ಕದಂಬೋತ್ಸವ ಬಿಜೆಪಿ ಪಕ್ಷದ ಉತ್ಸವವಾಗುತ್ತಿದೆ: ಸಿಎಂ ಕಾರು ಅಡ್ಡಗಟ್ಟಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಕದಂಬೋತ್ಸವವನ್ನು ಬಿಜೆಪಿ ಪಕ್ಷದ ಉತ್ಸವವನ್ನಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಆಗಮಿಸುತ್ತಿದ್ದ ರಸ್ತೆಯಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಬನವಾಸಿಯಲ್ಲಿ ನಡೆದಿದೆ.
ಕಾರವಾರ, ಫೆಬ್ರವರಿ 28: ಪಕ್ಷಾತೀತವಾಗಿ ನಡೆಸಬೇಕಾದ ಕದಂಬೋತ್ಸವವನ್ನು ಬಿಜೆಪಿ ಪಕ್ಷದ ಉತ್ಸವವನ್ನಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಆಗಮಿಸುತ್ತಿದ್ದ ರಸ್ತೆಯಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಪರಿಣಾಮ ಕೆಲ ನಿಮಿಷ ಸಿಎಂ ಸಂಚಾರಕ್ಕೆ ಅಡ್ಡಿಯಾದ ಘಟನೆ ಬನವಾಸಿಯಲ್ಲಿ ನಡೆದಿದೆ.
ಬನವಾಸಿಯಲ್ಲಿ ಆಯೋಜಿಸಲಾಗಿರುವ ಕದಂಬೋತ್ಸವ ಹಾಗೂ ಕೆರೆ ತುಂಬಿಸುವ ಯೋಜನೆ ಉದ್ಘಾಟನೆಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸುತ್ತಿದ್ದ ವೇಳೆ ಅದೇ ಮಾರ್ಗದ ರಸ್ತೆಯಲ್ಲಿಯೇ ವಿಎಸ್ ಪಾಟೀಲ್ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.

ಕದಂಬೋತ್ಸವವನ್ನು ಬಿಜೆಪಿ ಪಕ್ಷದ ಉತ್ಸವವನ್ನಾಗಿ ಮಾಡಲಾಗುತ್ತಿದೆ. ಕೇವಲ ಪಕ್ಷದ ಕಾರ್ಯಕರ್ತರನ್ನು ಆಹ್ವಾನಿಸಿ ಮಾಡಲಾಗುತ್ತಿದೆ. ಸಚಿವರು ಬಿಜೆಪಿ ಚಿಹ್ನೆಯಿರುವ ಟೀ ಶರ್ಟ್ ಹಂಚಿ ಪಕ್ಷದ ಉತ್ಸವ ಮಾಡುತ್ತಿದ್ದಾರೆ. ಕೆರೆ ತುಂಬಿಸುವ ಯೋಜನೆಗೆ ಈ ಹಿಂದೆ ಸಿದ್ದರಾಮಯ್ಯ ಅವರು ಅನುದಾನ ಒದಗಿಸಿದ್ದರು. ಆದರೆ ಇದೀಗ ಕರೆಂಟ್ ಹಾಗೂ ನೀರಿಲ್ಲದೆ ಇದ್ದರೂ ಏತ ನೀರಾವರಿ ಯೋಜನೆ ಉದ್ಘಾಟನೆ ಮಾಡಲಾಗುತ್ತಿದೆ. ಯೋಜನೆಯನ್ನು ಸಿಎಂ ಉದ್ಘಾಟನೆ ಮಾಡಿ ಅದರ ಕ್ರೆಡಿಟ್ ಪಡೆಯಲು ಶಿವರಾಮ್ ಹೆಬ್ಬಾರ್ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನು ಸಿದ್ದಾಪುರದಲ್ಲಿ ಸುದ್ದಿಗಾರರೊಂದಿಗೆ ಸರ್ಕಾರಿ ನೌಕರರ ಮುಷ್ಕರದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗ ರಚನೆ ಮಾಡಿದ್ದು ಆಯೋಗದ ಸಂಪರ್ಕದಲ್ಲಿದ್ದೇವೆ. ಬುಧವಾರದೊಳಗೆ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಸರಕಾರಿ ನೌಕರರು ನಮ್ಮವರು, ವೇತನ ಆಯೋಗದ ಜೊತೆ ಸಂಪರ್ಕದಲ್ಲಿದ್ದೇವೆ. ವರದಿ ತರಿಸಿ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಇವತ್ತು ಸಂಜೆ ಹೊರಟು ಹಿರಿಯ ಅಧಿಕಾರಿಗಳು ಹಾಗೂ ಆಯೋಗದ ಜೊತೆಗೆ ಮಾತನಾಡಿ ಸಮಸ್ಯೆ ಇತ್ಯರ್ಥಪಡಿಸುವ ಪ್ರಯತ್ನ ಮಾಡುತ್ತೇನೆ. ಎಸ್ಮಾ ಜಾರಿ ಮಾಡುವಂಥ ಪರಿಸ್ಥಿತಿ ಬಂದಿಲ್ಲ, ಆ ಬಗ್ಗೆ ಯೋಚನೆ ಮಾಡಿಲ್ಲ. ಆಯೋಗ ರಚನೆ ಆದಮೇಲೆ ವೇತನ ಕೊಡಲೇಬೇಕಾಗುತ್ತದೆ. ನಾಳೆ ಎಲ್ಲವೂ ಬಗೆಹರಿಯುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.
ಅಬಕಾರಿ ಹಗರಣ ದಾಖಲೆ ನೀಡಲಿ, ತನಿಖೆಗೆ ಸಿದ್ಧ
ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಆರೋಪದ ಬಗ್ಗೆ ವಿವರ ಕೊಡಲಿ. ತನಿಖೆ ಮಾಡೋಣ. ಯಾವುದೇ ತನಿಖೆಗೂ ನಾನು ಸಿದ್ಧನಿದ್ದೇನೆ. ಈ ಬಗ್ಗೆ ಪ್ರಶ್ನೆಯೇ ಇಲ್ಲ. ಆಧಾರವಿಲ್ಲದೆ ಆರೋಪ ಮಾಡಬಾರದು. ಪ್ರಿಯಾಂಕ್ ಖರ್ಗೆಯವರ ಮೇಲೂ ಬಹಳಷ್ಟು ಆರೋಪವಿದೆ. ಲೋಕಾಯುಕ್ತಕ್ಕೆ ದೂರು ನೀಡಲಿ, ತನಿಖೆಯಾಗಲಿ ಎಂದಿದ್ದಾರೆ.












Click it and Unblock the Notifications