುವ ಪರಿಸ್ಥಿತಿ ಎದುರಾಗಿದೆ.

 ಆಸ್ಪತ್ರೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ

ಆಸ್ಪತ್ರೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ

ಜಿಲ್ಲೆಯ ಶಿರಸಿ ತಾಲೂಕಿನ ಗ್ರಾಮವೊಂದರಲ್ಲಿ ಶುಕ್ರವಾರ ವಿದೇಶದಿಂದ ಬಂದ ವ್ಯಕ್ತಿಗೆ ಯಾವುದೇ ಸೋಂಕು ಇಲ್ಲದಿದ್ದರೂ, ಸುತ್ತಮುತ್ತಲಿನ ಮನೆಯವರು ಆತನಲ್ಲಿ ಕೊರೊನಾ ವೈರಸ್ ಇದೆ ಎನ್ನುವ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ನೀಡಿದ್ದಾರೆ. ಜನರ ದೂರಿನಿಂದ ವಿದೇಶದಿಂದ ಬಂದಿದ್ದ ವ್ಯಕ್ತಿಯ ಮನೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಒತ್ತಾಯಪೂರ್ವಕವಾಗಿ ವ್ಯಕ್ತಿಯನ್ನು ಕರೆದುಕೊಂಡು ಆಸ್ಪತ್ರೆಯಲ್ಲಿಯೇ ಇಟ್ಟಿದ್ದಾರೆ. ವಿದೇಶಕ್ಕೆ ಹೋದ ತಪ್ಪಿನಿಂದ ವೈರಸ್ ತಗುಲದಿದ್ದರೂ ಆಸ್ಪತ್ರೆಯಲ್ಲಿ ಕಳೆಯುವಂತಹ ಸ್ಥಿತಿಯನ್ನು ವ್ಯಕ್ತಿ ಒಂದೆಡೆ ಎದುರಿಸುವಂತಾಗಿದ್ದರೆ, ಇನ್ನೊಂದೆಡೆ ಆ ವ್ಯಕ್ತಿಗೆ ಕೊರೊನಾ ವೈರಸ್ ಇದೆ ಎಂದು ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಸುದ್ದಿ ಹರಡಿ ಗ್ರಾಮಸ್ಥರು ಹೆದರಿ ಕಾಲ ಕಳೆಯುವಂತಾಗಿದೆ.

ಸಾರ್ವಜನಿಕರಿಗೆ ದಾವಣಗೆರೆಯ ಗ್ಲಾಸ್ ಹೌಸ್ ಬಂದ್

 ವಿಮಾನ ನಿಲ್ದಾಣದಲ್ಲಿಯೇ ತಪಾಸಣೆ

ವಿಮಾನ ನಿಲ್ದಾಣದಲ್ಲಿಯೇ ತಪಾಸಣೆ

ವಿದೇಶದಿಂದ ಭಾರತಕ್ಕೆ ಬರುತ್ತಿದ್ದಂತೆ ಕಳೆದ ಒಂದು ವಾರದಿಂದ ವಿಮಾನ ನಿಲ್ದಾಣದಲ್ಲಿಯೇ ತಪಾಸಣೆ ಮಾಡುತ್ತಿದ್ದಾರೆ. ಒಂದೊಮ್ಮೆ ಕೊರೊನಾ ವೈರಸ್ ಪತ್ತೆಯಾದರೆ ಅಲ್ಲಿಂದಲೇ ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ. ಆದರೆ, ಕೊರೊನಾ ಭಯದಿಂದ ಜನರು ಯಾವುದೇ ಸೋಂಕಿಲ್ಲದೇ ಮನೆಗೆ ಬಂದರೂ ಆತನಿಗೆ ಸೋಂಕು ತಗುಲಿರಬಹುದು ಎಂದು ಅನುಮಾನದಿಂದ ನೋಡುತ್ತಿರುವುದರಿಂದ ವಿದೇಶದಿಂದ ವಾಪಸ್ ಬಂದವರು ಮನೆ ಬಿಟ್ಟು ಹೊರಗೆ ಹೋಗದಂತಾಗಿದೆ. ಕೊರೋನಾ ಸಂಪೂರ್ಣ ನಿಯಂತ್ರಣಕ್ಕೆ ಬಂದ ನಂತರ ಮಾತ್ರ ಜನರಲ್ಲಿ ಈಗ ಹುಟ್ಟಿರುವ ಈ ಭೀತಿ ಕಡಿಮೆಯಾಗಲಿದೆ.

 ಆತಂಕ ಬೇಡ,‌ ಮುಂಜಾಗ್ರತೆ ಇರಲಿ

ಆತಂಕ ಬೇಡ,‌ ಮುಂಜಾಗ್ರತೆ ಇರಲಿ

ಈ ಬಗ್ಗೆ ಜಿಲ್ಲೆಯ ಆರೋಗ್ಯ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಶ್ ಮೌದ್ಗಿಲ್, 'ಕೊರೊನಾ ವೈರಸ್ ಹರಡುತ್ತಿರುವ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಬದಲಾಗಿ ಮುಂಜಾಗೃತಾ ಕ್ರಮಗಳನ್ನು ಅಗತ್ಯವಾಗಿ ಕೈಗೊಳ್ಳಿ' ಎಂದು ಕರೆ ನೀಡಿದ್ದಾರೆ. ‘ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಅಂಕಿ-ಅಂಶಗಳನ್ನು ಬಿತ್ತರಿಸುತ್ತಿರುವುದು ಜನರನ್ನು ಹೆದರಿಸುವ ಕಾರಣಕ್ಕಲ್ಲ. ಎಚ್ಚೆತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ವೈರಸ್ ಹರಡದಂತೆ ತಡೆಯುವುದಕ್ಕಾಗಿ. ಹೆಚ್ಚಿನ ಜನಸಂದಣಿ ಸೇರುವ ಸಭೆ- ಸಮಾರಂಭಗಳಲ್ಲಿ ಅನವಶ್ಯಕವಾಗಿ ಭಾಗವಹಿಸದೇ, ಕೆಲವು ದಿನಗಳ ಕಾಲ ಆದಷ್ಟು ಜಾಗೃತರಾಗಿರುವುದು ಉತ್ತಮ' ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾತನಾಡಿ, ‘ಮುಂಜಾಗ್ರತಾ ಕ್ರಮವಾಗಿ ಸರಕಾರಿ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಶೀಘ್ರದಲ್ಲಿಯೇ ಪರೀಕ್ಷೆಗಳು ಮುಕ್ತಾಯಗೊಳ್ಳಲಿವೆ. ಪ್ರತಿಯೊಬ್ಬರೂ ಆರೋಗ್ಯದ ಹಿತದೃಷ್ಟಿಯಿಂದ ಹದಿನಾಲ್ಕು ದಿನಗಳ ಕಾಲ ವೈಯಕ್ತಿಕ ಕಡಿವಾಣ ಹಾಕಿಕೊಳ್ಳುವ ಅಗತ್ಯವಿದೆ' ಎಂದಿದ್ದಾರೆ.

English summary
Coronavirus has created fear among people. Especially in uttara kannada district, people are affraid of people who come from foreign countries,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X